ADVERTISEMENT

ಗದಗ | ಸಂಬಂಧಕ್ಕೆ ಬೆಲೆಕೊಟ್ಟರೆ ಬಾಂಧವ್ಯ ಗಟ್ಟಿ: ಅಕ್ಕಿಮಠದ ಗುರುಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 5:28 IST
Last Updated 26 ಜನವರಿ 2026, 5:28 IST
ಗದಗ ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಭಾನುವಾರ ನಡೆದ ಮೌನಯೋಗಿ ಚಿಕೇನಕೊಪ್ಪದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ವಿವಿಧ ಮಠಾಧೀಶರು ಉದ್ಘಾಟಿಸಿದರು
ಗದಗ ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಭಾನುವಾರ ನಡೆದ ಮೌನಯೋಗಿ ಚಿಕೇನಕೊಪ್ಪದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ವಿವಿಧ ಮಠಾಧೀಶರು ಉದ್ಘಾಟಿಸಿದರು   

ಗದಗ: ‘ಪ್ರತಿಯೊಬ್ಬರೂ ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ಗುರು, ಹಿರಿಯರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಭಾನುವಾರ ನಡೆದ ಮೌನಯೋಗಿ ಚಿಕೇನಕೊಪ್ಪದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವದ ಸಮ್ಮುಖವಹಿಸಿ ಮಾತನಾಡಿದರು.

‘ರೈತ ಮತ್ತು ವಿದ್ಯಾವಂತರ ಬುದ್ಧಿಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಓದಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಕೌಟುಂಬಿಕ ಜೀವನದಿಂದ ವಿಚ್ಛೇದನಕ್ಕೆ ಮೊರೆ ಹೋಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮೊಬೈಲ್‌ ಬಳಕೆ ಆದಷ್ಟು ಕಡಿಮೆ ಮಾಡಬೇಕು. ಮನುಷ್ಯ ಸಂಬಂಧಗಳಿಗೆ ಬೆಲೆ ಕೊಟ್ಟು, ಅರಿತು ಬಾಳುವ, ದುಡಿದು ತಿನ್ನುವ ರೂಢಿ ಬೆಳೆಸಿಕೊಳ್ಳಬೇಕು’ ಎಂದರು.

ಬಳಗಾನೂರು ಮಠದ ಶಿವಶಾಂತವೀರ ಶರಣರು ಮಾತನಾಡಿ, ಭಕ್ತಿಪಥದ ಮೂಲಕ ಜನರಲ್ಲಿ ಸದ್ಭಾವನೆ ಬೆಳೆಸುವುದೇ ಜಾತ್ರೆಯ ಮೂಲ ಉದ್ದೇಶವಾಗಿದೆ. ಜಾತ್ರೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿದ್ದು, ಅವುಗಳ ಸದುಪಯೋಗ ಪಡೆದು ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು’ ಎಂದರು.

ಪ್ರಗತಿಪರ ಕೃಷಿ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ‘ರೈತ ಕೃಷಿ ಕಾಯದಲ್ಲಿ ತನ್ನ ಬೆವರನ್ನಷ್ಟೇ ಅಲ್ಲ; ರಕ್ತವನ್ನೇ ಸುರಿಸುತ್ತಾನೆ. ಆದರೆ, ರೈತ ಬೆಳೆದ ಬೆಳೆಗಳಿಗೆ ಸರ್ಕಾರ ಉತ್ತಮ ಬೆಲೆ ನಿಗದಿ ಮಾಡುವ ಅವಕಾಶ ಅವನಿಗೆ ಇಲ್ಲವಾಗಿದೆ. ರೈತರು ಋತುಮಾನ ಆಧರಿತ ಬೆಳೆ ಪದ್ಧತಿ ರೂಢಿಸಿಕೊಂಡು ಉತ್ತಮ ಆದಾಯ ಗಳಿಸುವ ಮೂಲಕ ಯಾರಿಗೂ ಕಡಿಮೆ ಇಲ್ಲದಂತೆ ಬದುಕಬಹುದು’ ಎಂದರು.

ಇದೇ ಸಂದರ್ಭದಲ್ಲಿ ಮಠದಲ್ಲಿ ನೂತನ ಹರಕೆಯ ತೇರನ್ನು ಲೋಕಾರ್ಪಣೆಗೊಳಿಸಲಾಯಿತು. 36 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬಳೂಟಗಿಯ ಹಿರೇಮಠದ ಶಿವಕುಮಾರ ಸ್ವಾಮೀಜಿ, ರಬಕವಿಯ ಗುರುಸಿದ್ಧ ಸ್ವಾಮೀಜಿ, ಕಂಪಸಾಗರ ಅಭಿನವ ನಾಗಭೂಷಣ ಸ್ವಾಮೀಜಿ, ಹೆಬ್ಬಾಳದ ಪ್ರಕಾಶ ಶರಣರು ಇದ್ದರು.

ಬಿ.ವೈ.ಡೊಳ್ಳಿನ ಶರಣಶ್ರೀ ಪ್ರಶಸ್ತಿ ವಾಚನ ಮಾಡಿದರು. ಸವಿತಾ ಶಿವಕುಮಾರ ನಿರೂಪಿಸಿದರು. ಶಿವಲಿಂಗ ಶಾಸ್ತ್ರಿ ಸಿದ್ಧಾಪುರ ವಂದಿಸಿದರು.

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು
ಪ್ರಗತಿಪರ ಕೃಷಿಕ ಮಹಿಳೆ ಕವಿತಾ ಮಿಶ್ರಾ ಜಾನಪದ ಕಲಾವಿದ ಕಡಬಗೆರೆ ಮುನಿರಾಜು ಅನ್ನಪೂರ್ಣ ಬಸಯ್ಯ ಬಳೂಲಮಠ ಅವರಿಗೆ ‘ಶರಣಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಹೆಣ್ಣು ಮಕ್ಕಳು ಗಟ್ಟಿಗೊಳ್ಳಲು ತಂದೆ ಶಿಕ್ಷಣದ ಅಸ್ತ್ರ ನೀಡುತ್ತಾನೆ. ಗಂಡ ಪ್ರೀತಿಯ ಅಸ್ತ್ರ ಮಗ ಆಸರೆಯ ಅಸ್ತ್ರವಾಗಿ ಸ್ತ್ರೀ ಬೆಳವಣಿಗೆಗೆ ಸಹಕಾರಿಯಾಗಿರುತ್ತಾರೆ
-ಕವಿತಾ ಮಿಶ್ರಾ ಪ್ರಗತಿಪರ ಕೃಷಿ ಮಹಿಳೆ

ಸಾಧಕರಿಗೆ ‘ಶರಣಶ್ರೀ ಪ್ರಶಸ್ತಿ’ ಪ್ರದಾನ ಶರಣರ ಮಠ ಹಾಗೂ ನವಲಗುಂದದ ಸಿದ್ಧಲಿಂಗನಗೌಡ ಜಂಗ್ಲೆಪ್ಪಗೌಡ್ರ ಸ್ಮಾರಕ ಉಮಾ ವಿದ್ಯಾಶ್ರೀ ಟ್ರಸ್ಟ್ ಸಹಯೋಗದಲ್ಲಿ ಪ್ರಗತಿಪರ ಕೃಷಿಕ ಮಹಿಳೆ ಕವಿತಾ ಮಿಶ್ರಾ ಜಾನಪದ ಕಲಾವಿದ ಕಡಬಗೆರೆ ಮುನಿರಾಜು ಮತ್ತು ತಂಡ ಐಐಟಿ ಸಂಶೋಧನಾರ್ಥಿ ಅನ್ನಪೂರ್ಣ ಬಸಯ್ಯ ಬಳೂಲಮಠ ಅವರಿಗೆ ‘ಶರಣಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.