ADVERTISEMENT

ರೋಣ: ಬಯಲು ಬಹಿರ್ದೆಸೆ ತಾಣವಾದ ಕೈಗಾರಿಕಾ ಪ್ರದೇಶ

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ: ಮೂರು ದಶಕಗಳು ಕಳೆದರೂ ಸಿಗದ ಮೂಲಸೌಕರ್ಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 3:00 IST
Last Updated 5 ಜನವರಿ 2026, 3:00 IST
ಮುಳ್ಳಿನ ಗಿಡಗಳಿಂದ ಆವೃತ್ತವಾದ ರೋಣ ಕೈಗಾರಿಕಾ ಪ್ರದೇಶ
ಮುಳ್ಳಿನ ಗಿಡಗಳಿಂದ ಆವೃತ್ತವಾದ ರೋಣ ಕೈಗಾರಿಕಾ ಪ್ರದೇಶ   

ರೋಣ: ಸ್ಥಳೀಯವಾಗಿ ಹೆಚ್ಚುತ್ತಿದ್ದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸ್ಥಾಪಿಸಿದ್ದ ಕೈಗಾರಿಕಾ ಪ್ರದೇಶ ಇಂದು ಮೂಲಸೌಲಭ್ಯಗಳ ಕೊರತೆಯಿಂದಾಗಿ ಬಯಲು ಬಹಿರ್ದೆಸೆಯ ತಾಣವಾಗಿ ಮಾರ್ಪಟ್ಟಿದೆ.

ಕೃಷಿ ಪ್ರಧಾನವಾದ ರೋಣ ತಾಲ್ಲೂಕಿನಲ್ಲಿ ಕೈಗಾರಿಕಾ ಕ್ರಾಂತಿ ಮಾಡುವ ಕನಸಿನೊಂದಿಗೆ 1996ರಲ್ಲಿ ಅಂದಿನ ರೋಣ ಶಾಸಕ ಶ್ರೀಶೈಲಪ್ಪ ಬಿದರೂರು ತಾಲ್ಲೂಕಿಗೆ ಒಂದು ಸರ್ಕಾರಿ ಐಟಿಐ ಕಾಲೇಜು ಮಂಜೂರು ಮಾಡಿಸುವುದರ ಜತೆಗೆ ರೋಣ ಪಟ್ಟಣದ ಹೊರವಲಯದಲ್ಲಿ ನಾಲ್ಕು ಎಕರೆ ಜಮೀನು ಗುರುತಿಸಿ, ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿಸಿದ್ದರು. ಬಳಿಕ ಅಲ್ಲಿ ಕೈಗಾರಿಕಾ ಪ್ರದೇಶಗಳಿಗೆ ಬೇಕಾದ ಸೂಕ್ತ ಕಟ್ಟಡಗಳನ್ನು ಸಹ ನಿರ್ಮಿಸಲಾಗಿತ್ತು.

ಆದರೆ, ನಂತರ ಬಂದ ಎಲ್ಲ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಮೂರು ದಶಕಗಳು ಕಳೆದರೂ ಕೈಗಾರಿಕಾ ಪ್ರದೇಶಕ್ಕೆ ಸೌಲಭ್ಯಗಳು ಸಿಗಲಿಲ್ಲ. ಈ ಕಾರಣದಿಂದಾಗಿ, ಇಲ್ಲಿನ ಕೈಗಾರಿಕಾ ಪ್ರದೇಶ ಇಂದು ಮಲ ವಿಸರ್ಜನೆ ಹಾಗೂ ಅಕ್ರಮ ಚಟುವಟಿಕೆಗಳ ತಾಣವಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ADVERTISEMENT

ಪ್ರಸ್ತುತ ಇರುವ ಆರು ಕಟ್ಟಡಗಳ ಪೈಕಿ ಎರಡರಲ್ಲಿ ಐಟಿಐ ಕಾಲೇಜು ಮತ್ತು ಒಂದರಲ್ಲಿ ವೆಲ್ಡಿಂಗ್ ಉದ್ಯಮ ನಡೆಯುತ್ತಿದೆ. ಅದು ಬಿಟ್ಟರೆ ಇನ್ನುಳಿದ ಮೂರು ಪ್ರಮುಖ ಕಟ್ಟಡಗಳು ನಿರುಪಯುಕ್ತವಾಗಿದ್ದು ಸುತ್ತಲೂ ಮುಳ್ಳಿನ ಗಿಡಗಳು ಬೆಳೆದಿವೆ. ಕಾಲ ಉರುಳಿದಂತೆ ಅಕ್ಕ ಪಕ್ಕದಲ್ಲಿ ಜನವಸತಿ ಪ್ರದೇಶಗಳು ನಿರ್ಮಾಣವಾಗಿ ಪಾಳು ಬಿದ್ದ ಕೈಗಾರಿಕಾ ಪ್ರದೇಶದ ಜಾಗ ಆ ಪ್ರದೇಶದ ಜನರ ಮಲ–ಮೂತ್ರ ವಿಸರ್ಜನೆಗೆ ಸೀಮಿತವಾಯಿತು. ಕೈಗಾರಿಕಾ ಇಲಾಖೆಯಿಂದ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ ಕಟ್ಟಡಗಳು ಕೂಡ ಸಂಪೂರ್ಣ ಶಿಥಿಲಗೊಳ್ಳುವ ಹಂತಕ್ಕೆ ತಲುಪಿವೆ.

ಪ್ರಾರಂಭದ ಕೆಲ ವರ್ಷಗಳವರೆಗೆ ಪೇಪರ್ ಮಿಲ್, ಶೇಂಗಾ ಕಾಳು ಬೇರ್ಪಡಿಸುವ ಯಂತ್ರ ಸೇರಿದಂತೆ ವಿವಿಧ ಸಣ್ಣಪುಟ್ಟ ಕೈಗಾರಿಕೆಗಳನ್ನು ಪ್ರಾರಂಭಿಸಲಾಗಿತ್ತು. ಆದರೆ ಕೈಗಾರಿಕಾ ಪ್ರದೇಶಕ್ಕೆ ಸೂಕ್ತ ರಸ್ತೆಗಳು, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಂಪರ್ಕ ಸಿಗದೇ ಇದ್ದಿದ್ದರಿಂದ ನಿಧಾನವಾಗಿ ಒಂದೊಂದೇ ಕೈಗಾರಿಕೆಗಳು ಇಲ್ಲಿಂದ ಹೊರ ನಡೆದವು. ಕೈಗಾರಿಕಾ ಪ್ರದೇಶಕ್ಕೆ ಮೂಲಸೌಕರ್ಯಕ್ಕಾಗಿ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ಬೇಸರದಿಂದ ನುಡಿಯುತ್ತಾರೆ.

ಈ ಜಾಗವನ್ನು ಕೈಗಾರಿಕಾ ಇಲಾಖೆ ಪುರಸಭೆಯ ಸುಪರ್ದಿಗೆ ನೀಡದಿರುವುದರಿಂದ ಸ್ಥಳೀಯ ಸಂಸ್ಥೆ ವತಿಯಿಂದ ಅಲ್ಲಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಅಡೆತಡೆಯಾಗಿದೆ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ.

ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆ ಮತ್ತು ಸ್ಥಳೀಯ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಕ್ಕೆ ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಉದ್ಯಮಸ್ನೇಹಿ ವಾತಾವರಣವನ್ನು ಪುನರ್‌ ನಿರ್ಮಾಣ ಮಾಡಲು ಸರ್ಕಾರ, ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ದಾರಿಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವ ಮುಳ್ಳಿನ ಗಿಡಗಳು
ಬಾಗಿಲು ಮತ್ತು ಕಿಟಕಿಗಳು ಮುಳ್ಳು ಕಂಟಿಗಳಿಂದ ಆವೃತ್ತವಾಗಿರುವುದು
ದಕ್ಷಿಣ ಭಾಗದ ಕಟ್ಟಡ ಕುಸಿದಿರುವುದು
ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳು
ಬಾಗಿಲ ಬಳಿ ತೆರಳಲು ಸಾಧ್ಯವಾಗದ ರೀತಿ ಬೆಳೆದಿರುವ ಮುಳ್ಳಿನ ಗಿಡಗಳು

ಗುಳೆ ಹೋಗುತ್ತಿರುವ ಯುವಜನತೆ

ಕೈಗಾರಿಕೆಗಳ ಕೊರತೆಯಿಂದಾಗಿ ಐಟಿಐ ಡಿಪ್ಲೊಮಾ ಪದವಿ ಪಡೆದಿರುವ ರೋಣ ಸೇರಿದಂತೆ ತಾಲ್ಲೂಕಿನ ಗ್ರಾಮಗಳ ಯುವಜನರು ಕೆಲಸ ಅರಸಿ ಹುಬ್ಬಳ್ಳಿ ಬೆಂಗಳೂರು ಮಂಗಳೂರು ಸೇರಿದಂತೆ ರಾಜ್ಯ ಮತ್ತು ಪಕ್ಕದ ರಾಜ್ಯಗಳ ಮಹಾನಗರಗಳತ್ತ ವಲಸೆ ಹೋಗುತ್ತಿದ್ದಾರೆ. ತಾಂತ್ರಿಕ ಶಿಕ್ಷಣ ಪಡೆದ ಗ್ರಾಮೀಣ ಪ್ರದೇಶದ ಇನ್ನು ಕೆಲವು ಯುವಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾವು ಪಡೆದ ಶಿಕ್ಷಣಕ್ಕೆ ತಕ್ಕದಾದ ಉದ್ಯೋಗ ದೊರೆಯುತ್ತಿಲ್ಲ ಎಂಬ ಕೊರಗು ಆ ಯುವಕರನ್ನು ಕಾಡುತ್ತಿದೆ. ತಾಲ್ಲೂಕು ಕೇಂದ್ರವಾದ ರೋಣ ಪಟ್ಟಣದಲ್ಲಿನ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಗೊಳಿಸಿದಲ್ಲಿ ಹಿಂದುಳಿದ ತಾಲ್ಲೂಕಿನಲ್ಲಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ತಲೆ ಎತ್ತುವ ಅವಕಾಶ ಸೃಷ್ಟಿ ಆಗಲಿದೆ. ಇದರಿಂದ ಗುಳೆ ಹೋಗುತ್ತಿರುವ ಕೆಲವು ಯುವಕರಿಗಾದರೂ ಉದ್ಯೋಗ ಸಿಗುವ ಸಾಧ್ಯತೆಗಳಿದ್ದು ಸಂಬಂಧಿಸಿದ ಇಲಾಖೆಗಳು ಮತ್ತು ಅಧಿಕಾರಿಗಳು ಇತ್ತ ಕಡೆ ಗಮನಹರಿಸಬೇಕು. ಸರ್ಕಾರಿ ಆಸ್ತಿಯೊಂದು ಹಾಳಾಗುವುದನ್ನು ತಪ್ಪಿಸಬೇಕು ಎಂದು ಸ್ಥಳೀಯರು ಎಂದು ಅಭಿಪ್ರಾಯ ಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.