ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯವು ವಿವಿಧ ಸಂಘಟನೆಗಳ ಜತೆಗೂಡಿ ನಡೆಸುತ್ತಿರುವ ಅಹೋರಾತ್ರಿ ಧರಣಿ 11ನೇ ದಿನಕ್ಕೆ ಕಾಲಿಟ್ಟಿದೆ.
ಯಲಿಶಿರುಂಜ, ಅತ್ತಿಕಟ್ಟಿ ತಾಂಡಾ, ಬೂದಿಹಾಳ, ಕುಂದ್ರಳ್ಳಿ, ಯಲ್ಲಾಪುರ ತಾಂಡಾ, ನಾಗರಸಕೊಪ್ಪ, ಕಣವಿ ತಾಂಡಾಗಳ ನೂರಾರು ಬಂಜಾರರು ಬುಧವಾರ ಎತ್ತಿನ ಬಂಡಿಯಲ್ಲಿ ಉಪ್ಪು ತುಂಬಿಕೊಂಡು ನಗರದ ಕಿತ್ತೂರು ರಾಣಿಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಲವಣ ಮಾರುವುದರ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಳಮೀಸಲಾತಿ ವರ್ಗೀಕರಣದಲ್ಲಿ ಬಂಜಾರ ಸಮುದಾಯಕ್ಕೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.
ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ್ ಅಂಗಡಿ ಮಾತನಾಡಿ, ‘ಬಂಜಾರ ಜನಾಂಗ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಬಂಜಾರರು ಹಿಂದಿನ ಕಾಲದಲ್ಲಿ ಊರಿಂದ ಊರಿಗೆ ಹೋಗಿ ಲವಣ ಮಾರಿ ಜೀವನ ಸಾಗಿಸುತ್ತಿದ್ದರು. ಆದರೆ, ಸರ್ಕಾರ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ಮಾಡಿ ಬಂಜಾರ ಸಮುದಾಯದ ಭವಿಷ್ಯಕ್ಕೆ ಮರಣ ಶಾಸನ ಬರೆದಿದೆ’ ಎಂದು ಹರಿಹಾಯ್ದರು.
ಸರ್ಕಾರದ ಬಂಜಾರ ವಿರೋಧಿ ನೀತಿ ಖಂಡಿಸಿ ಸೇವಾಲಾಲ ನಗರ, ಹುಲಕೋಟಿ, ಜಾಲವಾಡಗಿ, ಶೆಟ್ಟಿಗೇರಿ, ನೀಲೂಗಲ್, ದೊಡ್ಡೂರ, ನೆಲ್ಲೂರ ತಾಂಡಾಗಳ ಬಂಜಾರರು ಗುರುವಾರ ಬೆಳಿಗ್ಗೆ 11ಕ್ಕೆ ದಂಡ್ ಚಳವಳಿ (ಹೊಳಿ ಲೆಂಗಿ) ನಡೆಸುವರು ಎಂದು ತಿಳಿಸಿದರು.
ಕೊಲಂಬೊ ಮುಖಂಡರಾದ ಕೆ.ಸಿ.ನಭಾಪುರ, ಐ.ಎಸ್.ಪೂಜಾರ, ಟಿ.ಡಿ.ಪೂಜಾರ, ಧನುರಾಮ ತಂಬೂರಿ, ಕೃಷ್ಣಪ್ಪ ಲಮಾಣಿ, ಸಂತೋಷ ಪವಾರ್, ಆಗ್ರಪ್ಪ ನಾಯಕ್, ಚೆನ್ನಪ್ಪ ಕಾರಭಾರಿ, ಶಿವಪ್ಪ ಲಮಾಣಿ, ಶಶಿಕುಮಾರ್ ಜಾಧವ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.