
ರೋಣ: ಮಳೆಯಾಶ್ರಿತ ಕೃಷಿ ಭೂಮಿ ಹೊಂದಿರುವ ಮತ್ತು ಹೆಚ್ಚು ಬರಕ್ಕೆ ತುತ್ತಾಗುವ ಕರ್ನಾಟಕದ ತಾಲ್ಲೂಕುಗಳ ಪೈಕಿ ರೋಣ ಕೂಡ ಒಂದಾಗಿದೆ. ಈ ಹಿಂದೆ ಇಲ್ಲಿ ಜನ–ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸಬೇಕಿತ್ತು. ಆದರೆ, ಕೆರೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬಂದ ನಂತರ ಚಿತ್ರಣ ಬದಲಾಗಿದೆ. ಬೇಸಿಗೆಯಲ್ಲೂ ನೀರಿನ ಬವಣೆ ನೀಗಿದೆ.
ಇಲ್ಲಿನ ಹೊಳೆಆಲೂರು ಸಮೀಪ ಹರಿಯುವ ಮಲಪ್ರಭೆಯನ್ನು ಹೊರತುಪಡಿಸಿದರೆ ತಾಲ್ಲೂಕಿನಲ್ಲಿ ಯಾವುದೇ ಜಲಮೂಲಗಳಿಲ್ಲ. ಸತತ ಅನಾವೃಷ್ಟಿಯ ಕಾರಣ ಅಂತರ್ಜಲ ಮಟ್ಟ ಕುಸಿದು, ಕೊಳವೆಬಾವಿಗಳು ಸಹಿತ ವಿಫಲವಾಗುತ್ತಿದ್ದ ಸಂದರ್ಭದಲ್ಲಿ ತಾಲ್ಲೂಕಿನ ರೈತರ ಒತ್ತಡ ಹಾಗೂ ಶಾಸಕ ಜಿ.ಎಸ್.ಪಾಟೀಲರ ಇಚ್ಛಾಶಕ್ತಿಯಿಂದ ಇಂದು ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಿನ 26 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ಮಲಪ್ರಭೆಗೆ ಕಟ್ಟಿರುವ ಸವದತ್ತಿ ಬಳಿಯ ನವಿಲುತೀರ್ಥ ಜಲಾಶಯದಿಂದ ಹಾಗೂ ಕೃಷ್ಣಾ ನದಿಯ ಬಿ ಸ್ಕೀಮ್ ಅಡಿ ತಾಲ್ಲೂಕಿನ 26 ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಅವಿಭಜಿತ ರೋಣ ತಾಲ್ಲೂಕಿನ 99 ಗ್ರಾಮಗಳ ಜನ ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಲಾಗುತ್ತಿದೆ.
ರೋಣ ಹಾಗೂ ಗಜೇಂದ್ರಗಡ ತಾಲ್ಲೂಕುಗಳ ಜಿಗಳೂರು, ಹೊಳೆಆಲೂರು, ಬೊಮ್ಮಸಾಗರ, ಬೆಳವಣಿಕಿ, ಇಟಗಿ, ನಾಗೇಂದ್ರಗಡ ಸೇರಿದಂತೆ ವಿವಿಧ ಗ್ರಾಮಗಳ ಕೆರೆಗಳನ್ನು ಯೋಜನೆ ಅಡಿ ತುಂಬಿಸಲಾಗಿದ್ದು, ಆ ಕೆರೆಗಳ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.
ಜನವರಿ– ಫೆಬ್ರುವರಿ ತಿಂಗಳಲ್ಲಿ ಒಮ್ಮೆ ಕೆರೆಗಳಿಗೆ ನೀರು ತುಂಬಿಸಿದರೆ, ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. ನಂತರ ಮಳೆಗಾಲ ಪ್ರಾರಂಭವಾಗುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಇಡೀ ವರ್ಷ ಎದುರಾಗದು.
ಪ್ರತಿ ವರ್ಷ ಇದೇ ಸಮಯಕ್ಕೆ ಸರಿಯಾಗಿ ಕೆರೆಗಳಿಗೆ ನೀರು ತುಂಬಿಸಲು ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹಾಗಾದಲ್ಲಿ ಮಾತ್ರ ಜನಸಾಮಾನ್ಯರು, ರೈತರು ನೆಮ್ಮದಿಯ ನಿಟ್ಟುಸಿರು ಬಿಡಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯಪಟ್ಟಿದ್ದಾರೆ.
‘ಮಲಪ್ರಭೆ ಹಾಗೂ ಕೃಷ್ಣಾ ನದಿಗಳಿಂದ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆ ಚಾಲ್ತಿಯಲ್ಲಿದ್ದು ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಈ ಯೋಜನೆ ಅನುಷ್ಠಾನಗೊಂಡ ಬಳಿಕ ತಾಲ್ಲೂಕಿನ ಜನ ಹಾಗೂ ಜಾನುವಾರುಗಳಿಗೆ ಬಿರು ಬೇಸಿಗೆಯಲ್ಲಿಯೂ ಕುಡಿಯುವ ನೀರಿನ ಕೊರತೆ ಆಗದು ಎಂಬ ವಿಶ್ವಾಸ ಬಂದಿದೆ’ ಎಂದು ರೋಣ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ ತಿಳಿಸಿದ್ದಾರೆ.
ರೋಣ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಪ್ರಕ್ರಿಯೆ ಭರದಿಂದ ಸಾಗಿದ್ದು ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದು. ಜತೆಗೆ ಅಬ್ಬಿಗೇರಿ ನರೇಗಲ್ ಭಾಗದ 9 ಕೆರೆಗಳಿಗೆ ನೀರನ್ನು ಲಿಫ್ಟ್ ಮಾಡುವ ಯೋಜನೆ ಕೂಡ ಡಿಪಿಆರ್ ಆಗಿದ್ದು ಶೀಘ್ರವೇ ಆ ಭಾಗದ ಕೆರೆ ತುಂಬಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಜಗದೀಶ ಕಾರ್ಯನಿರ್ವಾಹಕ ಎಂಜಿನಿಯರ್ ನೀರಾವರಿ ಇಲಾಖೆ ರೋಣ
ಹೊಳೆಆಲೂರು ಸೋಮನಕಟ್ಟಿ ಯಾವಗಲ್ ಸೇರಿದಂತೆ 5 ಕೆರೆಗಳನ್ನು ತುಂಬಿಸಲಾಗುತ್ತಿದ್ದು ಇಲ್ಲಿಂದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸದ್ಯ 5 ಕೆರೆಗಳನ್ನು ತುಂಬಿಸಲಾಗಿದ್ದು ಜೂನ್‌ವರೆಗೆ ಆ ಎಲ್ಲಾ ಹಳ್ಳಿಗಳಿಗೂ ಸಮರ್ಪಕವಾಗಿ ನೀರು ಪೂರೈಸಬಹುದುರಶ್ಮಿ ನಡುವಿನಮನಿ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.