ADVERTISEMENT

ಪಡಿತರ ಅಕ್ರಮ ಮಾರಾಟ | ಕಠಿಣ ಕ್ರಮ ಜರುಗಿಸಲಾಗುವುದು: ಡಿ.ಡಿ. ಮೋರನಾಳ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:06 IST
Last Updated 28 ನವೆಂಬರ್ 2025, 5:06 IST
ಮುಂಡರಗಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ.ಮೋರನಾಳ ಮಾತನಾಡಿದರು
ಮುಂಡರಗಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ.ಮೋರನಾಳ ಮಾತನಾಡಿದರು   

ಮುಂಡರಗಿ: ‘ಪಡಿತರ ಅಕ್ರಮ ಮಾರಾಟ ಪ್ರಕರಣ ದೃಡಪಟ್ಟಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಹಾರ ಇಲಾಖೆ ಸೂಚಿಸಿದೆ. ಅಂತಹ ಪ್ರಕರಣ ಕುರಿತು ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಕೆಲವು ಭಾಗಗಳಲ್ಲಿ ಅಕ್ಕಿ ಅಕ್ರಮ ಮಾರಾಟ ಕುರಿತು ಪೊಲೀಸ್‌ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿದ್ದು, ಭಾಗಿಯಾದವರ ಹೆಸರುಗಳನ್ನು ಅಧಿಕಾರಿಗಳು ಬಹಿರಂಗಗೊಳಿಸುವ ಮೂಲಕ ಇತರರಿಗೆ ಎಚ್ಚರಿಕೆ ಮೂಡಿಸಬೇಕು’ ಎಂದು ಸೂಚಿಸಿದರು.

ADVERTISEMENT

ಯುವನಿಧಿ ಯೋಜನೆ ಕುರಿತು ಪ್ರತಿ ಕಾಲೇಜುಗಳ ಬಳಿ ಮಾಹಿತಿ ಫಲಕ ಪ್ರದರ್ಶಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ವಿಶ್ವನಾಥ ಹೊಸಮನಿ ಮಾತನಾಡಿ, ‘ತಾಲ್ಲೂಕಿನ ಕೆಲವು ಭಾಗಗಳಲ್ಲಿ ಪಡಿತರ ಚೀಟಿಯಲ್ಲಿ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಗೊಂದಲ ಸೃಷ್ಟಿಯಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗೊಂದಲ ನಿವಾರಿಸಬೇಕು’ ಎಂದು ಸೂಚಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆ ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಉಪಾದ್ಯಕ್ಷ ಪುಲಕೇಶಿಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಫಕ್ರುದ್ದಿನ ನದಾಫ್, ಸದಸ್ಯರಾದ ಜೈಲಾನಸಾಬ್ ವಡ್ಡಟ್ಟಿ, ಕಾಶಪ್ಪ ಹೊನ್ನೂರ, ಗೀತಾ ನಾಡಗೌಡರ, ಭುವನೇಶ್ವರಿ ಕಲ್ಲಕುಟಗರ, ಮಹೇಶ ದ್ರಾಕ್ಷಿ, ರಾಮಣ್ಣ ಮೇಗಳಮನಿ ಇದ್ದರು.

ಪಡಿತರ ಅಕ್ರಮ ಮಾರಾಟ ವಿರುದ್ಧ ಜಾರಿಯಾದ ನೂತನ ಕಾನೂನುಗಳ ಕುರಿತು ಪ್ರತಿಯೊಂದು ಪಡಿತರ ವಿತರಣಾ ಕೇಂದ್ರಗಳ ಮುಂದೆ ಮಾಹಿತಿ ಫಲಕ ಲಗತ್ತಿಸಬೇಕು
ಡಿ.ಡಿ. ಮೋರನಾಳ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.