ADVERTISEMENT

ಸ್ಪರ್ಧಾ ಮನೋಭಾವ ಹೆಚ್ಚಿಸುವ ಪ್ರತಿಭಾಕಾರಂಜಿ: ಸರ್ಫರಾಜ ಉಮಚಗಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:28 IST
Last Updated 18 ಡಿಸೆಂಬರ್ 2025, 2:28 IST
ಗದಗ ಶಹರದ ಅಂಜುಮನ್ ಉರ್ದು ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ನಡೆದ ಪ್ರತಿಭಾಕಾರಂಜಿ, ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ‌ ಸರ್ಫರಾಜ ಅಹ್ಮದ ಎಸ್.ಉಮಚಗಿ ಮಾತನಾಡಿದರು 
ಗದಗ ಶಹರದ ಅಂಜುಮನ್ ಉರ್ದು ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ನಡೆದ ಪ್ರತಿಭಾಕಾರಂಜಿ, ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ‌ ಸರ್ಫರಾಜ ಅಹ್ಮದ ಎಸ್.ಉಮಚಗಿ ಮಾತನಾಡಿದರು    

ಗದಗ: ‘ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ನಾಯಕತ್ವ ಗುಣ, ಅಭಿವ್ಯಕ್ತಿ ಸಾಮರ್ಥ್ಯ ಮತ್ತು ಸೃಜನಶೀಲತೆ ಬೆಳೆಸುತ್ತವೆ’ ಎಂದು ಆಂಗ್ಲೋ ಉರ್ದು ಸ್ಕೂಲ್ ಕಮಿಟಿ ಅಧ್ಯಕ್ಷ ಸರ್ಫರಾಜ್‌ ಅಹ್ಮದ ಎಸ್.ಉಮಚಗಿ ಹೇಳಿದರು.

ಶಹರದ ಅಂಜುಮನ್ ಉರ್ದು ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಸಮಗ್ರ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಗದಗ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ನಡೆದ ಎಂಟನೇ ಕ್ಲಸ್ಟರ್ ವಿಭಾಗದ ಉರ್ದು ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಪ್ರತಿಭಾಕಾರಂಜಿ, ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ‌ ಮಾತನಾಡಿದರು.

ಉರ್ದು ಕೇವಲ ಒಂದು ಭಾಷೆಯಲ್ಲ, ಅದು ಸಹಬಾಳ್ವೆ, ಸಹಿಷ್ಣುತೆ ಹಾಗೂ ಸಂಸ್ಕೃತಿಯ ಸಂಕೇತವಾಗಿದೆ. ಗೆಲುವು ಸೋಲು ಜೀವನದ ಭಾಗ. ಆದರೆ ಪ್ರಯತ್ನವೇ ನಿಮ್ಮ ನಿಜವಾದ ಜಯ ಎಂದರು.

ADVERTISEMENT

ಉರ್ದು ಭಾಷಣ, ಪ್ರಬಂಧ, ಕವನ ಪಠಣ, ನಾಟಕ, ಚಿತ್ರಕಲೆ, ಸಾಮಾನ್ಯ ಜ್ಞಾನ, ಕವ್ವಾಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ಹಾಗೂ ಪ್ರಶಂಸಾಪತ್ರ ವಿತರಿಸಲಾಯಿತು.

ಬಿಆರ್‌ಪಿ ಎಸ್‌.ಬಿ.ಪ್ರಭಯ್ಯನಮಠ, ಬಿಆರ್‌ಸಿ ಶಫೀ ಯರಗುಡಿ, ಸಿಆರ್‌ಪಿ ಖಲೀಲ ಜಲಗೇರಿ, ಆ್ಯಂಗ್ಲೋ ಉರ್ದು ಸ್ಕೂಲ್ ಕಮಿಟಿಯ ಸದಸ್ಯ ಶಾಹನವಾಜ ಉಮಚಗಿ, ಎ.ಎಂ.ಮುಲ್ಲಾ, ಆರ್.ಎಲ್.‌ಬಾಗಲಕೋಟ, ಕೆ.ಎಂ.ಶೇಖ್‌, ಜೀಲಾನಿ ಉಮಚಗಿ, ಮಹ್ಮದ ಇಕ್ಬಾಲ್ ಹಣಗಿ, ಎಸ್.ಎ.ಬಿಜಾಪೂರ ಸೇರಿದಂತೆ ಎಂಟನೇ ಕ್ಲಸ್ಟರ್ ಮಟ್ಟದ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

ಆಧುನೀಕತೆ ತಂತ್ರಜ್ಞಾನದ ಭರಾಟೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಜನಪದ ಕವ್ವಾಲಿ ಸೇರಿದಂತೆ ಸಾಂಪ್ರದಾಯಿಕ ಕಲೆಗಳನ್ನು ಮರೆಯುತ್ತಿದ್ದಾರೆ. ಮಕ್ಕಳಲ್ಲಿ ವಿದ್ಯೆಯ ಜತೆಗೆ ಸಹಪಠ್ಯ ಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು
–ರವೀಂದ್ರ ಶೆಟ್ಟಿಪ್ಪನವರ, ಗದಗ ಶಹರ ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.