
ಗದಗ: ‘ವಚನಗಳು ಭಕ್ತಿ ಮತ್ತು ಧಾರ್ಮಿಕ ಅಭಿವ್ಯಕ್ತಿ ಮಾತ್ರವಲ್ಲ. ಅವು ವೈಜ್ಞಾನಿಕ, ತಾರ್ಕಿಕ, ಮಾನವೀಯತೆ ಮತ್ತು ವೈಚಾರಿಕತೆಯ ಜೀವಂತ ರೂಪವಾಗಿವೆ. ಆದ್ದರಿಂದ ಶರಣರು ಜಗತ್ತಿನ ಅತ್ಯಂತ ಶ್ರೇಷ್ಠ ಮನೋವಿಜ್ಞಾನಿಗಳು’ ಎಂದು ಸಿದ್ದರಾಮ ಸ್ವಾಮೀಜಿ ಹೇಳಿದರು.
ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಈಚೆಗೆ ನಡೆದ 2,777ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ವಚನಕಾರರು ಧರ್ಮ, ಸಮಾಜ, ಅಧ್ಯಾತ್ಮದ ಕುರಿತು ವಿಶ್ಲೇಷಣೆ ಮಾಡಿದರು. ಸಮಾಜ ಜಾತಿರಹಿತವಾಗಿ ಇರಬೇಕೆಂದು ಬಯಸಿದ್ದರು. ಜಗತ್ತಿನ ವಿಜ್ಞಾನದ ಬಗ್ಗೆ ವಚನಗಳ ಮೂಲಕ ತಿಳಿಸಿದರು. ಕಲ್ಲು ದೇವರ ಮೇಲೆ ನಂಬಿಕೆ ಇಟ್ಟು, ಮನುಷ್ಯನ ಮೇಲೆ ದಯೆ ಇರದಿದ್ದರೆ ಅದು ಧರ್ಮವಲ್ಲ. ಇದು ತರ್ಕಬದ್ಧ ಚಿಂತನೆಗೆ ಪ್ರೇರೇಪಿಸುತ್ತದೆ’ ಎಂದು ತಿಳಿಸಿದರು.
ಗದಗ ಉಪ ನಿರ್ದೇಶಕರ ಕಚೇರಿಯ ತಾಂತ್ರಿಕ ಸಹಾಯಕ ಎಂ.ಎಚ್. ಸವದತ್ತಿ ಅವರು ‘ವಚನಗಳ ಬೆಳಕಿನಲ್ಲಿ ವಿಜ್ಞಾನ’ ವಿಷಯದ ಕುರಿತು ಮಾತನಾಡಿ, ‘ಲಿಂಗಪೂಜೆಯಲ್ಲಿ ವಿಜ್ಞಾನವಿದೆ. ಆಯುಷ್ಯ ವೃದ್ಧಿಯ ಸೂತ್ರವಿದೆ. ಬೆಳಗಾಗುವುದರೊಳಗೆ ಲಿಂಗಪೂಜೆ ಮಾಡಬೇಕು. ಪಕ್ಷಿಗಳು ಹಾಡುತ್ತವೆ, ಹೂವುಗಳು ಅರಳುತ್ತವೆ, ರೆಂಬೆ–ಕೊಂಬೆಗಳು ಚಿಗುರುತ್ತವೆ, ಇವೆಲ್ಲವೂ ವಿಜ್ಞಾನದ ಕೊಡುಗೆ’ ಎಂದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರು ವಚನ ಸಂಗೀತ ನೆಡೆಸಿಕೊಟ್ಟರು. ಭರತ ಎಂ. ಹರ್ಲಾಪೂರ ಧಾರ್ಮಿಕ ಗ್ರಂಥ ಪಠಿಸಿದರು. ಚಂದನ ಕೆ. ಬಳಿಗೇರ ವಚನ ಚಿಂತನ ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷರಾದ ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿಗಳಾದ ಸೋಮಶೇಖರ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿ ಸಹ ಚೇರ್ಮನ್ ಶಿವಾನಂದ ಹೊಂಬಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.