ಗದಗ: ಒಳಮೀಸಲಾತಿಯಲ್ಲಿ ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ನಾಯಕ, ಡಾವಸಾಣ, ಕಾರಭಾರಿ ಹಾಗೂ ಪಂಚರ ನೇತೃತ್ವದ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರವೂ ಮುಂದುವರಿಯಿತು.
ಒಳಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಕಾರ್ಯಕರ್ತರು ಗದಗ ಜಿಲ್ಲಾಧಿಕಾರಿ ಕಚೇರಿ ಸೋಮವಾರದಿಂದ ಅಹೋರಾತ್ರಿ ಧರಣಿ ಕೈಂಗೊಂಡಿದ್ದಾರೆ. ಧರಣಿಯ ಎರಡನೇ ದಿನವಾದ ಮಂಗಳವಾರ, ತಮ್ಮ ಪ್ರತಿಭಟನೆಯೊಂದಿಗೆ ಸೀಗೆ ಹುಣ್ಣಿಮೆ ಹಬ್ಬವನ್ನೂ ಆಚರಣೆ ಮಾಡಿ ಗಮನ ಸೆಳೆದರು.
ಉತ್ತರ ಕರ್ನಾಟಕದಲ್ಲಿ ರೈತರು ತಮ್ಮ ಜಮೀನಿನಲ್ಲಿ ಸಂಭ್ರಮದಿಂದ ಆಚರಿಸುವ ಸೀಗೆ ಹುಣ್ಣಿಮೆಯನ್ನು ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆಯಲ್ಲೇ ಆಚರಿಸಿದರು. ಪಾಂಡವರ ರೂಪದಲ್ಲಿ ಐದು ಕಲ್ಲುಗಳನ್ನು ಪ್ರತಿಷ್ಠಾಪಿಸಿ, ‘ಹುಲ್ಲಿಲಿಗೊ, ಸಿಲ್ಲಿಲಿಗೊ, ಸಲಾಮ್ರಿಗಳ’ ಎನ್ನುತ್ತ ನೈವೇದ್ಯ ಅರ್ಪಿಸಿದರು.
ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣವನ್ನು ಸರ್ಕಾರ ಕೈಬಿಡುವವರೆಗೆ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ, ಸಮುದಾಯದ ಮುಖಂಡರಾದ ಕೆ.ಸಿ.ನದಾಫ್, ಪರಮೇಶ ನಾಯಕ, ಪಾಂಡು ಚವ್ಹಾಣ, ಧನುರಾಂ ತಂಬೂರಿ, ತುಕಾರಾಮ ಲಮಾಣಿ, ಟಿ.ಡಿ.ಪೂಜಾರ, ಭೋಜಪ್ಪ ಲಮಾಣಿ, ಅಂಬವ್ವ ನಾಯಕ, ಸೋಮಪ್ಪ ಲಮಾಣಿ, ಸಕ್ರವ್ವ ಲಮಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.