ADVERTISEMENT

ಗದಗ | ಬೌದ್ಧಿಕ ವಿಕಸನಕ್ಕೆ ಸ್ವಯಂ ಅಧ್ಯಯನ ದಾರಿದೀಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 5:45 IST
Last Updated 3 ಡಿಸೆಂಬರ್ 2025, 5:45 IST
ಗದಗ ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಜ್‌ರಾಜ್ ವಿಶ್ವವಿದ್ಯಾಲಯದ 2025–26ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ದೀಕ್ಷಾರಂಭ ಕಾರ್ಯಕ್ರಮದಲ್ಲಿ ಪ್ರಭಾರ ಕುಲಪತಿ ಪ್ರೊ. ಸುರೇಶ ವಿ.ನಾಡಗೌಡರ ಮಾತನಾಡಿದರು
ಗದಗ ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಜ್‌ರಾಜ್ ವಿಶ್ವವಿದ್ಯಾಲಯದ 2025–26ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ದೀಕ್ಷಾರಂಭ ಕಾರ್ಯಕ್ರಮದಲ್ಲಿ ಪ್ರಭಾರ ಕುಲಪತಿ ಪ್ರೊ. ಸುರೇಶ ವಿ.ನಾಡಗೌಡರ ಮಾತನಾಡಿದರು   

ಗದಗ: ‘ಕಪ್ಪತಗುಡ್ಡದಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಗಾಂಧೀಜಿಯವರ ತತ್ತ್ವಗಳೇ ಪ್ರೇರಣೆ. ವಿದ್ಯಾರ್ಥಿಗಳು ಸ್ವಯಂ ಅಧ್ಯಯನ ರೂಢಿಸಿಕೊಳ್ಳುವುದು ಅತ್ಯವಶ್ಯಕ. ಇದು ಬುದ್ಧಿಯ ವಿಕಸನಕ್ಕೆ ದಾರಿತೋರಿಸುತ್ತದೆ’ ಎಂದು ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಜ್‌ರಾಜ್ ವಿಶ್ವವಿದ್ಯಾಲಯದ 2025–26ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ದೀಕ್ಷಾರಂಭ – ವಿದ್ಯಾರ್ಥಿ ಪ್ರವೇಶಾಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿದ್ಯಾರ್ಥಿಗಳು ಕೇವಲ ವಿದ್ಯೆ ಪಡೆದರೆ ಸಾಕಾಗುವುದಿಲ್ಲ. ಪ್ರಜ್ಞಾವಂತರಾಗಬೇಕು, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮೌಲ್ಯಾಧಾರಿತ ಶಿಕ್ಷಣವನ್ನು ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ವಿಶ್ರಾಂತ ಪ್ರಭಾರ ಕುಲಪತಿ ಪ್ರೊ. ಸಿ.ರಾಜಶೇಖರ ಮಾತನಾಡಿ, ‘ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ಸ್ಥಾಪನೆಯಾದ ಬಹಳ ಕಡಿಮೆ ಅವಧಿಯಲ್ಲೇ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಕಂಡುಕೊಂಡಿರುವ ವೇಗದ ಉನ್ನತಿ ಗಮನಾರ್ಹ. ವಿದ್ಯಾರ್ಥಿ ಕೇಂದ್ರೀಕೃತ ಚಟುವಟಿಕೆಗಳು, ಸಮಾಜಮುಖಿ ಕಾರ್ಯಕ್ರಮಗಳು ಮತ್ತು ಗ್ರಾಮಾಧಾರಿತ ಅಧ್ಯಯನ ಮಾದರಿಗಳು ಈ ವಿಶ್ವವಿದ್ಯಾಲಯಕ್ಕೆ ವಿಶಿಷ್ಟತೆ ಒದಗಿಸಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ, ‘ದೀಕ್ಷಾರಂಭ ಕಾರ್ಯಕ್ರಮ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪಯಣಕ್ಕೆ ದಿಕ್ಸೂಚಿಯಂತೆ. ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಪ್ರಯಾಣಕ್ಕೆ ನೈತಿಕ, ಬೌದ್ಧಿಕ ಮತ್ತು ಸಾಮಾಜಿಕ ದಾರಿದೀಪವಾಗಲಿದೆ. ವಿದ್ಯಾರ್ಥಿಗಳ ಕಲಿಕೆ ಪಠ್ಯಪುಸ್ತಕಗಳಿಗೆ ಸೀಮಿತವಾಗಬಾರದು’ ಎಂದರು.

ಕಾರ್ಯಕ್ರಮ ಸಂಯೋಜಕ ಪ್ರವೀಣ ಅಂಕಲಕೋಟಿ, ಪ್ರೊ. ಸಂಗನಗೌಡ ಪಾಟೀಲ, ಪ್ರೊ. ಶ್ರೀಧರ ಹಾದಿಮನಿ ಮತ್ತು ವಿಶೇಷಾಧಿಕಾರಿ (ಶೈಕ್ಷಣಿಕ) ಎಂ.ಬಿ. ಚನ್ನಪ್ಪಗೌಡರ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರು, ಸಿಬ್ಬಂದಿ, ಹೊಸದಾಗಿ ದಾಖಲಾದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾಜ ಗ್ರಾಮ ಪ್ರಕೃತಿ ಮತ್ತು ಮಾನವೀಯತೆ ಇವೇ ನಮ್ಮ ನಿಜವಾದ ತರಗತಿಗಳು. ವಿಶ್ವವಿದ್ಯಾಲಯವು ‘ಗ್ರಾಮದಿಂದ ವಿಶ್ವದತ್ತ’ ಎಂಬ ದೃಷ್ಟಿಯೊಂದಿಗೆ ವಿದ್ಯಾರ್ಥಿಗಳನ್ನು ಜ್ಞಾನ ಕೌಶಲ್ಯ ಮತ್ತು ಮೌಲ್ಯಗಳಲ್ಲಿ ಸಶಕ್ತಗೊಳಿಸಲು ಬದ್ಧವಾಗಿದೆ
ಪ್ರೊ. ಸುರೇಶ ವಿ.ನಾಡಗೌಡರ ಪ್ರಭಾರ ಕುಲಪತಿ
ದೀಕ್ಷಾರಂಭ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ದೃಷ್ಟಿ ಗುರಿ ಮತ್ತು ಅವಕಾಶಗಳ ಪರಿಚಯ ನೀಡುವ ಮಹತ್ವದ ವೇದಿಕೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕುತೂಹಲ ಜವಾಬ್ದಾರಿ ಮತ್ತು ಗುರಿ ಸ್ಪಷ್ಟತೆ ಬೆಳೆಸುತ್ತವೆ
ಪ್ರೊ. ಸಿ.ರಾಜಶೇಖರ ವಿಶ್ರಾಂತ ಪ್ರಭಾರ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.