
ರೋಣ: ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಪರ ಯೋಜನೆಗಳಿಗೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಯಾವುದೇ ರೀತಿಯ ಹಣದ ಕೊರತೆ ಉಂಟಾಗಿಲ್ಲ’ ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಗದಗ, ತಾಲ್ಲೂಕು ಪಂಚಾಯಿತಿ ರೋಣ ಹಾಗೂ ಗ್ರಾಮ ಪಂಚಾಯಿತಿ ಹೊಸಳ್ಳಿ ಸಹಯೋಗದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹70 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ, ಜಿಲ್ಲಾ ಪಂಚಾಯಿತಿ ನಿರ್ಬಂಧಿತ ಅನುದಾನದಡಿ ₹11.17 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ, ₹15 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಗ್ರಾಮದ ಕೆರೆಯ ಹೂಳೆತ್ತುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಪಂಚ ಗ್ಯಾರಂಟಿಗಳು ಎಲ್ಲಾ ಫಲಾನುಭವಿಗಳನ್ನು ತಲುಪಿದ್ದು, ಪಡಿತರ ಚೀಟಿ ವಿತರಣೆ ಹಾಗೂ ಪಹಣಿಯಲ್ಲಿನ ದೋಷಗಳ ನಿವಾರಣೆಗೆ ಕಂದಾಯ ಇಲಾಖೆಯು ಪೋಡಿ ಆಂದೋಲನ ಜಾರಿಗೆ ತಂದಿದೆ. ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ಒಂದು ಲಕ್ಷ ರೈತರಿಗೆ ಹಕ್ಕುಪತ್ರ ನೀಡಲಾಗಿದೆ. ಗದಗ ಜಿಲ್ಲೆಯಲ್ಲಿ ಪ್ರತಿಶತ 99ರಷ್ಟು ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗಿದ್ದು. ರಾಜ್ಯದಲ್ಲಿಯೇ ಗದಗ ಜಿಲ್ಲೆ ಮುಂಚೂಣಿಯಲ್ಲಿದೆ’ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದಗ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ‘ಧರ್ಮಸ್ಥಳ ಸಂಘ ಮೂಲ ಸೌಲಭ್ಯಗಳ ಅಭಿವೃದ್ಧಿ, ಅಂತರ್ಜಲ ಹೆಚ್ಚಳಕ್ಕೆ ಕೆರೆ ಉಳಿಸುವ ಕ್ರಮಕ್ಕೆ ಮುಂದಾಗಿದೆ. ಗದಗ ಜಿಲ್ಲೆಯಲ್ಲಿ 26 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯ 46 ಕೆರೆಗಳ ಹೊಳೆತ್ತುವ ಕಾರ್ಯ ನಡೆಸಲಾಗುತ್ತಿದ್ದು, ಜನತೆ ನೀರಿನ ಮೂಲಗಳಿಗೆ ಕಸಕಡ್ಡಿ ಹಾಕುವುದನ್ನು ಹಾಗೂ ಅವುಗಳ ಬಳಿ ಮಲಮೂತ್ರವಿಸರ್ಜನೆ ಮಾಡುವುದನ್ನು ಮಾಡಬಾರದು’ ಎಂದರು.
ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಮ್ಮ ಸ್ಥಾವರಮಠ, ಉಪಾಧ್ಯಕ್ಷ ಶಿವಯೋಗಿ ತಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ಪ್ರಭು ಮೇಟಿ, ವ್ಹಿ.ಆರ್.ಗುಡಿಸಾಗರ, ಅಭಿಷೇಕ ನವಲಗುಂದ, ಹೇಮಯ್ಯ ಹಿರೇಮಠ, ಅಂದಪ್ಪ ಹೊಸಳ್ಳಿ, ಬಸವರಡ್ಡಿ ರೆಡ್ಡೇರ, ಶಿವಪ್ಪ ತಳವಾರ, ಎಸ್.ಎಮ್.ಮೆಣಸಿನಕಾಯಿ, ಕೆ.ಆರ್.ಪಿಂಜಾರ, ಶಿವಲಿಂಗಪ್ಪ ಜಾಲಿಹಾಳ, ಪರಶುರಾಮ ಕುರಿ, ಅಂದಪ್ಪ ಕಂಬಳಿ, ಮಹಾಬಲೇಶ ಪಟಗಾರ ಇದ್ದರು.
Cut-off box - ‘ಗ್ಯಾರಂಟಿ: ಹಗುರವಾಗಿ ಮಾತನಾಡದಿರಿ’ ‘ಹಿಂದಿನ ಸರ್ಕಾರದ ಸಾಲದ ಜೊತೆಗೆ ಅಭಿವೃದ್ಧಿ ಯೋಜನೆಗೆ ಹಾಗೂ ಗ್ಯಾರಂಟಿ ಯೋಜನೆಗೆ ಅನುದಾನ ಹೊಂದಿಸಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದ್ದು ಅದನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಗ್ಯಾರಂಟಿ ಯೋಜನೆಗಳು ಆರ್ಥಿಕ ಸಮಾನತೆಯನ್ನು ಜಾರಿಗೆ ತರಲು ಸಹಕಾರಿಯಾಗಿದ್ದು ಇಂತಹ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡಬಾರದು’ ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.