ರೋಣ: ನಾಗರಿಕ ಸಮೂಹದ ಜಲಬಾಧೆ, ಮಲಬಾಧೆ ನೀಗಿಸುವಲ್ಲಿ ಮಹತ್ವದ ಪಾತ್ರವಹಿಸಬೇಕಿದ್ದ ಸಾಮೂಹಿಕ ಶೌಚಾಲಯ, ಮೂತ್ರಾಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿರುವುದರಿಂದ ನಾಗರಿಕರು ಇವುಗಳತ್ತ ಮುಖ ಮಾಡದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದಾಗಿ, ಸಾರ್ವಜನಿಕರು ಸ್ಥಳೀಯ ಆಡಳಿತಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಣ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳ ಸಾರ್ವಜನಿಕ ಪ್ರದೇಶದಲ್ಲಿ ಸ್ಥಳೀಯ ಆಡಳಿತಗಳು ನಿರ್ಮಿಸಿರುವ ಸಾಮೂಹಿಕ ಶೌಚಾಲಯ ಹಾಗೂ ಮೂತ್ರಾಲಯಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಾರ್ವಜನಿಕರು ಕೆಲಸ, ಕಾರ್ಯಗಳಿಗೆ ತೆರಳಿದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಮಲ, ಮೂತ್ರ ಬಾಧೆಯನ್ನು ನೀಗಿಸುವ ನಿಟ್ಟಿನಲ್ಲಿ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದ್ದ ಶೌಚಾಲಯಗಳು ಸೂಕ್ತ ನಿರ್ವಹಣೆ ಇಲ್ಲದೆ, ಗಬ್ಬೆದ್ದು ನಾರುತ್ತಿವೆ.
ಶೌಚಾಲಯಗಳನ್ನು ಪ್ರವೇಶಿಸುವವರು ಮಾತ್ರವಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಈ ಶೌಚಾಲಯಗಳ ಆಸುಪಾಸು ಸಂಚರಿಸುವವರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ರೋಣ, ಬೆಳವಣಿಕಿ, ಹೊಳೆಆಲೂರು, ಹಿರೇಹಾಳ, ಸವಡಿ ಸೇರಿದಂತೆ ಬಹುತೇಕ ಊರುಗಳ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯ ಆಡಳಿತಗಳು ಶೌಚಾಲಯಗಳನ್ನು ನಿರ್ಮಿಸಿವೆ. ಆದರೆ, ಇವುಗಳ ಸೂಕ್ತ ನಿರ್ವಹಣೆಗೆ ಗಮನ ಹರಿಸುತ್ತಿಲ್ಲ. ಅಲ್ಲದೆ, ಕೆಲ ಶೌಚಾಲಯಗಳ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಖಾಸಗಿ ವ್ಯಕ್ತಿಗಳು ಶೌಚಾಲಯಕ್ಕೆ ತೆರಳುವವರಿಂದ ಹೆಚ್ಚುವರಿ ಹಣ ಪಡೆಯುತ್ತಾರೆ. ಆದರೆ, ಶೌಚಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ಇಟ್ಟುಕೊಳ್ಳುವುದಿಲ್ಲ. ಇದರಿಂದಾಗಿ ಶೌಚಾಲಯಗಳಲ್ಲಿ ಪ್ರವೇಶಿಸದಂತೆ ದುರ್ನಾತ ಬೀರುತ್ತಿವೆ.
ಪಟ್ಟಣಗಳ ವ್ಯಾಪ್ತಿ ವಿಶಾಲವಾಗಿರುವುದರಿಂದ ನಗರ, ಪಟ್ಟಣಗಳಿಗೆ ದೈನಂದಿನ ಕೆಲಸ, ಕಾರ್ಯಗಳಿಗೆ ಬರುವ ಗ್ರಾಮೀಣ ಪ್ರದೇಶದ ಜನತೆ ಹಾಗೂ ಸ್ಥಳೀಯ ಜನತೆಯ ಅನುಕೂಲಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಾಲಯ ಹಾಗೂ ಬಡಾವಣೆಯ ಆಯಕಟ್ಟಿನ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸ್ಥಳೀಯ ಆಡಳಿತಗಳು ಮುಂದಾಗಿವೆ. ಮೂತ್ರಾಲಯಗಳಲ್ಲಿ ಮೂತ್ರ ವಿಸರ್ಜನೆ ಉಚಿತವಾಗಿರುತ್ತದೆ. ಆದರೆ, ಸ್ಥಳೀಯ ಆಡಳಿತಗಳು ಈ ಮೂತ್ರಾಲಯಗಳ ನಿರ್ವಹಣೆಗೆ ಆದ್ಯತೆ ನೀಡದಿರುವುದರಿಂದ ಮೂತ್ರಾಲಯಗಳತ್ತ ಸಾರ್ವಜನಿಕರು ಮುಖ ಮಾಡದೆ, ಮೂತ್ರಾಲಯಗಳ ಗೋಡೆ, ಅಕ್ಕ-ಪಕ್ಕದಲ್ಲಿನ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಗೆ ಮುಂದಾಗುತ್ತಿದ್ದಾರೆ. ಪುರುಷರು ಈ ರೀತಿ ಮೂತ್ರ ವಿಸರ್ಜನೆಗೆ ಮುಂದಾಗುವುದರಿಂದ ರಸ್ತೆ ಮೇಲೆ ಸಂಚರಿಸುವ ಮಹಿಳೆಯರು ಮುಜುಗರದಿಂದಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ.
ಪಟ್ಟಣ ಪ್ರದೇಶಗಳಲ್ಲಿನ ಬಡಾವಣೆಗಳ ನಾಗರಿಕರ ಅನುಕೂಲಕ್ಕಾಗಿ ನಿರ್ಮಿಸಿದ ಶೌಚಾಲಯಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಅಲ್ಲದೆ, ಕೆಲವೊಂದು ಶೌಚಾಲಯಗಳಲ್ಲಿ ಸ್ವಚ್ಛತೆಗೆ ಅಗತ್ಯವಿರುವ ನೀರು ಇಲ್ಲದಂತಾಗಿದೆ. ಅಲ್ಲದೆ, ಶೌಚಾಲಯಗಳ ಶುಚಿತ್ವಕ್ಕಾಗಿ ವಿವಿಧ ರಾಸಾಯನಿಕಗಳನ್ನು ಶೌಚಾಲಯಗಳಿಗೆ ಸಿಂಪಡಿಸಬೇಕು. ಆದರೆ, ಸ್ಥಳೀಯ ಆಡಳಿತಗಳು ಖಾಸಗಿ ವ್ಯಕ್ತಿಗಳಿಗೆ ಈ ಶೌಚಾಲಯಗಳ ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಿರುವುದರಿಂದ ಶೌಚಾಲಯಗಳನ್ನು ಗುತ್ತಿಗೆ ಪಡೆದಿರುವವರು ಬೇಕಾಬಿಟ್ಟಿ ಶೌಚಾಲಯಗಳನ್ನು ನಿರ್ವಹಿಸುತ್ತಿದ್ದಾರೆ. ಶೌಚಾಲಯಗಳಿಂದ ಬರುವ ಆದಾಯವನ್ನು ಮಾತ್ರ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಮೂತ್ರಾಲಯ, ಶೌಚಾಲಯಗಳ ಅವ್ಯವಸ್ಥೆಗಳನ್ನು ಸರಿಪಡಿಸಿ, ಸಾರ್ವಜನಿಕರ ಆರೋಗ್ಯ ಕಾಳಜಿಗೆ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಶೌಚಾಲಯ ಮೂತ್ರಾಲಯಗಳ ಸೂಕ್ತ ನಿರ್ವಹಣೆ ಹೆಸರಿನಲ್ಲಿ ಸ್ಥಳೀಯ ಆಡಳಿತಗಳು ಸಾಕಷ್ಟು ಅನುದಾನ ಖರ್ಚು ಮಾಡುತ್ತವೆ. ಆದರೆ ನೈಜವಾಗಿ ಸ್ವಚ್ಛತೆ ಮರೀಚಿಕೆಯಾಗಿ ಉಳಿದಿದೆರಮೇಶ ನಂದಿ ಬೆಳವಣಿಕಿ ಗ್ರಾಮದ ಯುವಕ
ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೂ ಸೂಕ್ತ ಕ್ರಮವಹಿಸಲಾಗುವುದುಚಂದ್ರಶೇಖರ ಕಂದಕೂರ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ರೋಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.