ADVERTISEMENT

ರೋಣ: ನಿವೃತ್ತಿ ನಂತರದ ಬದುಕಿಗೆ ಸಮಗ್ರ ಕೃಷಿ ಆಸರೆ

ಸಾವಯವ ಪದ್ಧತಿಯಲ್ಲಿ ಮಿಶ್ರ ಬೇಸಾಯ: ಯಶಸ್ಸು ಕಂಡ ರೈತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:36 IST
Last Updated 23 ಜನವರಿ 2026, 8:36 IST
ವಾಟರ್ ಆಪಲ್ ಗಿಡದ ಪಕ್ಕದಲ್ಲಿ ರಮೇಶ ಕುರಿ
ವಾಟರ್ ಆಪಲ್ ಗಿಡದ ಪಕ್ಕದಲ್ಲಿ ರಮೇಶ ಕುರಿ   

ರೋಣ: ರೈತಾಪಿ ಕುಟುಂಬದಿಂದ ಬೆಳೆದು ಬಂದ ಹಲವು ನೌಕರರು ನಿವೃತ್ತಿ ನಂತರದ ಜೀವನವನ್ನು ಕುಟುಂಬದ ಮೂಲ ವೃತ್ತಿಯಾದ ಕೃಷಿಯಲ್ಲಿ ಕಳೆಯಬೇಕೆಂಬ ಹಂಬಲ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ತಾಲ್ಲೂಕಿನ ಅರಹುಣಸಿ ಗ್ರಾಮದ ಸಾರಿಗೆ ನೌಕರ ರಮೇಶ ಕುರಿ ಇಂಥವರಿಗೆ ಮಾದರಿಯಾಗಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ರಮೇಶ ಕುರಿ ಅವರು ನಿವೃತ್ತಿಯ ನಂತರ ಸ್ವಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡು ಸಾಧನೆ ಮಾಡಬೇಕು ಎಂದು ಯೋಚಿಸಿದಾಗ ತಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದ 5 ಎಕರೆ ಜಮೀನಿನಲ್ಲಿ ಕೃಷಿ ಪರಿಣಿತರ ಮಾರ್ಗದರ್ಶನದಲ್ಲಿ ಸಮಗ್ರ ಕೃಷಿ ಕೈಗೊಳ್ಳಲು ಪ್ರಾರಂಭಿಸಿದರು. ಪ್ರಾರಂಭದಲ್ಲಿ ನೌಕರಿ ಮತ್ತು ಜಮೀನಿನ ಕೆಲಸಗಳೆರಡನ್ನು ನಿಭಾಯಿಸುವುದು ಕಷ್ಟವಾದರೂ ಮನೆಯವರ ಸಹಾಯದಿಂದ ಇಂದು ಅಚ್ಚುಕಟ್ಟಾದ ತೋಟ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿಗಳ ಕೃಷಿ ಪರ ಚಿಂತನೆಗಳ ಮಾತುಗಳಿಂದ ಪ್ರೇರೇಪಿತರಾಗಿ 5 ಎಕರೆ ಜಮೀನಲ್ಲಿ ಕೊಳವೆಬಾವಿ ಕೊರೆಸಿ ಕೃಷಿ ಪರಿಣಿತರ ಮಾರ್ಗದರ್ಶನದಲ್ಲಿ ತೋಟದ ಅಲ್ಪ ಭಾಗದಲ್ಲಿ ನಿಂಬೆ ಸಸಿ ನೆಟ್ಟು ಉಳಿದ ಜಮೀನುಗಳಲ್ಲಿ ಒಂದಾದ ನಂತರ ಒಂದು ತೆಂಗು, ಪೇರಲ, ನುಗ್ಗೆ, ಆಫ್ರಿಕನ್ ಮಹಾಗನಿ, ಸೀತಾಫಲ, ಮಾವು, ಜಂಬು ನೇರಳೆ, ಏಲಕ್ಕಿ ಬಾಳೆ ಬೆಳೆಯಲಾಗಿದ್ದು, ಎಲ್ಲ ಬೆಳಗಳಿಗೂ ಹನಿ ನೀರಾವರಿಯ ಮೂಲಕ ನೀರು ಹಾಯಿಸುತ್ತಿದ್ದಾರೆ.

ADVERTISEMENT

ತೋಟದಲ್ಲಿ ಸದ್ಯ 300 ಕಾಗ್ಜಿ ತಳಿ ಲಿಂಬೆ ಗಿಡ, 200 ಡಿಜೆ ತಳಿಯ ತೆಂಗಿನ ಗಿಡ ನೆಡಲಾಗಿದ್ದು, ಸದ್ಯ ಲಿಂಬೆ ಮಾರಾಟದಿಂದ ಪ್ರತಿ ವರ್ಷ ₹1 ಲಕ್ಷ ಆದಾಯ ಬರುತ್ತಿದೆ. ಎಳೆನೀರು ಮಾರಾಟದಿಂದ ₹2 ಲಕ್ಷ, ನುಗ್ಗೆ ಮಾರಾಟದಿಂದ ₹25ರಿಂದ ₹50 ಸಾವಿರ ಸಂಪಾದನೆ ಮಾಡುತ್ತಿದ್ದಾರೆ. ಜೊತೆಗೆ 50 ಪೇರಲ, 35 ಸೀತಾಫಲ, 30 ಆಪೋಸ್ ತಳಿಯ ಮಾವಿನ ಗಿಡ, 15 ಜಂಬು ನೇರಳೆ, ಜಿ 9 ತಳಿಯ 20 ಬಾಳೆ ಗಿಡಗಳು, 20 ಏಲಕ್ಕಿ ಬಾಳೆ ಗಿಡ ನೆಡಲಾಗಿದ್ದು, ಸಮೃದ್ಧವಾಗಿ ಬೆಳೆದಿವೆ. ಅರಣ್ಯ ಬೆಳೆಯಾದ 500 ಆಫ್ರಿಕನ್ ಮಹಾಗನಿ ಮರ ಬೆಳೆಯಲಾಗಿದೆ. ಜೊತೆಗೆ ಪ್ರಾಯೋಗಿಕವಾಗಿ ಕಾಫಿ, ಸ್ಟಾರ್ ಫ್ರೂಟ್, ವಾಟರ್ ಆ್ಯಪಲ್, ಕವಳಿ, ದಾಲ್ಚಿನ್ನಿ, ಚಿಕ್ಕು ಗಿಡಗಳನ್ನು ಸಹ ಬೆಳೆಯಲಾಗಿದೆ.

ಎಲ್ಲ ಬೆಳೆಗಳಿಗೂ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಕೇವಲ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಬಳಸಲಾಗಿದೆ. ತೆಂಗಿನ ಗಿಡಗಳ ಬೇರುಗಳಿಗೆ ತೋಟದ ಸಾವಯವ ತ್ಯಾಜ್ಯಗಳಿಂದ ಹೊದಿಕೆ ಹಾಕಲಾಗಿದ್ದು ಇದರಿಂದ ತೆಂಗಿನ ಗಿಡಗಳ ಬೇರುಗಳಲ್ಲಿ ಹೆಚ್ಚಿನ ತೇವಾಂಶ ಉಂಟಾಗಲಿದ್ದು ನೀರಿನ ದಕ್ಷತೆಯ ಜೊತೆಗೆ ಅತ್ಯುತ್ತಮ ಫಸಲು ಪಡೆಯಬಹುದು ಎಂಬುದು ರಮೇಶ ಅವರ ಅಭಿಪ್ರಾಯವಾಗಿದೆ.

ರಮೇಶ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು ಕೃಷಿಯಲ್ಲಿ ಮೌಲ್ಯವರ್ಧನೆಗೆ ಆದ್ಯತೆ ನೀಡಬೇಕು ಮುಂದಿನ ದಿನಮಾನಗಳಲ್ಲಿ ಸೋಲಾರ್ ಪಂಪ್ ಸೆಟ್ ಅಳವಡಿಕೆ, ತೋಟದಲ್ಲಿ ಬೆಳೆದ ನಿಂಬೆಕಾಯಿಗಳಿಂದ ಉಪ್ಪಿನಕಾಯಿ ತಯಾರಿ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ.

ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಕಪ್ಪತಗುಡ್ಡದ ಸ್ವಾಮೀಜಿಗಳ ಕೃಷಿ ಬಗೆಗಿನ ವಿಚಾರಗಳಿಂದ ಪ್ರಭಾವಿತನಾಗಿ ಸಮಗ್ರ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ. ಯುವಜನತೆ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು
ರಮೇಶ ಕುರಿ, ಕೃಷಿಕ

ರಮೇಶ ಅವರ ಪತ್ನಿ ಶಿಲ್ಪಾ ಅವರು ಕೃಷಿ ಕಾಯಕದಲ್ಲಿ ನಿರತರಾಗಿದ್ದು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ತಮ್ಮ ವೃತ್ತಿ ಕೈ ಬಿಟ್ಟು ಅರಹುಣಸಿ ಗ್ರಾಮದ ತೋಟದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಕೋಳಿ ಸಾಕಣೆ, ಜೇನು ಸಾಕಣೆ, ಮೊಲ ಸಾಕಣೆ ಹಾಗೂ ಕೃಷಿ ಹೊಂಡದಲ್ಲಿ ಮೀನು ಸಾಕಣೆ ಮೂಲಕ ಕೃಷಿಯ ಉಪಕಸಬುಗಳ ಮೂಲಕವೂ ಕುಟುಂಬದ ಆದಾಯ ಹೆಚ್ಚಿಸುತ್ತಿದ್ದು ಸ್ಥಳೀಯ ಮಹಿಳಾ ಕೃಷಿಕರಿಗೆ ಮಾದರಿಯಾಗಿದ್ದಾರೆ. ಇವರ ಈ ಸಾಧನೆ ಪರಿಗಣಿಸಿ 2024 - 25ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಮೇಶ ಕುರಿ ಅವರ ತೋಟದ ವಿಹಂಗಮ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.