
ಪ್ರಜಾವಾಣಿ ವಾರ್ತೆ
ಗಜೇಂದ್ರಗಡ (ಗದಗ ಜಿಲ್ಲೆ): ಕರಾಟೆ ತರಬೇತುದಾರನಿಗೆ ಗೌರವಧನ ಮಂಜೂರು ಮಾಡಲು ₹5 ಸಾವಿರ ಲಂಚ ಕೇಳಿದ್ದ ಮುಶಿಗೇರಿ ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ ಕಳಕಪ್ಪ ರಾಜೂರ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕರಾಟೆ ತರಬೇತುದಾರ ಆನಂದ ವಿರುಪಾಕ್ಷಪ್ಪ ವಾಲ್ಮೀಕಿ 8 ಮತ್ತು 9ನೇ ತರಗತಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದ್ದರು. ಗೌರವಧನ ₹9 ಸಾವಿರ ಮಂಜೂರು ಮಾಡಲು ಕೋರಿದ್ದರು.
ಅದಕ್ಕಾಗಿ ಲಂಚ ಕೇಳಿದ್ದ ಕಳಕಪ್ಪ, ಸೋಮವಾರ ₹4 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಗದಗ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.