ADVERTISEMENT

ಮುಂಡರಗಿ|ಕೃಷಿಯಲ್ಲಿ ಕೋಟಿ ಪಡೆಯುವ ರೈತ: ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಸಾಧನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 4:49 IST
Last Updated 17 ಅಕ್ಟೋಬರ್ 2025, 4:49 IST
ಮುಂಡರಗಿ ತಾಲ್ಲೂಕಿನ ನಾಗರಳ್ಳಿ ಗ್ರಾಮದ ತಮ್ಮ ತೋಟದಲ್ಲಿ ಬೆಳೆದ ಕಾಫಿ ಬೆಳೆಯೊಂದಿಗೆ  ರೈತ ಈಶ್ವರಪ್ಪ ಹಂಚಿನಾಳ
ಮುಂಡರಗಿ ತಾಲ್ಲೂಕಿನ ನಾಗರಳ್ಳಿ ಗ್ರಾಮದ ತಮ್ಮ ತೋಟದಲ್ಲಿ ಬೆಳೆದ ಕಾಫಿ ಬೆಳೆಯೊಂದಿಗೆ  ರೈತ ಈಶ್ವರಪ್ಪ ಹಂಚಿನಾಳ   

ಮುಂಡರಗಿ: ತಾಲ್ಲೂಕಿನ ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಅವರು ದೀರ್ಘಾವಧಿ ಫಸಲು ನೀಡುವ ಬೆಳೆಗಳ ಮೂಲಕ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

ತಾಲ್ಲೂಕಿನ ನಾಗರಳ್ಳಿ ಗ್ರಾಮ ಸೇರಿದಂತೆ ಅಕ್ಕ–ಪಕ್ಕದಲ್ಲಿ ಸುಮಾರು 90 ಎಕರೆ ಜಮೀನು ಹೊಂದಿರುವ ಈಶ್ವರಪ್ಪ, ಅವರು 30 ಎಕರೆ ಜಮೀನಿನಲ್ಲಿ ಗೋಡಂಬಿ, 35 ಎಕರೆ ಜಮೀನಿನಲ್ಲಿ ದಾಳಿಂಬೆ, 15 ಎಕರೆ ಅಡಿಕೆ ಹಾಗೂ ಕಾಫಿ ಮೊದಲಾದ ದೀರ್ಘಾವಧಿ ಫಸಲು ನೀಡುವ ಮರಗಳನ್ನು ನೆಟ್ಟಿದ್ದಾರೆ.  

ಪ್ರತಿ ವರ್ಷ ದಾಳಿಂಬೆ ಬೆಳೆಯೊಂದರಿಂದಲೇ ಈಶ್ವರಪ್ಪ ಅವರು ಕೋಟ್ಯಂತರ ರೂಪಾಯಿ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಗೋಡಂಬಿಯು ಫಲ ನೀಡುತ್ತಿದ್ದು, ಎಕರೆಗೆ ವಾರ್ಷಿಕ ₹25,000 ಪಡೆಯುತ್ತಿದ್ದಾರೆ.

ADVERTISEMENT

‘ಈಚೆಗೆ 15 ಎಕರೆ ಜಮೀನಿನಲ್ಲಿ ಅಡಿಕೆ ಬೆಳೆದಿದ್ದು, ಫಸಲು ಬರಬೇಕಿದೆ. ಅಡಿಕೆ ಗಿಡಗಳ ಮಧ್ಯದಲ್ಲಿ ಕಾಫಿ ಗಿಡಗಳನ್ನು ನೆಟ್ಟಿದ್ದು, ಅವು ಸೊಗಸಾಗಿ ಬೆಳೆದಿವೆ. ಜೊತೆಗೆ ತೋಟದಲ್ಲಿ 15 ಹಸುಗಳನ್ನು ಸಾಕಿದ್ದು, ಅವುಗಳಿಂದ ನಿರಂತರ ಆದಾಯ ಬರುತ್ತಿದೆ.

ತಮ್ಮ ಜಮೀನಿಗೆ ಹತ್ತಿರದ ತುಂಗಭದ್ರಾ ನದಿಯ ನೀರನ್ನು ಬಳಸಿಕೊಂಡು ಉತ್ತಮ ಬೆಳೆಯನ್ನು ಪಡೆದುಕೊಳ್ಳುತ್ತಿದ್ದಾರೆ. ನದಿ ನೀರು ಹಾಯದ ಜಮೀನುಗಳಲ್ಲಿ ಕೊಳವೆ ಬಾವಿಗಳನ್ನು ತೋಡಿಸಿದ್ದು, ಅವುಗಳಿಂದ ಪೈರಿಗೆ ನಿಯಮಿತವಾಗಿ ನೀರು ಒದಗಿಸುತ್ತಾರೆ. ಅವರ ಜಮೀನಿನಲ್ಲಿ ನಿತ್ಯ 40-50 ಕೃಷಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೃಷಿಯಲ್ಲಿ ಅಪಾರ ಅನುಭವ ಹಾಗೂ ಜ್ಞಾನ ಹೊಂದಿರುವ ಈಶ್ವರಪ್ಪನವರು ಕೃಷಿಯಲ್ಲಿ ಸದಾ ಹೊಸತನಕ್ಕೆ ಹಂಬಲಿಸುತ್ತಾರೆ.  ಹೊಸ, ಹೊಸ ಕೃಷಿ ಪ್ರಯೋಗಗಳನ್ನು ಅಳವಡಿಸಿಕೊಳ್ಳುವ ಅವರು ಕೃಷಿಯಿಂದಲೇ ವಾರ್ಷಿಕ ₹1.25 ಕೋಟಿ ಆದಾಯ ಪಡೆಯುತ್ತಿದ್ದಾರೆ.  

ಹಲವು ದಶಕಗಳಿಂದ ಕೃಷಿ ಕಾಯಕದಲ್ಲಿ ತೊಡಗಿರುವ ಈಶ್ವರಪ್ಪ ಅವರಿಗೆ ರಾಜ್ಯ ಸರ್ಕಾರವು ಅವರಿಗೆ ‘ಕೃಷಿ ಪಂಡಿತ’ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಗೋಡಂಬಿ ಕೃಷಿ ಸಾಧನೆ ಪರಿಗಣಿಸಿ ತಮಿಳುನಾಡಿನ ಎ.ಐ.ಸಿ.ಎ.ಕಂಪನಿಯು ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.

ನಾಡಿನ ವಿವಿಧ ಸಂಘ, ಸಂಸ್ಥೆಗಳು ಅವರನ್ನು ಗೌರವಿಸಿವೆ. ನಾಡಿನ ವಿವಿಧ ಭಾಗಗಳ ಕೃಷಿ ಮೇಳಗಳಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದ್ದಾರೆ.  

ರಾಜ್ಯ ಸರ್ಕಾರ ರೈತರಿಗೆ ನಿರಂತರ ತ್ರಿಪೀಸ್ ವಿದ್ಯುತ್ ಹಾಗೂ ನೀರು ಪೂರೈಸಿದರೆ ಎಲ್ಲ ರೈತರು ಶ್ರೀಮಂತರಾಗುತ್ತಾರೆ. ಈ ಕುರಿತು ಯಾವ ಸರ್ಕಾರಗಳು ಗಮನ ಹರಿಸದಿರುವುದು ದುರ್ದೈವ
ಈಶ್ವರಪ್ಪ ಹಂಚಿನಾಳ ಪ್ರಗತಿಪರ ರೈತ ನಾಗರಳ್ಳಿ