ಗದಗ: ‘ಅವೈಜ್ಞಾನಿಕ ಒಳಮೀಸಲಾತಿಯ ವರ್ಗೀಕರಣ ವಿರೋಧಿ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಪ್ರತಿ ದಿನ ವಿಭಿನ್ನ ರೀತಿಯ ಹೋರಾಟದ ಮೂಲಕ ಸರ್ಕಾರದ ಬಂಜಾರ ವಿರೋಧಿ ನೀತಿಯನ್ನು ಖಂಡಿಸುತ್ತಿದೆ’ ಎಂದು ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಹೇಳಿದರು.
ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಶುಕ್ರವಾರ ಮಾತನಾಡಿದರು.
‘ಸರ್ಕಾರದ ಬಂಜಾರ ವಿರೋಧಿ ನೀತಿ ಖಂಡಿಸಿ ಪ್ರತಿಭಟನಕಾರರು ಕಾಡು ಬೆಟ್ಟಗಳಲ್ಲಿ ದೊರೆಯುವ ಬಂಧರಕಿ ಮತ್ತು ಕಸಬರಗಿಯನ್ನು ಕೈಯಲ್ಲಿ ಹಿಡಿದು, ರಸ್ತೆಯುದ್ದಕ್ಕೂ ಸ್ವಚ್ಛತೆ ನಡೆಸುತ್ತಾ ಪೊರಕೆ ಚಳವಳಿ ನಡೆಸುವ ಮೂಲಕ ಅವೈಜ್ಞಾನಿಕ ಒಳಮೀಸಲಾತಿಯನ್ನು ಕೂಡಲೇ ಕೈಬಿಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ’ ಎಂದರು.
‘ಜಿಲ್ಲೆಯ 72 ತಾಂಡಾಗಳ ಪೈಕಿ ಶುಕ್ರವಾರ ಗದಗ ತಾಲ್ಲೂಕಿನ ಬೆಳದಡಿ, ಮುಂಡರಗಿ ತಾಲ್ಲೂಕಿನ ಬಿಡನಾಳ, ಶಿರಹಟ್ಟಿ ತಾಲ್ಲೂಕಿನ ಜಲ್ಲಿಗೇರಿ, ಲಕ್ಷ್ಮೇಶ್ವರ ತಾಲ್ಲೂಕಿನ ಉಂಡೇನಹಳ್ಳಿ ಹಾಗೂ ಗಜೇಂದ್ರಗಡ ತಾಲ್ಲೂಕಿನ ಲಕ್ಕಲಕಟ್ಟಿ ತಾಂಡಾಗಳ ಬಂಜಾರರು ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಪೊರಕೆ ಚಳವಳಿ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ’ ಎಂದರು.
‘ಕಬಲಾಯತ ಕಟ್ಟಿ, ಹಮ್ಮಿಗಿ, ಮಜ್ಜೂರ, ಅಕ್ಕಿಗುಂದ, ಉಳ್ಳಟ್ಟಿ, ಬೆಣಸಮಟ್ಟಿ ತಾಂಡಾಗಳ ಬಂಜಾರ ಸಮುದಾಯದ ಜನರು ಶನಿವಾರ ಬೆಳಿಗ್ಗೆ 11ಕ್ಕೆ ನಗರದ ಚನ್ನಮ್ಮ ವೃತ್ತದಿಂದ ಸರ್ಕಾರದ ವಿರುದ್ಧ ತಮಟೆ ಚಳವಳಿ ನಡೆಸುವರು’ ಎಂದು ತಿಳಿಸಿದರು.
ಮುಖಂಡರಾದ ಕೆ.ಸಿ.ನಭಾಪುರ, ಪರಮೇಶ ನಾಯಕ್, ಚಂದು ನಾಯಕ್, ಧನಸಿಂಗ್ ನಾಯಕ್, ಈಶ್ವರ್ ನಾಯಕ್, ಐ.ಎಸ್.ಪೂಜಾರ್, ಟಿ.ಡಿ. ಪೂಜಾರ್, ವಿಠಲ್ ತೋಟದ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.