ADVERTISEMENT

4 ಸ್ಥಾನ ಉತ್ತಮಪಡಿಸಿಕೊಂಡ ಜಿಲ್ಲೆ

ಪಿಯು ಫಲಿತಾಂಶ ಶೇ 5.24ರಷ್ಟು ಏರಿಕೆ; ಬಾಲಕಿಯರ ಮೇಲುಗೈ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 15:04 IST
Last Updated 14 ಜುಲೈ 2020, 15:04 IST

ಗದಗ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ 22ನೇ ಸ್ಥಾನ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶ ಪಟ್ಟಿಯಲ್ಲಿ 4 ಸ್ಥಾನಗಳನ್ನು ಉತ್ತಮಪಡಿಸಿಕೊಂಡಿದೆ.

2019ರಲ್ಲಿ ಶೇ 57.76ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯು 26ನೇ ಸ್ಥಾನದಲ್ಲಿತ್ತು. ಈ ಬಾರಿ ಮೊದಲ 10 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಫಲಿತಾಂಶ ಪಟ್ಟಿಯಲ್ಲಿ ಮಾತ್ರವಲ್ಲ, ಜಿಲ್ಲೆಯ ಶೇಕಡವಾರು ಫಲಿತಾಂಶ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 5.24ರಷ್ಟು ಏರಿಕೆಯಾಗಿದ್ದು ಶೇ 60 ರಷ್ಟಾಗಿದೆ.

2015ರಲ್ಲಿ ಜಿಲ್ಲೆಯು ಫಲಿತಾಂಶ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. 2016ರಲ್ಲಿ ಶೇ 49.28ರಷ್ಟು ಫಲಿತಾಂಶದೊಂದಿಗೆ 29ನೇ ಸ್ಥಾನಕ್ಕೆ ಏರಿಕೆ ಕಂಡಿತು. ಮುಂದಿನ ಎರಡು ವರ್ಷಗಳಲ್ಲಿ ಅಂದರೆ 2107 ಮತ್ತು 2018ರಲ್ಲಿ ಒಟ್ಟು 13 ಸ್ಥಾನಗಳನ್ನು ಉತ್ತಮ ಪಡಿಸಿಕೊಂಡಿತ್ತು. 2019ರಲ್ಲಿ ಮತ್ತೆ 10 ಸ್ಥಾನಗಳಷ್ಟು ಕುಸಿದು 26ನೇ ಸ್ಥಾನಕ್ಕೆ ಇಳಿದಿತ್ತು. ಈ ಬಾರಿ ಬಳ್ಳಾರಿ, ಬೆಳಗಾವಿ, ಕೊಪ್ಪಳ, ವಿಜಯಪುರ, ತುಮಕೂರು, ರಾಮನಗರ, ಚಿತ್ರದುರ್ಗ ಜಿಲ್ಲೆಗಳಿಗಿಂತಲೂ ಜಿಲ್ಲೆಯ ಫಲಿತಾಂಶ ಉತ್ತಮವಾಗಿದೆ.

ADVERTISEMENT

ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಖಾಸಗಿ ಕಾಲೇಜುಗಳ ವಿವಿಧ ವಿಷಯಗಳ ಉಪನ್ಯಾಸಕರ ಸಂಘಗಳು ರೂಪಿಸಿದ ಹಲವು ತರಬೇತಿ ಕಾರ್ಯಕ್ರಮಗಳಿಂದ ಫಲಿತಾಂಶದಲ್ಲಿ ಅಲ್ಪಮಟ್ಟಿಗಿನ ಸುಧಾರಣೆ ಕಂಡುಬಂದಿದೆ.

‘ಈ ಬಾರಿ ಕೊರೊನಾದಿಂದ ಇಂಗ್ಲೀಷ್‌ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಸಾಕಷ್ಟು ಮಕ್ಕಳು ಇಂಗ್ಲಿಷ್‌ ಪರೀಕ್ಷೆ ನಡೆಯುವುದಿಲ್ಲ ಎಂದು ಭಾವಿಸಿ, ಪರೀಕ್ಷೆಗೆ ಸಿದ್ಧತೆಯನ್ನೂ ನಡೆಸಿರಲಿಲ್ಲ. ಇಂಗ್ಲಿಷ್‌ ವಿಷಯದಲ್ಲೇ ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅಷ್ಟೊಂದು ಉತ್ತಮ ಫಲಿತಾಂಶ ಬಂದಿಲ್ಲ’ ಎಂದು ಪಿಯು ಉಪನ್ಯಾಸಕರೊಬ್ಬರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.