
ಗದಗ: ‘ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳವಳಿಗಳನ್ನು ಸಂಘಟಿಸಿ ಮಹಿಳಾ ಮಂಡಳಿ ಸ್ಥಾಪಿಸಿ, ವಂಚಿತ ಸಮುದಾಯದ ಮಹಿಳೆಯರನ್ನು ಒಗ್ಗೂಡಿಸುವ ಮೂಲಕ ಶಿಕ್ಷಣ ಪಡೆದುಕೊಳ್ಳಲು ಮಹಿಳೆಯರನ್ನು ಜಾಗೃತಿಗೊಳಿಸಿದ ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ’ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್.ಮಾನ್ವಿ ಹೇಳಿದರು.
ನಗರದ ಗಂಗಿಮಡಿಯಲ್ಲಿ ಜಿಲ್ಲಾ ಸ್ಲಂ ಮಹಿಳಾ ಸಮಿತಿಯಿಂದ ಆಯೋಜಿಸಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಪ್ರತಿ ವರ್ಷ ಜನವರಿ 3ರಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಭಾರತದ ಮೊದಲು ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ ಸಾವಿತ್ರಿಬಾ ಫುಲೆ ಅವರ ಜನ್ಮದಿನವಾಗಿದೆ. ಈ ಸಂದರ್ಭದಲ್ಲಿ ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸಮಾನತೆಗೆ ಅವರ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ’ ಎಂದು ತಿಳಿಸಿದರು.
ಮಹಿಳಾ ಸಮಿತಿ ಸಂಚಾಲಕಿ ಪರ್ವಿನಾಬಾನು ಹವಾಲ್ದಾರ ಮಾತನಾಡಿ, ‘ಸಾವಿತ್ರಿಬಾಯಿ ಪುಲೆ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ಸಾಮಾಜಿಕ ಅಡತಡೆಗಳನ್ನು ಎದುರಿಸಿದರು. ಅಂದಿನ ಕಠಿಣ ಪರಿಸ್ಥಿತಿಯಲ್ಲೂ ಛಲ ಬಿಡದೆ ಮಹಿಳೆಯರಿಗೆ ಶಿಕ್ಷಣದ ಜ್ಞಾನವನ್ನು ನೀಡಿರುವ ಅವರ ಹೋರಾಟದ ಹೆಜ್ಜೆಗಳಲ್ಲಿ ನಾವು ಸಂಘಟನೆಯನ್ನು ಕಟ್ಟಬೇಕು’ ಎಂದರು.
ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಸಮಿತಿ ಮುಖಂಡರಾದ ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಮೆಹರುನ್ನಿಸಾ ಡಂಬಳ, ಇಬ್ರಾಹಿಂ ಮುಲ್ಲಾ, ಪ್ರೇಮವ್ವ ಮಣ್ಣವಡ್ಡರ, ಮೈಮುನ ಬೈರಕದಾರ, ಮಕ್ತುಂಸಾಬ ಮುಲ್ಲಾನವರ, ಸಲೀಂ ಬೈರಕದಾರ, ಗೌಸಸಾಬ ಅಕ್ಕಿ ಹಾಗೂ ನೂರಾರು ಸ್ಲಂ ನಿವಾಸಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.