ADVERTISEMENT

ಸಾಧನೆಗೆ ಶಿಕ್ಷಣವೇ ರಾಜಮಾರ್ಗ: ಸಲೀಂ ಅಹ್ಮದ್

ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ: ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 4:47 IST
Last Updated 26 ಆಗಸ್ಟ್ 2025, 4:47 IST
ಗದಗ ನಗರದ ಕನಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು  
ಗದಗ ನಗರದ ಕನಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು     

ಗದಗ: ‘ಸಾಧನೆಗೆ ಶಿಕ್ಷಣವೇ ರಾಜಮಾರ್ಗ. ಶಿಕ್ಷಣವೊಂದೇ ಮನುಷ್ಯನನ್ನು ಅತ್ಯುನ್ನತ ಸ್ಥಾನಕ್ಕೆ ತಂದು ನಿಲ್ಲಿಸಬಲ್ಲದು. ಆದ್ದರಿಂದ ಪಾಲಕರು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು’ ವಿಧಾನ ಪರಿಷತ್‍ನ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.

ನಗರದ ಕನಕ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಈಗ ಕಾಲ ಬದಲಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಸಾಲದು. ಅಂಕದ ಜತೆಗೆ ಚಾಣಾಕ್ಷತನ, ವಿಶೇಷ ಪರಿಣತಿ ಮುಖ್ಯ. ಈ ಎಲ್ಲ ಅಂಶಗಳನ್ನು ಹೊಂದಿರುವ ಅಭ್ಯರ್ಥಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ’ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ‘ವಿದ್ಯೆ ನಿರಂತರ ಸಾಧನೆಯಿಂದ ಸಾಕಾರಗೊಳ್ಳಬಲ್ಲದು. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದರೆ ಸಾಧಿಸಬೇಕೆಂಬ ಉತ್ಕಟ ಛಲ ಬೇಕು’ ಎಂದರು.

ಸಮ್ಮುಖ ವಹಿಸಿದ್ದ ಅಡವೀಂದ್ರ ಸ್ವಾಮಿಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ, ಬಳಗಾನೂರಿನ ಮೌಲಾನಾ ಇನಾಯತ್‍ವುಲ್ಲಾ ಪೀರ್‌ಜಾದೆ ಹಾಗೂ ಗದಗ ಗ್ರೇಸ್ ಇಸಿಐ ಚರ್ಚ್‍ನ ರೆವರೆಂಡ್ ವಸಂತರಾಜ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಮಾತನಾಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸಿ.ಎಂ.ರಫೀ ಅಧ್ಯಕ್ಷತೆ ವಹಿಸಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಕೆಪಿಸಿಸಿ ಜನರಲ್ ಸೆಕ್ರೆಟರಿ ಎಸ್.ಡಿ.ಮಕಾಂದಾರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ನೂರಅಹ್ಮದ್ ಕರ್ಜಗಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಎಂ.ಎಂ.ಕಾಗದಗಾರ ಇದ್ದರು.

ಮಾಜಿ ಸಂಸದ ಐ.ಜಿ. ಸನದಿ, ಸಂಘದ ಸಂಸ್ಥಾಪಕ ಮೊಹ್ಮದ್‍ಸಲೀಂ ಹಂಚಿನಮನಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಪಾಷಾ, ಕಾರ್ಯಾಧ್ಯಕ್ಷ ಅಬ್ದುಲ್‍ಖಾದರ್‌ ಮೆಣಸಗಿ, ಉಪಾಧ್ಯಕ್ಷೆ ಫರ್ಹತ್‌ ಜಲಗೇರಿ, ನಿಯಾಜ್‌ಅಹ್ಮದ್ ಹಂಚಿನಮನಿ, ಡಿಡಿಪಿಐ ಆರ್.ಎಸ್. ಬುರಡಿ ಉಪಸ್ಥಿತರಿದ್ದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಮುಸ್ಲಿಂ ನೌಕರರಿಗೆ ಸನ್ಮಾನ, ಸಾಧಕರಿಗೆ ಸನ್ಮಾನ ನಡೆಯಿತು.

ನಜೀರ್‌ಅಹ್ಮದ್ ಮುಲ್ಲಾ, ಬಿ.ಎಂ.ಮುಲ್ಲಾ, ಶಿರಹಟ್ಟಿ ಪ್ರಾರ್ಥಿಸಿದರು. ಫಜಲ್‍ಅಹ್ಮದ್ ನಮಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋದಿನಸಾಬ ಬುಕಿಟಗಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.