ಲಕ್ಷ್ಮೇಶ್ವರ: ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಒಣಮೆಣಸಿನಕಾಯಿ ದರ ಪಾತಾಳಕ್ಕೆ ಕುಸಿದಿದ್ದು ಅನ್ನದಾತನಿಗೆ ಸಂಕಷ್ಟ ಎದುರಾಗಿದೆ. ಮೆಣಸಿನಕಾಯಿ ರೈತರಿಗೆ ಕೈ ತುಂಬ ಹಣ ಕೊಡುವ ಬೆಳೆಯಾಗಿದ್ದರಿಂದ ಅದನ್ನು ‘ಕೆಂಪು ಬಂಗಾರ’ ಎಂದೇ ಕರೆಯುತ್ತಾರೆ.
ಅನ್ನದಾತರು ದೊಡ್ಡ ದೊಡ್ಡ ವೆಚ್ಚಗಳನ್ನು ಇದು ನೀಗಿಸುತ್ತದೆ. ಇದನ್ನೇ ನೆಚ್ಚಿಕೊಂಡು ರೈತರು ಮಕ್ಕಳ ಮದುವೆ ಮಾಡುವ, ಮನೆ ಕಟ್ಟುವ ಕನಸನ್ನು ಇಟ್ಟುಕೊಳ್ಳುತ್ತಾರೆ. ಲಕ್ಷ್ಮೇಶ್ವರ ಸೇರಿದಂತೆ ತಾಲ್ಲೂಕಿನ ಬಸಾಪುರ, ರಾಮಗೇರಿ, ಮಾಡಳ್ಳಿ, ಯತ್ನಳ್ಳಿ, ಯಳವತ್ತಿ, ಮಾಗಡಿ, ಗೊಜನೂರು, ಬಟ್ಟೂರು, ಪುಟಗಾಂಬಡ್ನಿ, ಅಡರಕಟ್ಟಿ, ದೊಡ್ಡೂರು, ಗೋವನಾಳ, ಶಿಗ್ಲಿ ಭಾಗದ ನೂರಾರು ಎಕರೆ ಕಪ್ಪು ಭೂಮಿಯಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಇಳುವರಿ ಬರುತ್ತಿದ್ದಂತೆ ಬೆಲೆ ದಿಢೀರನೇ ಕುಸಿದಿದ್ದು ಬೆಳೆಗಾರರನ್ನು ಕಂಗೆಡಿಸಿದೆ.
ಸಾಂಪ್ರದಾಯಕ ಬೆಳೆಗೆ ಪೈಪೋಟಿ:
ಜಿಲ್ಲೆಯ ಐದು ತಾಲ್ಲೂಕುಗಳು ಸೇರಿ ಧಾರವಾಡ ಜಿಲ್ಲೆಯ ಕುಂದಗೋಳ ಭಾಗದಲ್ಲಿ ಬೆಳೆಯುವ ಸಾಂಪ್ರದಾಯಕ ಡಬ್ಬಿ, ಕಡ್ಡಿ ಮೆಣಸಿನಕಾಯಿ ಹೆಚ್ಚು ರುಚಿ ಹಾಗೂ ಬಣ್ಣ ಹೊಂದಿರುತ್ತದೆ. ಮಾರುಕಟ್ಟೆಯಲ್ಲಿ ಇದಕ್ಕೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಆದರೆ ಅತೀ ಹೆಚ್ಚು ಇಳುವರಿ ಕೊಡುವ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮತ್ತು ಆಂಧ್ರದ ಗುಂಟೂರು ಭಾಗದಲ್ಲಿ ಬೆಳೆಯುವ ಮೆಣಸಿನಕಾಯಿ ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಕ ಬೆಳೆಗೆ ದೊಡ್ಡ ಪೈಪೋಟಿ ತಂದೊಡ್ಡುತ್ತಿದೆ.
ಅಖಂಡ ಧಾರವಾಡ ಜಿಲ್ಲೆಯ ರೈತರು ಮಳೆಯನ್ನೇ ನಂಬಿ ಮೆಣಸಿನಕಾಯಿ ಬೆಳೆದರೆ ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ ಸೇರಿ ಮತ್ತಿತರ ಜಿಲ್ಲೆಗಳ ರೈತರು ತುಂಗಭದ್ರಾ ನದಿ ನೀರು ಬಳಸಿ ಬೆಳೆಯುತ್ತಾರೆ.
ಇಳುವರಿ:
ಗದಗ ಜಿಲ್ಲೆ ರೈತರು ಮಳೆಯಾಶ್ರಿತ ಭೂಮಿಯಲ್ಲಿ ಎಕರೆಗೆ 6ರಿಂದ 8 ಕ್ವಿಂಟಲ್ ಬೆಳೆದರೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಎಕರೆಗೆ 18ರಿಂದ 20 ಕ್ವಿಂಟಲ್ ಇಳುವರಿ ಬರುತ್ತದೆ. ಹೀಗಾಗಿ ಅವರು ಕೈಗೆ ಬಂದ ದರಕ್ಕೆ ಮಾರಾಟ ಮಾಡಿದರೂ ನಷ್ಟ ಉಂಟಾಗುವುದಿಲ್ಲ ಎನ್ನುವುದು ರೈತರ ಅಭಿಪ್ರಾಯ.
ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ₹30ರಿಂದ ₹50 ಸಾವಿರ ದರಕ್ಕೆ ಮಾರಾಟವಾಗಿದ್ದ ಬ್ಯಾಡಗಿ ಮೆಣಸಿನಕಾಯಿ ಈ ವರ್ಷ ಕೇವಲ ₹7ರಿಂದ ₹20 ಸಾವಿರದವರೆಗೆ ಮಾರಾಟವಾಗುತ್ತಿದೆ.
‘ಜರ್ಸಿ ಆಕಳ ಸಂಶೋಧನೆ ನಂತರ ಹಾಲು ಉತ್ಪಾದನೆ ಹೆಚ್ಚಾಯಿತು. ಆದರೆ ಗುಣಮಟ್ಟ ಕುಸಿಯಿತು. ಸಧ್ಯ ಮೆಣಸಿನಕಾಯಿ ಬೆಳೆಗೂ ಇದೇ ಪರಿಸ್ಥಿತಿ ಬಂದೊದಗಿದೆ. ಹೆಚ್ಚೆಚ್ಚು ಇಳುವರಿ ಕೊಡುವ ತಳಿಗಳ ಸಂಶೋಧನೆ ನಂತರ ನದಿ ಭಾಗದ ರೈತರು ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಆದರೆ ಗುಣಮಟ್ಟ ಕಡಿಮೆ. ಮೆಣಸಿನಕಾಯಿಗೂ ಸಧ್ಯ ಇದೇ ಸ್ಥಿತಿ ಬಂದಿದೆ. ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ಗ್ರಾಹಕರು ಗುಂಟೂರು ಭಾಗದ ಮೆಣಸಿನಕಾಯಿ ಖರೀದಿ ಮಾಡುತ್ತಾರೆ. ಆದರೆ ನಮ್ಮ ಭಾಗದಲ್ಲಿ ಬೆಳೆಯುವ ಗುಣಮಟ್ಟದ ಮೆಣಸಿನಕಾಯಿ ಅಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಿದರೆ ಲಾಭ ಹೋಗಲಿ ಕೊನೆಗೆ ಹಾಕಿದ ಬಂಡವಾಳವೂ ಬರುವುದಿಲ್ಲ’ ಎಂದು ಲಕ್ಷ್ಮೇಶ್ವರ ತಾಲ್ಲೂಕು ಗೊಜನೂರು ಗ್ರಾಮದ ಮೆಣಸಿನಕಾಯಿ ಬೆಳೆಗಾರ ಚನ್ನಪ್ಪ ಷಣ್ಮುಖಿ ಹೇಳಿದರು.
ಇದೀಗ ಮೆಣಸಿನಕಾಯಿ ಕೊಯ್ಲು ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಆವಕ ಹೆಚ್ಚಾಗುತ್ತದೆ. ಆಗ ದರ ಮತ್ತಷ್ಟು ಕುಸಿಯಬಹುದು ಎಂಬ ಮಾಹಿತಿ ಬೆಳೆಗಾರರನ್ನು ಮತ್ತಷ್ಟು ಕಂಗೆಡಿಸಿದೆ.
ಬೆಲೆ ಕುಸಿಯಲು ಕಾರಣ?
ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಬೆಳೆಯುವ ಮೆಣಸಿನಕಾಯಿ ಮಾರಾಟಕ್ಕೆ ಹಾವೇರಿ ಜಿಲ್ಲೆ ಬ್ಯಾಡಗಿ ಪ್ರಮುಖ ಮಾರುಕಟ್ಟೆಯಾಗಿದೆ.
‘ಎರಡು ವರ್ಷಕ್ಕೆ ಬರುವ ಇಳುವರಿ ಕಳೆದ ಬಾರಿ ಒಂದೇ ವರ್ಷಕ್ಕೆ ಬಂದಿತ್ತು. ಆಗ ಲಕ್ಷಾಂತರ ಚೀಲ ಮೆಣಸಿನಕಾಯಿ ಬ್ಯಾಡಗಿಯಲ್ಲಿ ರೈತರಿಂದ ಮಾರಾಟವಾಗಿತ್ತು. ಆದರೆ ವ್ಯಾಪಾರಸ್ಥರು ಖರೀದಿಸಿದ ಶೇ 70ರಷ್ಟು ಮೆಣಸಿನಕಾಯಿ ಮಾರಾಟ ಆಗದೆ ಇನ್ನೂ ಹಾಗೆಯೇ ಎಸಿ ಗೋದಾಮುಗಳಲ್ಲಿ ಕೊಳೆಯುತ್ತಿದೆ. ಬ್ಯಾಡಗಿಯಲ್ಲಿ 32 ಬೃಹತ್ ಪ್ರಮಾಣದ ಎಸಿ ಗೋದಾಮುಗಳಿದ್ದು ಅವುಗಳಲ್ಲಿ 21 ಲಕ್ಷ ಚೀಲ ಮೆಣಸಿನಕಾಯಿ ಹಾಗೆಯೇ ಉಳಿದಿದೆ. ಕಳೆದ ವರ್ಷ ಅಂದಾಜು ₹300 ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು ಈ ವರ್ಷ ಧಾರಣಿ ಕುಸಿಯಲು ಪ್ರಮುಖ ಕಾರಣವಾಗಿದೆ’ ಎಂದು ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಸ್ಥ ಪ್ರಭು ಟ್ರೇಡರ್ಸ್‍ನ ಬಸಣ್ಣ ವಾಸ್ತವ ಬಿಚ್ಚಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.