ADVERTISEMENT

ಗದಗ: ಏರದ ಬೆಲೆ.. ಹಾಳಾದ ಮೆಕ್ಕೆಜೋಳ! ರೈತರಲ್ಲಿ ಹೆಚ್ಚಿದ ಆತಂಕ

ಖರೀದಿ ಕೇಂದ್ರ ತೆರೆಯಲು ಆಗ್ರಹ; ಮಿತಿ ನಿಗದಿಪಡಿಸದೇ ಖರೀಸುವಂತೆ ಒತ್ತಾಯ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 28 ನವೆಂಬರ್ 2025, 20:03 IST
Last Updated 28 ನವೆಂಬರ್ 2025, 20:03 IST
ತೇವಾಂಶದಿಂದ ಹಾಳಾಗಿರುವ ಮೆಕ್ಕೆಜೋಳ
ತೇವಾಂಶದಿಂದ ಹಾಳಾಗಿರುವ ಮೆಕ್ಕೆಜೋಳ   

ಗದಗ: ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ಒಂದೂವರೆ ತಿಂಗಳ ಹಿಂದೆಯೇ ಕೊಯ್ಲ ಮಾಡಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಮೆಕ್ಕೆಜೋಳ ಅತಿಯಾದ ತೇವಾಂಶದಿಂದ ಹಾಳಾಗುತ್ತಿದೆ. ಅತ್ತ ಖರೀದಿ ಕೇಂದ್ರವೂ ಆರಂಭಗೊಳ್ಳದೇ, ಇತ್ತ ಹೆಚ್ಚಿನ ಬೆಲೆಗೂ ಮಾರಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರತಿ ವರ್ಷದಂತೆ ಈ ಸಲವೂ ರೈತರು ಮೆಕ್ಕೆಜೋಳವನ್ನು ಮುಂಚಿತವಾಗಿಯೇ ಕೊಯ್ಲು ಮಾಡಿ, ಆ ಜಮೀನಿನಲ್ಲಿ ಕಡಲೆ, ಕುಸುಬಿ ಬಿತ್ತನೆ ಮಾಡಿದ್ದಾರೆ. ಆದರೆ, ಸೂಕ್ತ ಬೆಲೆ ಸಿಗದ ಕಾರಣ ಮೆಕ್ಕೆಜೋಳವನ್ನು ಇನ್ನೂ ಮಾರಿಲ್ಲ. ಮೆಕ್ಕೆಜೋಳವನ್ನು ತೆಳುವಾಗಿ ಹರಡಿ ಒಣಗಿಸಲು ರೈತರಿಗೆ ಕಣದ ವ್ಯವಸ್ಥೆ ಇಲ್ಲ. ರಸ್ತೆಯಲ್ಲೇ ಕಣ ಮಾಡಿಕೊಂಡು ಒಣಗಿಸುತ್ತಾ, ಗುಣಮಟ್ಟ ಕಾಪಾಡಿಕೊಳ್ಳಲು ಹೆಣಗುತ್ತಿದ್ದಾರೆ.

‘ಜೋಳ, ಹೆಸರು, ಕಡಲೆ ಬೆಳೆಯಂತೆ ಮೆಕ್ಕೆಜೋಳವನ್ನು ಹೆಚ್ಚು ದಿನ ಸಂಗ್ರಹಿಸಿಡುವುದು ಕಷ್ಟ. ಸೂಕ್ಷ್ಮ ಬೆಳೆಯಾದ್ದರಿಂದ ಕೊಯ್ಲು ಪ್ರಕ್ರಿಯೆಯಲ್ಲಿ ತಡ ಮಾಡಬಹುದು. ಆದರೆ, ಕೊಯ್ಲು ಮಾಡಿದ ಬಳಿಕ ಅದರ ಗುಣಮಟ್ಟ ಕಾಯ್ದುಕೊಳ್ಳುವುದು ಕಠಿಣ. ಅದಕ್ಕೆ ರೈತರು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಒತ್ತಾಯಿಸುತ್ತಿದ್ದಾರೆ’ ಎಂದು ರೈತ ಮುಖಂಡ ಚನ್ನಪ್ಪ ಷಣ್ಮುಖಿ ‘ಪ್ರಜಾವಾಣಿ’ಗೆ ಹೇಳಿದರು.

ADVERTISEMENT

‘ಸರ್ಕಾರ ಇನ್ನೂ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದಿಲ್ಲ. ಇದರ ನಡುವೆ ಖಾಸಗಿ ಖರೀದಿದಾರರು ಮನಸ್ಸಿಗೆ ಬಂದಷ್ಟು ಬೆಲೆಗೆ ಕೇಳುತ್ತಿದ್ದಾರೆ. ಈ ಪರಿಸ್ಥಿತಿಯಿಂದ ಬೇಸತ್ತ ಕೆಲ ರೈತರು ಇದರ ಉಸಾಬರಿಯೇ ಬೇಡವೆಂದು ಸಿಕ್ಕಷ್ಟು ಬೆಲೆಗೆ ಮಾರುತ್ತಿದ್ದಾರೆ.

‘ಸರ್ಕಾರವು ತ್ವರಿತವಾಗಿ ಖರೀದಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರೆಯಬೇಕು. ಇದರಿಂದ ರೈತರಿಗೆ ಸಾರಿಗೆ ವೆಚ್ಚ ಮತ್ತು ಸಮಯದ ಉಳಿತಾಯ ಆಗುತ್ತದೆ. ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಏಕಕಾಲಕ್ಕೆ ಆಗುವಂತೆ ವ್ಯವಸ್ಥೆ ಮಾಡಬೇಕು. ಖರೀದಿಸಿದ ಐದು ದಿನಗಳ ಒಳಗೆ ರೈತರ ಖಾತೆಗೆ ಹಣ ಜಮೆ ಮಾಡಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.

ಲಕ್ಷ್ಮೇಶ್ವರ ತಾಲ್ಲೂಕಿನ ರೈತರು ಮೆಕ್ಕೆಜೋಳ ಹಾಳಾಗುವುದನ್ನು ತಡೆಯಲು ರಸ್ತೆಯಲ್ಲೇ ಒಣಗಿಸುತ್ತಿರುವುದು.

ಮೆಕ್ಕೆಜೋಳ ಬೆಳೆಯಲು ಎಕರೆಗೆ ₹15 ಸಾವಿರದವರೆಗೆ ಖರ್ಚಾಗುತ್ತದೆ. ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. 14 ದಿನಗಳಿಂದ ಜಿಲ್ಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆದಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ.

-ಚನ್ನಪ್ಪ ಷಣ್ಮುಖಿ ರೈತ ಮುಖಂಡ

ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿಗೆ ಅನುಮತಿ ಕೊಟ್ಟಿದೆ. ಮುಂಚಿತವಾಗಿಯೇ ಖರೀದಿ ಕೇಂದ್ರ ತೆರೆಯಲು ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು ಇನ್ನೆರಡು ದಿನಗಳಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

-ಸಿ.ಎನ್‌.ಶ್ರೀಧರ್‌ ಜಿಲ್ಲಾಧಿಕಾರಿ ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.