ADVERTISEMENT

ಮೀಸಲಾತಿ ಚಳವಳಿ ಹಿಂದೆ ಆರ್‌ಎಸ್‌ಎಸ್‌: ಸಾಹಿತಿ ಬಸವರಾಜ ಸೂಳಿಬಾವಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 15:11 IST
Last Updated 24 ಫೆಬ್ರುವರಿ 2021, 15:11 IST
ಸಾಹಿತಿ ಬಸವರಾಜ ಸೂಳಿಬಾವಿ
ಸಾಹಿತಿ ಬಸವರಾಜ ಸೂಳಿಬಾವಿ    

ಗದಗ: ‘ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಜನಸಾಮಾನ್ಯರು ಯೋಚಿಸದ ರೀತಿಯ ವಾತಾವರಣ ನಿರ್ಮಿಸಲು ಆಡಳಿತ ಪಕ್ಷವೇ ಪರೋಕ್ಷವಾಗಿ ಮೀಸಲಾತಿ ಹೋರಾಟ ಹುಟ್ಟುಹಾಕುತ್ತಿದೆ. ಇದರ ಹಿಂದೆ ಆಡಳಿತ ಪಕ್ಷವನ್ನು ನಿಯಂತ್ರಿಸುವ ಆರ್‌ಎಸ್‍ಎಸ್ ಇದೆ’ ಎಂದು ಸಾಹಿತಿ ಬಸವರಾಜ ಸೂಳಿಬಾವಿ ಆರೋಪಿಸಿದರು.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆ. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಚಳವಳಿಯಲ್ಲಿ ಆಡಳಿತ ಪಕ್ಷದ ಸಚಿವರು, ಶಾಸಕರು ಪಾಲ್ಗೊಳ್ಳುವ ಮೂಲಕ ಅವರು ಪರೋಕ್ಷವಾಗಿ ತಮ್ಮ ಜಾತಿಯನ್ನು ವ್ಯವಸ್ಥಿತವಾಗಿ ಸಂಘಟಿಸಿ, ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಆಯಾ ಸಮುದಾಯದ ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು, ಜಾತಿಯ ಜನರನ್ನು ವಂಚಿಸುತ್ತಿದ್ದಾರೆ’ ಎಂದು ಅವರು ವಿಶ್ಲೇಷಿಸಿದರು.

‘ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಮೀಸಲಾತಿ ಹೋರಾಟ ನಡೆಸಲಾಗುತ್ತದೆ. ಆದರೆ, ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವು ಕೇವಲ ಆರು ವರ್ಷಗಳಲ್ಲಿ 43ಕ್ಕೂ ಹೆಚ್ಚು ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿದೆ. ಇಲ್ಲಿ ಮೀಸಲಾತಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮೀಸಲಾತಿ ತೆಗೆದು ಹಾಕುವ ಪದ ಬಳಸುವ ಬದಲು ಇಂತಹ ಮೀಸಲಾತಿ ಚಳವಳಿ ಮೂಲಕ ಮೀಸಲಾತಿಯನ್ನೇ ಅಪ್ರಸ್ತುತಗೊಳಿಸುವ ಕೆಲಸ ನಡೆಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಕೇಂದ್ರ ಸರ್ಕಾರವು ಖಾಸಗೀಕರಣ ಹೆಸರಿನಲ್ಲಿ ದೇಶವನ್ನೇ ಮಾರಾಟ ಮಾಡುವ ಹುನ್ನಾರ ನಡೆಸುತ್ತಿದೆ. ಹೀಗಾಗಿ ಮೀಸಲಾತಿ ಚಳವಳಿಯ ನೇತೃತ್ವ ವಹಿಸಿದ ಶಾಸಕರು, ಸಚಿವರು, ಸ್ವಾಮೀಜಿಗಳು ಈ ಬಗ್ಗೆ ತಮ್ಮ ಜಾತಿಯ ಜನರಿಗೆ ತಿಳಿವಳಿಕೆ ನೀಡಿ ಮೊದಲು ಖಾಸಗೀಕರಣ ವಿರೋಧಿಸಬೇಕು. ಬಳಿಕ ಮೀಸಲಾತಿ ಹೋರಾಟ ಮಾಡಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.