ADVERTISEMENT

ರಾಣಿ ಚೆನ್ನಮ್ಮ ವಸತಿ ನಿಲಯ: ಸರಿಯಾಗಿ ಊಟ ಸಿಗದೆ ಮನೆಗೆ ಹೋದ 250 ವಿದ್ಯಾರ್ಥಿಗಳು

ವಿದ್ಯಾರ್ಥಿಗಳ ಗೋಳು ಕೇಳುವವರ್ಯಾರು; ಪಾಲಕರ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:37 IST
Last Updated 29 ಜುಲೈ 2025, 2:37 IST
ಶಿರಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿನ ಊಟದ ಅವ್ಯವಸ್ಥೆಯನ್ನು ಪಾಲಕರು ಖಂಡಿಸಿದರು
ಶಿರಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿನ ಊಟದ ಅವ್ಯವಸ್ಥೆಯನ್ನು ಪಾಲಕರು ಖಂಡಿಸಿದರು   

ಶಿರಹಟ್ಟಿ: ಕಳೆದ 15 ದಿನಗಳಿಂದ ಸರಿಯಾದ ಊಟ ಸಿಗದ ಕಾರಣ ವಸತಿ ನಿಲಯದ 250 ವಿದ್ಯಾರ್ಥಿಗಳು ಹಬ್ಬದ ನೆಪ ಮಾಡಿ ಊರಿಗೆ ಹೋಗಿರುವ ಘಟನೆ ಸ್ಥಳೀಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ.

ಪಟ್ಟಣದ ಹೊರವಲಯದ ವರವಿ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿ ಒಟ್ಟು 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಳೆದ 10 ದಿನಗಳಿಂದ ಅರೆಬರೆಯಾಗಿ ಊಟ ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಪಾಲಕರು ಒಮ್ಮಲೇ ಬಂದು ಹಬ್ಬದ ನೆಪದ ರಜೆ ಕೇಳಿ ವಿದ್ಯಾರ್ಥಿಗಳನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಿದ್ದಾರೆ.

ಮಕ್ಕಳು ಫೋನ್ ಮೂಲಕ ಪಾಲಕರಿಗೆ ಕರೆ ಮಾಡಿ ವಾಸ್ತವಾಂಶ ವಿವರಿಸಿದ್ದಾರೆ. ಈ ಕುರಿತು ಪ್ರಾಂಶುಪಾಲರ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದರ ಬಗ್ಗೆ ತಿಳಿಸಿದ್ದಾರೆ. ಪಾಲಕರು ವಸತಿ ಶಾಲೆಯ ಪಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡು ಊಟದ ಸಮಸ್ಯೆ ತಲೆದೂರದಂತೆ ಕ್ರಮ ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ.

ADVERTISEMENT

ಪಾಲಕರ ಮತ್ತು ವಿದ್ಯಾರ್ಥಿಗಳ ಆರೋಪ
ಮಕ್ಕಳಿಗೆ ಕಳೆದ 15 ದಿನಗಳಿಂದ ಅರೆಬರೆ ಊಟ ನೀಡಲಾಗುತ್ತಿದೆ. ಸರ್ಕಾರ ವಸತಿ ಶಾಲೆಯಲ್ಲಿ ಆಹಾರ ನೀಡಬೇಕಾದ ಪದಾರ್ಥಗಳ ಪಟ್ಟಿ (ಮೆನು) ಪ್ರಕಾರ ಊಟ ಕೊಡುತ್ತಿಲ್ಲ. ಕೊಳತೆ ತರಕಾರಿ ಹಾಗೂ ಆಹಾರ ಪದಾರ್ಥಗಳಿಲ್ಲದೆ ನಮಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ. ಕಾಫಿ, ಟೀ ಹಾಗೂ ಸ್ನ್ಯಾಕ್ಸ್ ಕೂಡ ಸರಿಯಾಗಿ ವಿತರಿಸಿಲ್ಲ. ಒಂದು ಮೊಟ್ಟೆಯಲ್ಲಿ ಇಬ್ಬರಿಗೆ ನೀಡಲಾಗುತ್ತಿದೆ. ಕಳೆದ 15 ದಿನದಿಂದ ಚಿಕ್ಕನ್ ನೀಡಿಲ್ಲ. ಕೊಡುವ ಊಟದಲ್ಲಿಯೂ ಸಹ ಒಂದು ಚಪಾತಿ ಅಥವಾ ರೊಟ್ಟಿ ಒಂದು ಚಮಚ ಅನ್ನ ಮತ್ತು ಸಾಂಬಾರ ಒಮ್ಮೆ ಮಾತ್ರ ನೀಡುತ್ತಾರೆ. ಮತ್ತೊಮ್ಮೆ ಕೇಳಿದರೇ ಉಪ್ಪಿನಕಾಯಿ ಹಚ್ಚಿಕೊಂಡು ಊಟ ಮಾಡಿ ಎನ್ನುತ್ತಾರೆ. ತಡವಾಗಿ ಊಟಕ್ಕೆ ಬಂದವರಿಗೆ ಊಟ ಇಲ್ಲದೆ ಉಪವಾಸ ದಿನದೂಡುವ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ನಮ್ಮ ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ ಅಲ್ಲದೆ ಮಕ್ಕಳ ಕೈಯಿಂದ ಊಟ ಬಡಿಸುವುದು ಹಾಗೂ ಅವರ ಕೈಯಿಂದ ಅಡುಗೆ ಮಾಡಿಸುವುದು ಇನ್ನಿತರ ಕಾರ್ಯವನ್ನು ಮಾಡಿಸುತ್ತಿದ್ದಾರೆ. ಇದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಊಟ ಸರಿಯಾಗಿ ಯಾಕೆ ನೀಡುತ್ತಿಲ್ಲ ಎಂದು ಕೇಳಿದರೆ ರೇಷನ್ ಖಾಲಿಯಾಗಿದೆ ಎಂಬುದು ಪ್ರಾಂಶುಪಾಲರ ಉತ್ತರವಾಗಿದೆ ಎಂದು ಪಾಲಕರಾದ ಜಗದೀಶ ವಾಲ್ಮೀಕಿ, ಗುರುಪಾದಪ್ಪ ದೊಡ್ಡನ್ನವರ, ವಿಠೋಬಾ ಅಂಬಣ್ಣವರ, ಚಂದ್ರಪ್ಪ ಬೆಳಗಟ್ಟಿ, ಚನ್ನಪ್ಪ ಚಿಟ್ಟಿ, ಹನಮಂತಪ್ಪ ಮಲ್ಲಡದ, ಅನಿಲ್ ಬಂಡಿವಡ್ಡರ ಆಗ್ರಹಿಸಿದರು.

ವಸತಿ ಶಾಲೆಯಲ್ಲಿ ಅಡುಗೆಗೆ ಬಳಸುವ ತರಕಾರಿಗಳು

ಮಕ್ಕಳ ಕೈಯಿಂದ ಅಡುಗೆ

ವಸತಿಶಾಲೆಯಲ್ಲಿ ಮಕ್ಕಳಿಂದ ಚಪಾತಿ ಅಡುಗೆ ಹಾಗೂ ಇನ್ನಿತರ ಕೆಲಸವನ್ನು ಮಾಡಿಸುತ್ತಿದ್ದಾರೆ. ಪ್ರಾಂಶುಪಾಲರು ಮೇಲ್ವಿಚಾರಕರು ಮತ್ತು ಅಡುಗೆಯವರ ಮದ್ಯ ಇರುವ ಒಳ ಜಗಳದಿಂದ ವಿದ್ಯಾರ್ಥಿಗಳು ಉಪವಾಸ ಆಗುತ್ತಿದ್ದು ಅವರೇ ಅಡುಗೆ ಮಾಡಿಕೊಂಡು ತಾವೇ ಬಡಿಸಿಕೊಂಡು ಊಟ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಗೆ ಸ್ನಾನ ಮಾಡಲು ಬಿಸಿ ನೀರನ್ನು ಸಹ ಒದಗಿಸುತ್ತಿಲ್ಲ. ಸರ್ಕಾರದಿಂದ ಬರುವ ಉಪಕರಣ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.