ADVERTISEMENT

ಹದಗೆಟ್ಟ ಗ್ರಾಮೀಣ ಭಾಗದ ರಸ್ತೆ; ಸಂಚಾರ ದುಸ್ತರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 7:31 IST
Last Updated 29 ಆಗಸ್ಟ್ 2024, 7:31 IST
ವರ್ಷಗಳ ಹಿಂದೆ ಮಳೆ ನೀರಿಗೆ ಕೊರಕಲು ಬಿದ್ದ ಬಳಗೋಡ ಮತ್ತು ಶಾಂತಗೇರಿಯ ಮಧ್ಯದ ರಸ್ತೆ
ವರ್ಷಗಳ ಹಿಂದೆ ಮಳೆ ನೀರಿಗೆ ಕೊರಕಲು ಬಿದ್ದ ಬಳಗೋಡ ಮತ್ತು ಶಾಂತಗೇರಿಯ ಮಧ್ಯದ ರಸ್ತೆ   

ರೋಣ: ತಾಲ್ಲೂಕಿನ ವಿವಿಧ ಭಾಗಗಳನ್ನು ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಬಂಧಿಸಿದ ಇಲಾಖೆಗಳು ದುರಸ್ತಿಗೆ ಈವರೆಗೂ ಗಮನಹರಿಸಿಲ್ಲ. ಇದರಿಂದಾಗಿ ತಾಲ್ಲೂಕಿನ ವಿವಿಧ ಭಾಗಗಳಿಂದ ಬರುವ ಪ್ರಯಾಣಿಕರು ಸೇರಿದಂತೆ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.

ತಾಲ್ಲೂಕು ಕೇಂದ್ರವಾದ ರೋಣದಿಂದ ಹಿರೇಹಾಳ, ಗದಗ– ಬಾದಾಮಿ ರಾಜ್ಯ ಹೆದ್ದಾರಿಯೂ ಅಲ್ಲಲ್ಲಿ ಹಾಳಾಗಿದ್ದು ಮಳೆಗಾಲದ ವೇಳೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರಸ್ತೆಗಳಲ್ಲಿ ನೀರು ನಿಲ್ಲುತ್ತಿದ್ದು ದಿನದಿಂದ ದಿನಕ್ಕೆ ಹಾಳಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಹಿರೇಹಾಳದಿಂದ ಶಾಂತಗಿರಿ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಎರಡು ವರ್ಷಗಳ ಹಿಂದೆಯೇ ಅನುಮೋದನೆ ನೀಡಿ, ಟೆಂಡರ್ ಪ್ರಕ್ರಿಯೆ ಮುಗಿದರೂ ಇನ್ನೂ ರಸ್ತೆ ನಿರ್ಮಿಸಲು ಸಾಧ್ಯವಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಪ್ರತಿನಿತ್ಯ ಬಳಗೋಡ ಶಾಂತಗೇರಿಯಿಂದ ರೋಣಕ್ಕೆ ಬರುವ ಪ್ರಯಾಣಿಕರು ಕಾಲ್ನಡಿಗೆ ಮೂಲಕ ಹಿರೇಹಾಳ ತಲುಪಬೇಕು ಅಥವಾ ಶಾಂತಗಿರಿಯಿಂದ ಬೇಲೂರು ತಲುಪಿ ಅಲ್ಲಿಂದ ರೋಣಕ್ಕೆ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಬಳಗೋಡ ಮತ್ತು ಶಾಂತಗಿರಿಯ ಮಧ್ಯದ ರಸ್ತೆ ಸಂಪೂರ್ಣ ಹಾಳಾಗಿದ್ದು ಮಳೆ ನೀರಿನಿಂದಾಗಿ ಕೊರಕಲು ಬಿದ್ದು, ಅಪಾಯ ಆಹ್ವಾನಿಸುತ್ತಿದೆ. ರಸ್ತೆ ಅವಸ್ಥೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅವರು ಹಿಡಿಯಷ್ಟು ಗರಸು ಹಾಕುವ ಮೂಲಕವಾದರೂ ಸರಿಪಡಿಸಿ ವಾಹನ ಸವಾರರ ಸುರಕ್ಷತೆಗೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ರಸ್ತೆ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರು ಕೇವಲ ಗರಸು ಸುರವಿ ಹೋಗಿದ್ದು ಬಿಟ್ಟರೆ ಇದುವರೆಗೂ ಡಾಂಬರೀಕರಣ ಕೈಗೊಂಡಿಲ್ಲ. ಇದರಿಂದಾಗಿ ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗಿದ್ದು ಬಳಗೋಡ ಗ್ರಾಮದಿಂದ ರೋಣ ನಗರದ ಶಾಲಾ- ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಪ್ರತಿನಿತ್ಯ ಬಳಗೋಡದಿಂದ ಮೂರ್ನಾಲ್ಕು ಕಿಲೋ ಮೀಟರ್‌ ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ಹಿರೇಹಾಳದಿಂದ ಹೊನ್ನಿಗನೂರು, ಹಿರೇಹಾಳ ಮಾಡಲಗೇರಿ, ರೋಣದಿಂದ ಜಿಗಳೂರು, ಕಳಕಾಪುರ, ಕುರಹಟ್ಟಿ ಸಂಪರ್ಕಿಸುವ ರಸ್ತೆಗಳ ಸ್ಥಿತಿ ಕೂಡ ಇದೇ ಆಗಿದೆ. ಅಲ್ಲಿನ ಗ್ರಾಮಸ್ಥರು ಸಹಿತ ಹದಗೆಟ್ಟ ರಸ್ತೆಗಳಿಂದ ಬಸ್ ಸಂಪರ್ಕವಿಲ್ಲದೆ ತೊಂದರೆ ಪಡುತ್ತಿದ್ದಾರೆ.

ತಾಲ್ಲೂಕಿನ ಬಳಗೋಡ ಹೂನ್ನಿಗನೂರು ಭಾಗದಾದ್ಯಂತ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು ಅತಿ ಭಾರದ ಟ್ರ್ಯಾಕ್ಟರ್, ಟಿಪ್ಪರ್ ಲಾರಿಗಳು ಓಡಾಡುತ್ತಿರುವುದರಿಂದ ರಸ್ತೆಗಳು ಸುಸ್ಥಿತಿಯಲ್ಲಿ ಉಳಿಯುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದ್ದು ಶೀಘ್ರವೇ ರಸ್ತೆಗಳ ದುರಸ್ತಿಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗುಣಮಟ್ಟದ ರಸ್ತೆ ನಿರ್ಮಾಣದ ಭರವಸೆ
‘ಹಿರೇಹಾಳದಿಂದ ಬಳಗೋಡ ಗ್ರಾಮದವರೆಗಿನ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಬಲವಂತ ನಾಯ್ಕರ ತಿಳಿಸಿದ್ದಾರೆ. ‘ತಾಲ್ಲೂಕಿನ ವಿವಿಧ ಗ್ರಾಮಗಳ ರಸ್ತೆಗಳು ಹಾಳಾಗಿದ್ದು ಸದ್ಯ ಮಳೆ ಬೀಳುತ್ತಿರುವುದರಿಂದ ತಾತ್ಕಾಲಿಕ ರಿಪೇರಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿಯೇ ಟೆಂಡರ್ ಕರೆದು ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ. ,
ರಸ್ತೆ ಸಂಪೂರ್ಣ ಹಾಳಾಗಿದೆ. ಎರಡು ವರ್ಷಗಳ ಹಿಂದೆ ಟೆಂಡರ್ ಕರೆದರೂ ಇವತ್ತಿನವರೆಗೂ ಕೆಲಸ ಪೂರ್ಣಗೊಳಿಸದೆ ಅತಂತ್ರ ಗೊಳಿಸಿದ್ದು ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗಿದೆ.
–ಶರಣಪ್ಪ ಪ್ಯಾಟಿ, ಬಳಗೋಡ ಗ್ರಾಮಸ್ಥ
ನಮ್ಮ ಗ್ರಾಮದಿಂದ ಹಿರೇಹಾಳ ಗ್ರಾಮದವರೆಗೆ 4 ಕಿ.ಮೀ ನಡೆದುಕೊಂಡು ಹೋಗಿ ಬರಬೇಕು. ವಾಪಸ್ ಮತ್ತೇ ನಡೆದುಕೊಂಡೆ ಬರಬೇಕು. ಹೀಗಾಗಿ ಕಾಲೇಜಿಗೆ ಹೋಗಲು ಬೇಡ ಎನ್ನುತ್ತಿದ್ದಾರೆ.
–ಶಾರದಾ, ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.