ADVERTISEMENT

ರಾಜ್ಯ ಒಲಿಂಪಿಕ್ಸ್ ವಾಲಿಬಾಲ್‌ ಕ್ರೀಡಾಕೂಟ: ಮಿಂಚಿದ ಗ್ರಾಮೀಣ ಪ್ರತಿಭೆಗಳು

ಕಾಶಿನಾಥ ಬಿಳಿಮಗ್ಗದ
Published 10 ನವೆಂಬರ್ 2025, 3:16 IST
Last Updated 10 ನವೆಂಬರ್ 2025, 3:16 IST
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಹಾಗೂ ಜಾಲವಾಡಿಗೆ ಗ್ರಾಮಗಳ ಬಾಲಕಿಯರು ಈಚೆಗೆ ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದರು
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಹಾಗೂ ಜಾಲವಾಡಿಗೆ ಗ್ರಾಮಗಳ ಬಾಲಕಿಯರು ಈಚೆಗೆ ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದರು   

ಮುಂಡರಗಿ: ರಾಜ್ಯ ಒಲಿಂಪಿಕ್ಸ್ ಅಸೋಶಿಯೇಶನ್, ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ವತಿಯಿಂದ ಈಚೆಗೆ ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 14 ವರ್ಷದೊಳಗಿನ ಬಾಲಕಿಯರ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲ್ಲೂಕಿನ ಹಮ್ಮಿಗಿ ಹಾಗೂ ಜಾಲವಾಡಿಗೆ ಗ್ರಾಮದ ಬಾಲಕಿಯರು ಭಾಗವಹಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ಗ್ರಾಮಗಳ ಕೀರ್ತಿ ರಾಜ್ಯದೆಲ್ಲೆಡೆ ಪಸರಿಸಿದ್ದಾರೆ.

ಹಮ್ಮಿಗಿ ಹಾಗೂ ಜಾಲವಾಡಿಗೆ ಗ್ರಾಮಗಳ ಬಾಲಕಿಯರಾದ ಅಕ್ಷತಾ ಮಂಡಲಗೇರಿ, ಅಮೃತಾ ಮೇಟಿ, ಶೈಲಾ ಪವಾಡಿ, ಸಂಗೀತಾ ಕಮ್ಮಾರ, ನಂದಿನಿ ಮಾದಾಪೂರ, ಶ್ರೇಯಾ ಗೊಲ್ಲರಟ್ಟಿ, ನೇತ್ರಾ ಈಟಿ, ಪ್ರತೀಕ್ಷಾ ಪಾಟೀಲ, ಗೀತಾ ಉಪ್ಪಾರ, ಜ್ಯೋತಿ ಹಿರೇಮಠ, ಭಾಗ್ಯ ಗುಡಗೇರಿ ಹಾಗೂ ಅನು ಅವರು ಸ್ಪರ್ಧೆಯಲ್ಲಿ ಭಾಗವಹಿಸಿದವರು. ಚಿಕ್ಕಬಳ್ಳಾಪುರ, ರಾಯಚೂರು, ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ಎದುರಾಳಿ ತಂಡಗಳನ್ನು ಸೋಲಿಸಿ ಅಂತಿಮವಾಗಿ ಪ್ರಥಮ ಸ್ಥಾನ ಗಳಿಸಿದರು.

ಜಾಲವಾಡಿಗೆ ಗ್ರಾಮದ ದೈಹಿಕ ಶಿಕ್ಷಣ ಶಿಕ್ಷಕ ಜಿ.ಬಿ. ಗೊಲ್ಲರಟ್ಟಿ ಅವರು ಬಾಲಕಿಯರಿಗೆ ನಿತ್ಯ ಶಾಲಾ ಅವಧಿಯ ನಂತರ ವಾಲಿಬಾಲ್ ತರಬೇತಿ ನೀಡುತ್ತಿದ್ದಾರೆ. ತರಬೇತುದಾರರು ನೀಡುವ ನಿಯಮಿತ ಹಾಗೂ ಕಟ್ಟುನಿಟ್ಟಿನ ತರಬೇತಿ ಹಾಗೂ ಪಾಲಕರ ಪ್ರೋತ್ಸಾಹದಿಂದ ಬಾಲಕಿಯರ ಉತ್ತಮ ಸಾಧನೆ ಮಾಡಿದ್ದಾರೆ.

ADVERTISEMENT

ಅಕ್ಕ-ತಂಗಿ ಜುಗಲ್‌ಬಂದಿ 

ಜಾಲವಾಡಿಗಿ ಗ್ರಾಮದ ರಕ್ಷಿತಾ ಮಂಡಲಗೇರಿ ಹಾಗೂ ಅಕ್ಷತಾ ಮಂಡಲಗೇರಿ ಒಡಹುಟ್ಟಿದವರು. ವಾಲಿಬಾಲ್ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅಕ್ಕ ರಕ್ಷಿತಾ ಮಂಡಲಗೇರಿ ಮುಂಡರಗಿಯ ಅನ್ನದಾನೀಶ್ವರ ಪಿಯು ಕಾಲೇಜಿನಲ್ಲಿ ಓದುತ್ತಿದ್ದಾರೆ. ಈಚೆಗೆ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ರಕ್ಷಿತಾ ಉತ್ತಮ ಪ್ರದರ್ಶನ ನೀಡಿ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 69ನೇ ರಾಷ್ಟ್ರ ಮಟ್ಟದ 19 ವರ್ಷದೊಳಗಿನ ಬಾಲಕಿಯರ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತಂಗಿ ರಕ್ಷಿತಾ 14 ವರ್ಷದೊಳಗಿನ ಒಲಂಪಿಕ್ಸ್‌ ಕ್ರೀಡಾಕೂಟದ ವಾಲಿಬಾಲ್ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಜಿ.ಬಿ. ಗೊಲ್ಲರಟ್ಟಿ ತರಬೇತಿ ನೀಡಿದ್ದಾರೆ. ಸಹೋದರಿಯರು ರಾಷ್ಟ್ರ ಹಾಗೂ ಅಂತರರಾಷ್ಟ್ರ ವಾಲಿಬಾಲ್ ಕ್ರೀಡೆಯಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದಾರೆ.

ಕ್ರೀಡಾಕೂಟದ ವೇಳೆ ಶಾಸಕ ಡಾ.ಚಂದ್ರು ಲಮಾಣಿ ಅವರು ಕಂಠೀರವ ಕ್ರೀಡಾಂಗಣಕ್ಕೆ ತೆರಳಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿ ಬಂದಿದ್ದರು. ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಉಭಯ ಗ್ರಾಮಗಳ ಮುಖಂಡರು, ಪಾಲಕರು ಹಾಗೂ ಜಿಲ್ಲೆಯ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಅಕ್ಷತಾ ಹಾಗೂ ರಕ್ಷಿತಾ ಮಂಡಲಗೇರಿ ಭವಿಷ್ಯದಲ್ಲಿ ಉತ್ತಮ ವಾಲಿಬಾಲ್ ಕ್ರೀಡಾಪಟುಗಳಾಗುವ ಎಲ್ಲ ಲಕ್ಷಣಗಳಿದ್ದು ಅವರು ತಮ್ಮ ಸಾಧನೆಯ ಮೂಲಕ ನಮ್ಮ ಗ್ರಾಮದ ಕೀರ್ತಿ ಹೆಚ್ಚಿಸಲಿದ್ದಾರೆ
– ಜಿ.ಬಿ.ಗೊಲ್ಲರಟ್ಟಿ ತರಬೇತುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.