ADVERTISEMENT

Deepavali 2025 | ಕುಂಬಾರರ ಬಾಳು ಬೆಳಗದ ದೀಪಾವಳಿ

ಪಿಂಗಾಣಿ ಹಣತೆ ಮಾರುಕಟ್ಟೆಗೆ ಲಗ್ಗೆ: ಮಣ್ಣಿನ ಹಣತೆಗೆ ಬೇಡಿಕೆ ಕಡಿಮೆ

ನಾಗರಾಜ ಎಸ್‌.ಹಣಗಿ
Published 21 ಅಕ್ಟೋಬರ್ 2025, 2:40 IST
Last Updated 21 ಅಕ್ಟೋಬರ್ 2025, 2:40 IST
ಲಕ್ಷ್ಮೇಶ್ವರದ ಫಕ್ಕೀರಪ್ಪ ಕುಂಬಾರ ಅವರು ತಮ್ಮ ನಿವಾಸದಲ್ಲಿ ಮಣ್ಣಿನ ಹಣತೆ ಮಾರಾಟಕ್ಕೆ ಇಟ್ಟಿರುವ ದೃಶ್ಯ
ಲಕ್ಷ್ಮೇಶ್ವರದ ಫಕ್ಕೀರಪ್ಪ ಕುಂಬಾರ ಅವರು ತಮ್ಮ ನಿವಾಸದಲ್ಲಿ ಮಣ್ಣಿನ ಹಣತೆ ಮಾರಾಟಕ್ಕೆ ಇಟ್ಟಿರುವ ದೃಶ್ಯ   

ಲಕ್ಷ್ಮೇಶ್ವರ: ನಾಡಿನಾದ್ಯಂತ ಆಚರಿಸುವ ದೀಪಾವಳಿ ಹಬ್ಬಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಎಲ್ಲ ಹಬ್ಬಗಳು ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಿಶೇಷವಾಗಿ ಕುಂಬಾರರಿಗೂ ಹಿಂದೂ ಧರ್ಮದ ಹಬ್ಬಗಳಿಗೂ ಅವಿನಾಭಾವ ಸಂಬಂಧ ಉಂಟು. ಮಣ್ಣೆತ್ತಿನ ಅಮವಾಸ್ಯೆಯಿಂದ ಹಿಡಿದು ದೀಪಾವಳಿ ಅಮವಾಸ್ಯೆವರೆಗೂ ಕುಂಬಾರರು ತಯಾರಿಸಿದ ಕರಕುಶಲ ವಸ್ತುಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.

ಮಣ್ಣೆತ್ತಿನ ಅಮವಾಸ್ಯೆಯಲ್ಲಿ ಎತ್ತುಗಳು, ಶ್ರಾವಣ ಮಾಸದಲ್ಲಿ ನಾಗಪ್ಪ, ಚತುರ್ಥಿಯಲ್ಲಿ ಗಣಪತಿ, ದೀಪಾವಳಿ ಹಬ್ಬದಲ್ಲಿ ಮಣ್ಣಿನ ಹಣತೆ ಹಾಗೂ ಲಕ್ಷ್ಮಿ ದೇವಿ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತಿತ್ತು. ಆದರೆ ಆಧುನಿಕತೆ ಪರಿಣಾಮ ಕುಂಬಾರರು ಸಿದ್ಧಪಡಿಸುವ ವಸ್ತುಗಳು ಒಂದೊಂದಾಗಿ ಮೂಲೆ ಗುಂಪು ಸೇರುತ್ತಿದ್ದು, ಮಣ್ಣಿನ ಹಣತೆಗಳು ಅದೇ ಸಾಲಿನಲ್ಲಿ ಬಂದು ನಿಂತಿವೆ.

ದೀಪಾವಳಿ ಹಬ್ಬದಲ್ಲಿ ಮನೆಯ ತುಂಬ ಮಣ್ಣಿನ ಹಣತೆ ಹಚ್ಚಲಾಗುತ್ತಿದ್ದು, ಆಗ ಕುಂಬಾರರು ತಯಾರಿಸುತ್ತಿದ್ದ ಮಣ್ಣಿನ ಹಣತೆಗಳಿಗೆ ಬೇಡಿಕೆ ಹೆಚ್ಚಿತ್ತು. ಇದೀಗ ಪಿಂಗಾಣಿ ಹಣತೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಕಾರಣ ಕುಂಬಾರರು ಕೆಲಸ ಇಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಕೆಲವು ಸಂಪ್ರದಾಯಸ್ಥ ಕುಟುಂಬದವರು ಈಗಲೂ ಕುಂಬಾರರ ಮಣ್ಣಿನ ಹಣತೆಗಳನ್ನೇ ಬಳಸುತ್ತಾರೆ.

ADVERTISEMENT

‘20 ವರ್ಷಗಳ ಹಿಂದೆ ನಾವು ತಯಾರಿಸುತ್ತಿದ್ದ ಮಣ್ಣಿನ ಹಣತೆಗಳಿಗೆ ಹೆಚ್ಚು ಬೇಡಿಕೆ ಇತ್ತು. ಆಗ ಹಗಲೂ ರಾತ್ರಿ ಕೆಲಸ ಇರುತ್ತಿತ್ತು. ಇದೀಗ ನಮ್ಮ ಪಣತಿಗಳನ್ನು ಕೇಳುವವರೇ ಇಲ್ಲ. ಬೇಕಾದವರು ಮಾತ್ರ ಮನೆಗೆ ಬಂದು ಹಣತೆ ಖರೀದಿಸಿಕೊಂಡು ಹೋಗುತ್ತಾರೆ’ ಎಂದು ಫಕ್ಕೀರಪ್ಪ ಕುಂಬಾರ ಅವಲತ್ತುಕೊಂಡರು.

ಮಣ್ಣಿನಿಂದ ತಯಾರಿಸಿದ ಸಣ್ಣ ಗಾತ್ರದ ಐದು ಹಣತೆಗಳು ₹10ರಂತೆ ದೊಡ್ಡ ಗಾತ್ರದ ಹಣತೆ ₹5ಕ್ಕೆ ಒಂದರಂತೆ ಮಾರಾಟ ಆಗುತ್ತಿವೆ
ಫಕ್ಕೀರಪ್ಪ ಕುಂಬಾರ ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.