ADVERTISEMENT

ಮಾರಾಟ ಪ್ರತಿನಿಧಿಯಿಂದ ₹6 ಲಕ್ಷ ವಂಚನೆ

ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಸಿ ಕರ್ಣಾಟಕ ಬ್ಯಾಂಕ್ ಗ್ರಾಹಕರ ಖಾತೆಗೆ ಕನ್ನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 3:59 IST
Last Updated 28 ಡಿಸೆಂಬರ್ 2022, 3:59 IST
ಕ್ರೆಡಿಟ್‌ ಕಾರ್ಡ್‌ ಬಳಸದೇ ಹಣ ಕಳೆದುಕೊಂಡ ಗ್ರಾಹಕರು ಕರ್ಣಾಟಕ ಬ್ಯಾಂಕ್ ಮುಂದೆ ಪ್ರತಿಭಟಿಸಿದರು
ಕ್ರೆಡಿಟ್‌ ಕಾರ್ಡ್‌ ಬಳಸದೇ ಹಣ ಕಳೆದುಕೊಂಡ ಗ್ರಾಹಕರು ಕರ್ಣಾಟಕ ಬ್ಯಾಂಕ್ ಮುಂದೆ ಪ್ರತಿಭಟಿಸಿದರು   

ಮುಳಗುಂದ: ಇಲ್ಲಿನ ಕರ್ನಾಟಕ ಬ್ಯಾಂಕ್ ಶಾಖೆ ಸಹಯೋಗದಲ್ಲಿ ಎಸ್‌ಬಿಐನವರು ವಿತರಿಸಿದ್ದ ಕ್ರೆಡಿಟ್‌ ಕಾರ್ಡ್‌ ಸಕ್ರಿಯಗೊಳಿಸುವ ನೆಪದಲ್ಲಿ ಕ್ರೆಡಿಟ್‌ ಕಾರ್ಡ್‌ ಮಾರಾಟ ಪ್ರತಿನಿಧಿ 15ಕ್ಕೂ ಹೆಚ್ಚು ಗ್ರಾಹಕರ ಖಾತೆಗೆ ಕನ್ನಹಾಕಿ ಹಣ ದೋಚಿದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡ ಗ್ರಾಹಕರು ಸೋಮವಾರ ಕರ್ನಾಟಕ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಒಂದು ವರ್ಷದಿಂದ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷ ಕುಮಾರ ಗೋದಿ ಹಣ ದೋಚಿದ ಆರೋಪಿ. ಈತನ ವಿರುದ್ಧ ವಂಚನೆ ಹಾಗೂ ಆರ್ಥಿಕ ಅಪರಾಧಗಳ ಅಡಿ ಮುಳಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಸಂತೋಷ ಕ್ರೆಡಿಟ್‌ ಕಾರ್ಡ್‌ ಸಕ್ರಿಯಗೊಳಿಸುವ ನೆಪದಲ್ಲಿ ಖಾತೆದಾರರ ಆಧಾರ್‌, ಪ್ಯಾನ್ ಮಾಹಿತಿ ಪಡೆದುಕೊಂಡಿದ್ದಾನೆ. ನಂತರ ತನ್ನ ಖಾತೆಗೆ ಅಂದಾಜು ₹6 ಲಕ್ಷ ಹಣ ವರ್ಗಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ADVERTISEMENT

ಕರ್ನಾಟಕ ಬ್ಯಾಂಕ್ ಶಾಖೆಯ ಗ್ರಾಹಕರಿಗೆ ತಮ್ಮ ಖಾತೆಯಲ್ಲಿನ ಹಣ ಕಡಿತಗೊಂಡಿರುವುದು ತಡವಾಗಿ ಗೊತ್ತಾಗಿದೆ. ಈ ವೇಳೆ ಬ್ಯಾಂಕ್ ವ್ಯವಸ್ಥಾಪಕರ ಬಳಿ ವಿಚಾರಿಸಲಾಗಿ, ‘ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿರುವುದರಿಂದ ಹಣ ಕಡಿತಗೊಂಡಿದೆ’ ಎಂಬ ಮಾಹಿತಿ ಮಾಹಿತಿ ಲಭಿಸಿದೆ.

ಖಾತೆದಾರರು, ನಾವು ಯಾವುದೇ ವಸ್ತು ಖರೀದಿಸಿಲ್ಲ, ಕಾರ್ಡ್‌ನ್ನು ಎಲ್ಲೂ ಬಳಕೆ ಮಾಡಿಲ್ಲ, ಹಣ ಹೇಗೆ ಕಡಿತಗೊಂಡಿತು ಎಂದು ಪ್ರಶ್ನಿಸಿದಾಗ ಸೇಲ್ಸ್‌ಮನ್ ಸಂತೋಷ ಮಾಡಿರುವ ವಂಚನೆ ಗೊತ್ತಾಗಿದೆ.

‘ನಾವು ಕರ್ನಾಟಕ ಬ್ಯಾಂಕ್ ಮೇಲೆ ವಿಶ್ವಾಸವಿಟ್ಟು ಕಾರ್ಡ್‌ ತೆಗೆದುಕೊಂಡಿದ್ದೆವು. ಆದರೆ, ಈಗ ನಮಗೆ ವಂಚನೆ ಆಗಿದೆ. ಬ್ಯಾಂಕ್‌ನವರು ನಮ್ಮ ಹಣವನ್ನು ಹಿಂದಕ್ಕೆ ಕೊಡಬೇಕು. ಈಗಾಗಲೇ ಹಲವರ ಖಾತೆಗಳ ಮೇಲೆ ಸಾಲವಿದೆ. ಹಣ ಹಾಕಿದರೆ ತಕ್ಷಣ ಸಾಲಕ್ಕೆ ಹೋಗುತ್ತಿದೆ. ಇದರಿಂದ ನಮ್ಮ ವ್ಯವಹಾರಗಳಿಗೆ ಸಮಸ್ಯೆಯಾಗಿದೆ. ತಕ್ಷಣವೇ ಸಮಸ್ಯೆ ಬಗೆಹರಿಸಲು ಬ್ಯಾಂಕ್‌ನವರು ಕ್ರಮವಹಿಸಬೇಕು’ ಎಂದು ವಂಚನೆಗೆ ಒಳಗಾದ ಗ್ರಾಹಕ ಶರತ ಸೋನಗೋಜಿ ಆಗ್ರಹಿಸಿದ್ದಾರೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ ಕುಮಾರನ ವಿರುದ್ಧ ದೂರು ಕೊಟ್ಟಿದ್ದಾರೆ. ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಪಿಐ ಅಶೋಕ ಸದಲಗಿ ಹೇಳಿದರು.

ಕ್ರೆಡಿಟ್‌ ಕಾರ್ಡ್‌ ಸೇಲ್ಸ್‌ಮನ್ ಖಾಸಗಿ ಏಜೆನ್ಸಿಯಿಂದ ನೇಮಕವಾಗಿದ್ದು, ಗ್ರಾಹಕರಿಗೆ ವಂಚನೆ ಆಗಿರುವುದು ಡಿ.23ರಂದು ಗೊತ್ತಾಗಿದೆ. ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ
ಸಮೀರ್ ಜಕ್ಕಲಿ, ಕ್ರೆಡಿಟ್‌ ಯುನಿಟ್ ವ್ಯವಸ್ಥಾಪಕ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.