ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶುಕ್ರವಾರ ನಸುಕಿನ ಜಾವದಿಂದಲೇ ತುಂತುರು ಮಳೆ ಆರಂಭಗೊಂಡಿದೆ. ಹೀಗಾಗಿ ಶಾಲೆ, ಕಾಲೇಜಿಗಳಿಗೆ ಹೋಗುವ ಮಕ್ಕಳು ಮಳೆಯಲ್ಲಿಯೇ ಹೋಗಬೇಕಾದ ಪರಿಸ್ಥಿತಿ ಇತ್ತು. ಅದರಂತೆ ಕೆಲಸ, ಕಾರ್ಯಗಳಿಗೆ ಹೋಗುವವರಿಗೆ ಮಳೆ ಅಡ್ಡಿಪಡಿಸಿತು.
ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಗೆ ಡಾ.ಮಲ್ಲಾಡದವರ ಕಾಲೊನಿ, ಮೂಕಬಸವೇಶ್ವರ ನಗರ, ಲಕ್ಷ್ಮಿನಗರ, ಈಶ್ವರ ನಗರ, ಹಮಾಲರ ಕಾಲೊನಿ ಒಳಗೊಂಡಂತೆ ಮತ್ತಿತರ ಭಾಗಗಲ್ಲಿನ ರಸ್ತೆಗಳೆಲ್ಲ ಕೆಸರುಮಯವಾಗಿವೆ. ಇದರಿಂದ ನಿವಾಸಿಗಳು, ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ.
‘ರಸ್ತೆಗಳು ದುರಸ್ತಿ ಆಗದ ಕಾರಣಕ್ಕೆ ಗುಂಡಿಗಳಲ್ಲಿ ನೀರು, ಕೆಸರು ತುಂಬಿಕೊಂಡು ಬೈಕ್‌ಗಳು ಸ್ಕಿಡ್ ಆಗಿ ಸವಾರರು ಗಾಯಗೊಂಡ ಘಟನೆಗಳು ನಡೆದಿದೆ. ಆದಷ್ಟು ಬೇಗ ರಸ್ತೆಗಳನ್ನು ದುರಸ್ತಿ ಮಾಡಬೇಕು’ ಎಂದು ಬಡಾವಣೆಗಳ ನಿವಾಸಿಗಳು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.