ಗದಗ: ಗಾನಯೋಗಿ ಪಂ. ಪುಟ್ಟರಾಜ ಸೇವಾ ಸಮಿತಿ, ಗುರು ಪುಟ್ಟರಾಜ ಸಂಗೀತ ಶಿಕ್ಷಣ ಸಮಿತಿ ಯಳವತ್ತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಸ್ಮರಣೋತ್ಸವ ಭಾನುವಾರ ಸಂಜೆ 7ಕ್ಕೆ ಲಕ್ಷ್ಮೇಶ್ವರ ತಾಲ್ಲೂಕಿನ ಯಳವತ್ತಿ ಗ್ರಾಮದ ಕೋಟೆ ಆವರಣದಲ್ಲಿ ನಡೆಯಲಿದೆ.
ಶಿರಹಟ್ಟಿ ಬಾಲೆಹೊಸೂರು ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಹಾಗೂ ಗಾನಯೋಗಿ ಪಂ. ಪುಟ್ಟರಾಜ ಸೇವಾ ಸಮಿತಿಯ ಗೌರವಾಧ್ಯಕ್ಷ ಕಲ್ಲಯ್ಯಜ್ಜನವರು ಅಧ್ಯಕ್ಷತೆ ವಹಿಸುವವರು.
ಕೊಪ್ಪಳದ ಜಂಗಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಯ್ಯ ನವಲಿಹಿರೇಮಠ, ಯಳವತ್ತಿಯ ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ವಿನಾಯಕ ಪಾಟೀಲ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಳ್ಳಾರಿ, ಯಳವತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಷ್ಮಾಬಾನು ಹಳೆಮನೆ, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರುಡಗಿ ಸೇರಿದಂತೆ ಹಲವರು
ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿಗ್ಗಜರಿಗೆ ‘ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗುವುದು.
ಲಿಂ. ರಾಜಶೇಖರಯ್ಯನವರು ಹಾಗೂ ಲಿಂ. ಮಾತೋಶ್ರೀ ನೀಲಾಂಬಿಕಾ ನವಲಿಹಿರೇಮಠ ಕೊಪ್ಪಳ ಇವರ ಸ್ಮರಣಾರ್ಥ ಪಂ. ಸದಾಶಿವ ಪಾಟೀಲ ಕೊಪ್ಪಳ ಅವರಿಗೆ ಬಿ. ಶ್ರೀರಾಮುಲು ಅವರ ಮಾತೋಶ್ರೀ ದಿ. ಹೊನ್ನೂರಮ್ಮ ಸ್ಮರಣಾರ್ಥ ಪಂ. ವೀರೇಶ ಕಿತ್ತೂರ, ಪಂ. ಲಿಂ. ಚೆನ್ನವೀರ ಶಾಸ್ತ್ರಿಗಳು ಹಿಡ್ಕಿಮಠ ಸ್ಮರಣಾರ್ಥ ಬೆಂಗಳೂರಿನ ಪಂ.ನಾಗಲಿಂಗಯ್ಯ ಗವಾಯಿಗಳಿಗೆ ‘ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ನಂತರ ಸನ್ಮಾನಿತರಿಂದ ಸ್ವರ ಸಂಗೀತ ನಮನ ಕಾರ್ಯಕ್ರಮ ನಡೆಯಲಿದೆ. ಪಕ್ಕವಾದ್ಯ ಕಲಾವಿದರಾದ ಸಂಗಮೇಶ ಪಾಟೀಲ, ಗುಲ್ಬರ್ಗಾ ಬಸವರಾಜ ಹೊನ್ನಿಗನೂರ, ಮಲ್ಲಿಕಾರ್ಜುನ ತುರುವನೂರು ಚಿತ್ರದುರ್ಗ ಅವರು ಪಕ್ಕವಾದ್ಯ ಕಲಾವಿದರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ.
ಇದಕ್ಕೂ ಮುನ್ನ ಬೆಳಿಗ್ಗೆ 8ಕ್ಕೆ ಶಿವಯೋಗಿ ಪಂ. ಪುಟ್ಟರಾಜ ಕವಿ ಗುರುವರ್ಯರ ಭಾವಚಿತ್ರ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ಊರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಬೆಟದಯ್ಯ ಶಾಸ್ತ್ರಿ ಹಿರೇಮ್ಯಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.