
ಗದಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‍ನಲ್ಲಿ ಶೋಷಿತ ಸಮುದಾಯಗಳ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ಪ್ರಕಟಿಸಬೇಕು’ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಘಟಕದ ಅಧ್ಯಕ್ಷ ಬಿಲಾಲ್ ಗೋಕಾವಿ ಆಗ್ರಹಿಸಿದರು.
‘ಎಸ್‌ಡಿಪಿಐ ವತಿಯಿಂದ ಈಗಾಗಲೇ ಜನತಾ ಬಜೆಟ್ ಪುಸ್ತಕ ಬಿಡುಗಡೆ ಮಾಡಿದ್ದು, ಅದರಲ್ಲಿ ಮಂಡಿಸಿರುವ ಎಲ್ಲಾ ಜನಪರ ಯೋಜನೆಗಳಿಗೆ ಹಣ ಮೀಸಲಿಡಬೇಕು. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಬೇಕು. ವಿಶೇಷವಾಗಿ ಗದಗ ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಹಲವು ಜ್ವಲಂತ ಸಮಸ್ಯೆಗಳಿದ್ದು, ಜಿಲ್ಲೆಯ ನಿರುದ್ಯೋಗಿ ಯುವಕರ ಸಮಸ್ಯೆ ಹೋಗಲಾಡಿಸಲು ಸಣ್ಣ ಮತ್ತು ಬೃಹತ್ ಕೈಗಾರಿಕೆಗಳ ಸ್ಥಾಪನೆ ಮತ್ತು ಉತ್ತೇಜನ ನೀಡಬೇಕು’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 24/7 ಕುಡಿಯುವ ನೀರಿನ ಯೋಜನೆ ಹಳಿತಪ್ಪಿದೆ. ಅದನ್ನು ಸರಿಯಾದ ನಿಟ್ಟಿನಲ್ಲಿ ವ್ಯವಸ್ಥಿತಗೊಳಿಸಲು ಕ್ರಮವಹಿಸಬೇಕು. ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಗದಗ-ಬೆಟಗೇರಿ ನಗರದಲ್ಲಿ ರಸ್ತೆ, ಒಳಚರಂಡಿ, ಬೀದಿದೀಪ ಸೇರಿದಂತೆ ಮೂಲಸೌಕರ್ಯಗಳಿಗೆ ಹಣ ಬಿಡುಗಡೆ ಮಾಡಬೇಕು. ಗದಗ ನಗರ ಕೇಂದ್ರದಲ್ಲಿ ರಕ್ತ ಭಂಡಾರ ನಿರ್ಮಿಸುವುದು, ವಿಶ್ವವಿದ್ಯಾಲಯ ಸ್ಥಾಪನೆ, ಬೆಟಗೇರಿ ಭಾಗದಲ್ಲಿ ಅಲ್ಪಸಂಖ್ಯಾತ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣ, ಅಲ್ಪಸಂಖ್ಯಾತರ ಹಾಸ್ಟೆಲ್ ನಿರ್ಮಾಣ, ನರಗುಂದ ಹಾಗೂ ಗದಗ ನಗರದಲ್ಲಿ ಅಲ್ಪಸಂಖ್ಯಾತರ ಶಾದಿಮಹಲ್ ನಿರ್ಮಾಣ ಮಾಡಲು ಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ನರಗುಂದದಲ್ಲಿ ನಿರ್ಮಿಸುತ್ತಿರುವ ಆಚಾರ್ಯ ಪ್ಲಾಟ್ ಮನೆಗಳ ಸಂಖ್ಯೆ ಹೆಚ್ಚಿಸಬೇಕು. ಶಿರಹಟ್ಟಿ ಪಟ್ಟಣದಲ್ಲಿ ದುಃಸ್ಥಿತಿಗೆ ತಲುಪಿರುವ ಎಪಿಎಂಸಿ ಮಾರುಕಟ್ಟೆ ಸಮರ್ಪಕ ಬಳಕೆಗೆ ವಿಶೇಷ ಯೋಜನೆ, ಜಿಲ್ಲೆಯ ಹಲವಾರು ಸಮಸ್ಯೆಗಳಿಗೆ ಈ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಫಾನ್ ತರಾಫ್ದರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನ್ವರ್ ಬಾಗೇವಾಡಿ, ಜಿಲ್ಲಾ ಖಜಾಂಚಿ ಮಕಾನದಾರ್, ಸಮೀರ್ ಕೊಟ್ಟೂರ, ಶಿರಹಟ್ಟಿ ಕ್ಷೇತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ನದಾಫ್ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.