ADVERTISEMENT

ಗದಗ | ಸಾರ್ವಜನಿಕ ಗ್ರಂಥಾಲಯಕ್ಕೆ ಬೇಕಿದೆ ಕಾಯಕಲ್ಪ

ಶಿರಹಟ್ಟಿ ಗ್ರಂಥಾಲಯದಲ್ಲಿ ಮೂಲಸೌಲಭ್ಯಗಳ ಕೊರತೆ: ಪುಸ್ತಕ ಪ್ರೇಮಿಗಳಿಗೆ ಬೇಸರ

ಖಲೀಲ್ ಅಹ್ಮದ್‌ ಶೇಖ್‌
Published 31 ಜನವರಿ 2020, 19:45 IST
Last Updated 31 ಜನವರಿ 2020, 19:45 IST
 ಗ್ರಂಥಾಲಯದಲ್ಲಿ ಬೇಕಾಬಿಟ್ಟಿ ಪುಸ್ತಕಗಳನ್ನು ಇಟ್ಟಿರುವುದು 
 ಗ್ರಂಥಾಲಯದಲ್ಲಿ ಬೇಕಾಬಿಟ್ಟಿ ಪುಸ್ತಕಗಳನ್ನು ಇಟ್ಟಿರುವುದು    

ಶಿರಹಟ್ಟಿ: ಇಲ್ಲಿನ ಮರಾಠಾ ಓಣಿಯ 9 ದಶಕಗಳ ಹಳೆಯ ಕಟ್ಟಡದಲ್ಲಿರುವ ಸಾರ್ವಜನಿಕ ಗ್ರಂಥಾಲಯವು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಪುಸ್ತಕ ಪ್ರೇಮಿಗಳಿಗೆ ಬೇಸರ ತರಿಸಿದೆ.

90 ವರ್ಷಗಳ ಹಳೆಯದಾದ ಎರಡು ಅಂತಸ್ತಿನ ಗ್ರಂಥಾಲಯ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಪ್ರತಿದಿನ ಪುಸ್ತಕ ಓದಲು ಬರುವ ಪುಸ್ತಕ ಪ್ರೇಮಿಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಬರುವಂತಾಗಿದೆ.

ಈ ಗ್ರಂಥಾಲಯದಲ್ಲಿ 879 ಜನ ಸದಸ್ಯತ್ವ ಪಡೆದುಕೊಂಡಿದ್ದಾರೆ. ಸುಮಾರು 32 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಅಲ್ಲದೇ, 14 ದಿನಪತ್ರಿಕೆಗಳು ಹಾಗೂ 3 ನಿಯತಕಾಲಿಕೆಗಳು ಬರುತ್ತವೆ. ಆದರೆ, ಸ್ಥಳಾವಕಾಶದ ಕೊರತೆಯಿಂದ ಪುಸ್ತಕಗಳನ್ನು ಮೂಟೆಗಳಲ್ಲಿ ಕಟ್ಟಿಡಲಾಗಿದೆ.

ADVERTISEMENT

ಇನ್ನು ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣ ಪಡೆದ ಬಡ ಯುವಕರು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಾರೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳಿಲ್ಲ.

ಗ್ರಂಥಾಲಯ ಕಟ್ಟಡ ಪುನಶ್ಚೇತನದ ಜತೆಗೆ ಅವಶ್ಯ ಪುಸ್ತಕಗಳನ್ನು ಒದಗಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಪುಸ್ತಕ ಪ್ರೇಮಿಗಳು.

ಗ್ರಂಥಾಲಯಕ್ಕೆ ಮೂಲಸೌಲಭ್ಯ ಕಲ್ಪಿಸುವಂತೆ ಪಟ್ಟಣ ಪಂಚಾಯ್ತಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಅವಶ್ಯ ಪುಸ್ತಕಗಳನ್ನು ಒದಗಿಸುವ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಗ್ರಂಥಪಾಲಕ ಕಲ್ಯಾಣಶೆಟ್ಟರ.

ಮೂಲಸೌಕರ್ಯದ ಕೊರತೆ
ಹಳೆ ಕಟ್ಟಡದಲ್ಲಿರುವ ಗ್ರಂಥಾಲಯಕ್ಕೆ ಬರುವ ಓದುಗರಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯಿಲ್ಲ. ಗ್ರಂಥಾಲಯ ಎರಡನೇ ಮಹಡಿಯಲ್ಲಿರುವುದರಿಂದ ಹಿರಿಯ ನಾಗರಿಕರಿಗೆ ತೊಂದರೆಯಾಗಿದೆ. ಗೋಡೆಗಳು ಹಲವಾರು ವರ್ಷಗಳಿಂದ ಸುಣ್ಣ-ಬಣ್ಣ ಕಂಡಿಲ್ಲ. ಗ್ರಂಥಾಲಯ ಕಟ್ಟಡ ಪುನಶ್ಚೇತನಗೊಳಿಸಿ ಸ್ಥಳೀಯ ಓದುಗರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

*
ಶಿರಹಟ್ಟಿ ಪಟ್ಟಣದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ಅವಶ್ಯಕತೆಯಿದ್ದು, ಹಲವಾರು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ತಹಸೀಲ್ದಾರರು, ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು.
-ಜಗದೀಶ ತೇಲಿ, ಸ್ಥಳೀಯ ನಿವಾಸಿ

*
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಒದಗಿಸಿದರೆ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
-ರಿಯಾಜ್‌ ತಹಸೀಲ್ದಾರ, ಓದುಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.