ADVERTISEMENT

ರೋಣ| ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರು: ಶಿಸ್ತುಕ್ರಮದ ಬಿಸಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:19 IST
Last Updated 13 ಡಿಸೆಂಬರ್ 2025, 5:19 IST
ರೋಣ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ನಂದಾ ಹಣಬರಟ್ಟಿ ಮಾತನಾಡಿದರು
ರೋಣ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ನಂದಾ ಹಣಬರಟ್ಟಿ ಮಾತನಾಡಿದರು   

ರೋಣ: ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ನಂದಾ ಹಣಬರಟ್ಟಿ ಗರಂ ಆದರು. ಕಾರಣ ಕೇಳಿ ನೋಟಿಸ್‌ ಜಾರಿಗೆ ಸೂಚಿಸಿದರು.

ಪ್ರಮುಖ ಇಲಾಖೆಗಳ ಅಧಿಕಾರಿಗಳ ಗೈರಿನಲ್ಲಿಯೇ ಸಭೆ ಆರಂಭಿಸಿದ ಆಡಳಿತಾಧಿಕಾರಿ ನಂದಾ, ‘ವಸತಿ ನಿಲಯಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಲು ಕ್ರಮವಹಿಸಬೇಕು’ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ದಾಖಲಿಸುತ್ತಿರುವ ಶಾಲೆಗಳ ಮೇಲೆ ನಿಗಾ ಇಡಬೇಕು. ಅಧಿಕಾರಿಗಳ ತಂಡ ರಚನೆ ಮಾಡಿ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡುವಂತೆ ತಿಳಿಸಿದರು.ಈ ವೇಳೆ ಮಧ್ಯೆ ಪ್ರವೇಶಿಸಿದ ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಕಂದಕೂರ, ‘ಎಸ್ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು 8 ಮತ್ತು 9ನೇ ತರಗತಿಯಿಂದಲೇ ಸಿದ್ಧತೆ ಆರಂಭಿಸಬೇಕು’ ಎಂದು ಸಲಹೆ ನೀಡಿದರು.

‘ತಾಲ್ಲೂಕಿನ ನೈನಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಯೋಜನೆಯ ಆಹಾರವನ್ನು ವಿದ್ಯಾರ್ಥಿಗಳಿಗೆ ಇಲಾಖೆಯ ನಿಯಮದ ಪ್ರಕಾರ ಏಕೆ ನೀಡಲಾಗುತ್ತಿಲ್ಲ’ ಎಂದು ಇಒ ಚಂದ್ರಶೇಖರ ಕಂದಕೂರ ಪ್ರಶ್ನಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಅಕ್ಷರ ದಾಸೋಹ ಅಧಿಕಾರಿ, ‘ಸ್ಥಳೀಯ ಕೆಲವು ರಾಜಕೀಯ ಮುಖಂಡರುಗಳ ಹಸ್ತಕ್ಷೇಪದಿಂದ ತೊಂದರೆಯಾಗಿದೆ’ ಎಂದರು.

ಸಭೆಯಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ, ಅತಿಥಿ ಶಿಕ್ಷಕರ ವೇತನ ಮಂಜೂರು ಮಾಡಲು ₹1 ಲಕ್ಷ ಕೊರತೆ ಇರುವ ಬಗ್ಗೆ ಗಮನ ಸೆಳೆದರು.

ಪ್ರತಿ ತಿಂಗಳು 3ನೇ ತಾರೀಖಿನ ಒಳಗಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು ತಪ್ಪದೆ ತಮ್ಮ ಇಲಾಖೆಗಳ ಪ್ರಗತಿಯ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು. 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್‌ ಗೈರು ಹಾಜರಾದ ಹಿನ್ನೆಲೆಯಲ್ಲಿ ಅವರ ಪರವಾಗಿ ಬಂದಿದ್ದ ಗುತ್ತಿಗೆ ನೌಕರ ಮಹೇಶ ಕೇಸರಿಗೆ ವರದಿ ಮಂಡಿಸದಂತೆ ಕೂರಿಸಿದರು.

ಬೀದಿನಾಯಿಗಳ ನಿಯಂತ್ರಣಕ್ಕೆ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ರೋಣ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಅಧಿಕಾರಿ ನಂದಾ ಹಣಬರಟ್ಟಿ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಚಂದ್ರಶೇಖರ ಕಂದಕೂರ ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಲ್ಲೂಕಿನ ನೈನಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಇಲಾಖೆಯ ನಿಯಮದ ಪ್ರಕಾರ ನಡೆಯುತ್ತಿಲ್ಲ. ಸ್ಥಳೀಯ ರಾಜಕೀಯ ಒತ್ತಡಕ್ಕೆ ಮಣಿಯದೆ ಇಲಾಖೆಯ ನಿಯಮದ ಪ್ರಕಾರ ಕೆಲಸ ನಿರ್ವಹಿಸಿ
ಚಂದ್ರಶೇಖರ ಕಂದಕೂರ ಇಒ ರೋಣ
ನೋಟಿಸ್‌ ಜಾರಿಗೆ ಶಿಫಾರಸು
‘ಸಭೆಗೆ ಗೈರು ಹಾಜರಾದ ಸಿಡಿಪಿಒ ಎಂ.ಆರ್.ಬಿ.ಸಿ ಪಿ.ಎಂ.ಜಿ.ಎಸ್.ವೈ ನೀರಾವರಿ ಇಲಾಖೆ ಕೈಗಾರಿಕೆ ನಿಗಮ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಆಯಾ ಇಲಾಖೆಗಳ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ರೋಣ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ನಂದಾ ಹಣಬರಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.