ADVERTISEMENT

ಅಹಿಂದ ಮತ ಭದ್ರ ಎಂಬ ಭ್ರಮೆಯಲ್ಲಿ ಕಾಂಗ್ರೆಸ್‌: ಅನಿಲ್‌ ಮೆಣಸಿನಕಾಯಿ

ಬಿಜೆಪಿ ಮುಖಂಡ ಅನಿಲ್‌ ಮೆಣಸಿನಕಾಯಿ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 15:51 IST
Last Updated 1 ಮೇ 2024, 15:51 IST
ಅನಿಲ್‌ ಮೆಣಸಿನಕಾಯಿ
ಅನಿಲ್‌ ಮೆಣಸಿನಕಾಯಿ   

ಗದಗ: ‘ಅಹಿಂದ ಮತಗಳು ತನ್ನ ಜೇಬಿನಲ್ಲಿವೆ ಎಂಬ ಭ್ರಮೆ ಕಾಂಗ್ರೆಸ್‌ಗೆ ಇದೆ. ಆದರೆ, ಅಹಿಂದ ಒಲವು ಬಿಜೆಪಿ ಮೇಲಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಪಕ್ಷಕ್ಕೆ ಇನ್ನಾವುದೇ ಅಸ್ತ್ರ ಉಳಿದಿಲ್ಲ’ ಎಂದು ಬಿಜೆಪಿ ಮುಖಂಡ ಅನಿಲ್‌ ಮೆಣಸಿನಕಾಯಿ ಟೀಕಿಸಿದರು.

‘ಕಾಂಗ್ರೆಸ್‌ ಪಕ್ಷ ಸುಡುವ ಮನೆ ಇದ್ದಂತೆ. ಅಲ್ಲಿಗೆ ಹೋದವರೆಲ್ಲಾ ಸುಟ್ಟು ಹೋಗುತ್ತಾರೆ. ಕಾಂಗ್ರೆಸ್‌ನವರು ಅಲ್ಪಸಂಖ್ಯಾತರು, ಹಿಂದುಳಿದವರರನ್ನು ಮತ ಬ್ಯಾಂಕ್‌ ಮಾಡಿಕೊಂಡಿದೆಯೇ ಹೊರತು, ಅವರನ್ನು ಅಭಿವೃದ್ಧಿ ಮಾಡುವ ಇಚ್ಛೆ ಹೊಂದಿಲ್ಲ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕಾಂಗ್ರೆಸ್‌ ದಲಿತರನ್ನು ಮತಕ್ಕಾಗಿ ಬಳಸಿಕೊಂಡಿರುವ ಸ್ಪಷ್ಟ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಆ ಸಮುದಾಯಗಳಲ್ಲಿ ಇಂದು ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದ್ದು, ಸರಿ ತಪ್ಪಿನ ವಿಶ್ಲೇಷಣೆಯನ್ನು ಯುವಜನರು ಮಾಡುತ್ತಿದ್ದಾರೆ. ಹಾಗಾಗಿ, ಅಹಿಂದ ಮತದಾರರು ಬಿಜೆಪಿಯತ್ತ ಬರುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕೇಂದ್ರದ ಬಿಜೆಪಿ ಸರ್ಕಾರವು ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಂಚ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿತು. ಹೀಗೆ ದಲಿತ, ಹಿಂದುಳಿದ ಸಮುದಾಯಕ್ಕೆ ಬಿಜೆಪಿ ಬೆಂಬಲ ನೀಡುತ್ತಲೇ ಬಂದಿದೆ’ ಎಂದು ಹೇಳಿದರು.

‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದು ಬಿಜೆಪಿ ಸಿದ್ಧಾಂತ. ಷರೀಫರ ನಾಡಿನಿಂದ ಬಂದಿರುವ ಬೊಮ್ಮಾಯಿ, ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡವರು. ಅವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಯೋಜನೆಗಳು ರಾಜ್ಯದ ಎಲ್ಲ ವರ್ಗದ ಜನರ ಬದುಕನ್ನು ಮೇಲಕ್ಕೆತ್ತಿವೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಾಗಿ ನಾಯಕರು ಗ್ಯಾರಂಟಿ ಕಾರ್ಡ್‌ಗಳನ್ನು ಹಂಚುತ್ತಿದ್ದಾರೆ. ಆದರೆ, ನಮ್ಮ ಹೆಣ್ಣುಮಕ್ಕಳಿಗೆ ಗ್ಯಾರಂಟಿ ಕಾರ್ಡ್‌ಗಳು ಬೇಡವಾಗಿದ್ದು, ಅವುಗಳನ್ನು ಹರಿದು ಎಸೆಯುತ್ತಿದ್ದಾರೆ. ಗ್ಯಾರಂಟಿ ಕಾರ್ಡ್‌ಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಿಕೊಡಲಾಗುವುದು’ ಎಂದು ಹೇಳಿದರು.

ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಮುಳಗುಂದ, ಮುಖಂಡರಾದ ಅನಿಲ ಅಬ್ಬಿಗೇರಿ, ಕಾಂತಿಲಾಲ್ ಬನ್ಸಾಲಿ, ರಮೇಶ್, ಗಣೇಶ ಹುಬ್ಬಳ್ಳಿ, ವಿಜಯಲಕ್ಷ್ಮಿ ಮಾನ್ವಿ ಇದ್ದರು.

ಮೇ 3 4ರಂದು ಸಮಾವೇಶ ಮೇ 3ರಂದು ಬಿಜೆಪಿ ಮುಖಂಡ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬೆಟಗೇರಿಯಲ್ಲಿ ಸಮಾವೇಶ ಹಾಗೂ ಮೇ 4ರಂದು ಚಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಗ್ರಾಮೀಣ ಭಾಗದಲ್ಲಿ ಸಮಾವೇಶ ನಡೆಯಲಿದೆ. ದಲಿತ ಸಮುದಾಯಗಳ ಜತೆ ಚರ್ಚೆ ಸಂವಾದ ನಡೆಯಲಿದೆ ಎಂದು ಅನಿಲ್‌ ಮೆಣಸಿನಕಾಯಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.