ಲಕ್ಷ್ಮೇಶ್ವರ ತಾಲ್ಲೂಕು ಶಿಗ್ಲಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಸಿರು ಪರಿಸರದಲ್ಲಿ ಮಕ್ಕಳು ಆಟವಾಡುತ್ತಿರುವುದು
ಲಕ್ಷ್ಮೇಶ್ವರ: ಸರ್ಕಾರಿ ಶಾಲೆ ಉಳಿಸಿ ಬೆಳೆಸಬೇಕು ಎಂಬ ಉದ್ಧೇಶದಿಂದ ಪ್ರತಿವರ್ಷ ಸರ್ಕಾರ ಶಾಲೆಗಳಿಗೆ ಎಲ್ಲ ರೀತಿಯ ಸೌಲಭ್ಯ ಕೊಡುತ್ತಿದೆ. ಆದರೂ ಸಹ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಸರ್ಕಾರಿ ಶಾಲೆಗಳಲ್ಲಿ ಶಿಸ್ತು ಇಲ್ಲ. ಮಕ್ಕಳಿಗೆ ಸರಿಯಾಗಿ ಪಾಠ ಕಲಿಸುವುದಿಲ್ಲ ಹೀಗೆ ಹತ್ತಾರು ವಿಷಯಗಳ ಕುರಿತು ಪಾಲಕರು ಪಟ್ಟಿ ಕೊಡುತ್ತಾರೆ.
ಆದರೆ ಸರ್ಕಾರ ಕೊಟ್ಟ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳು ಹಾಗೂ ಪಾಲಕರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ತಾಲ್ಲೂಕಿನ ಶಿಗ್ಲಿ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ.
1865ರಲ್ಲಿ ಸ್ಥಾಪನೆಯಾದ ಶಾಲೆ 160 ವರ್ಷಗಳ ಶೈಕ್ಷಣಿಕ ಪ್ರಗತಿಯೊಂದಿಗೆ ವರ್ಷದಿಂದ ವರ್ಷಕ್ಕೆ ಇನ್ನೂ ಉನ್ನತ ಸ್ಥಾನಕ್ಕೆ ಏರುತ್ತಲೇ ಇದೆ.
ಸದ್ಯ 1ರಿಂದ 8ನೇ ತರಗತಿ (ಉನ್ನತೀಕರಿಸಿದ)ವರೆಗಿನ ಶಾಲೆಯಲ್ಲಿ 140ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣ, ಉತ್ತಮ ಪರಿಸರ, ಕಲಿಕಾ ವಾತಾವರಣ ಶಾಲೆಯಲ್ಲಿದೆ.
ಲಕ್ಷ್ಮೇಶ್ವರ ತಾಲ್ಲೂಕು ಶಿಗ್ಲಿಯ ಸರ್ಕಾರಿ ಮಾದರೀಯ ಪ್ರಾಥಮಿಕ ಶಾಲೆ ಹೊರ ಗೋಡೆ ಮೇಲೆ ಅರಳಿದ ವಾರ್ಲಿ ಕಲೆ
ಎರಡು ಎಕರೆಯಲ್ಲಿನ ಶಾಲೆಯ ಸುತ್ತಲೂ 78 ಸಾಗವಾನಿ ಒಳಗೊಂಡಂತೆ ಹೊಂಗೆ, ನೆಲ್ಲಿ, ಬದಾಮಿ, ನೇರಳೆ, ತೆಂಗು, ತುಳಸಿ ಸೇರಿ 380 ಗಿಡ ಮರಗಳಿದ್ದು, ಅವು ಶಾಲೆ ಸೌಂದರ್ಯ ಇಮ್ಮಡಿ ಮಾಡಿವೆ.
ಶಾಲೆಯ ಪ್ರವೇಶ ದ್ವಾರದ ಹೊರಗೋಡೆ ಮೇಲೆ ಆಕರ್ಷಕ ರೀತಿಯಲ್ಲಿ ಮಹಾರಾಷ್ಟ್ರದ ವರ್ಲಿ ಶೈಲಿಯ ಚಿತ್ರಕಲೆ ಹಾಗೂ ಒಳಾವರಣದ ಗೋಡೆಗಳ ಮೇಲಿನ ಮಹಾತ್ಮರು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಹೋರಾಟಗಾರರ ಚಿತ್ರಗಳನ್ನು ಸುಂದರವಾಗಿ ಬಿಡಿಸಲಾಗಿದೆ.
ಅದರಲ್ಲೂ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಬಾಯಿ ಪುಲೆ ಮತ್ತು ಜ್ಯೋತಿಬಾ ಪುಲೆ ಅವರ ಚಿತ್ರವಂತೂ ನಯನ ಮನೋಹರವಾಗಿದೆ. ವಾರ್ಲಿ ಕಲೆಯನ್ನು ಬಳಸಿಕೊಂಡು ಕಲಾವಿದರು ಶಾಲೆ ಹೊರ ಗೋಡೆಯ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸಿದ್ದಾರೆ.
ಅಧಿಕಾರಿಗಳು ಎಸ್ಡಿಎಂಸಿ ಸದಸ್ಯರು ಶಿಕ್ಷಕರು ಪಾಲಕರ ಸಹಕಾರದಿಂದ ಶಾಲೆ ಸುಂದರಗೊಳಿಸುವ ಜತೆಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಲು ಸಾಧ್ಯವಾಗಿದೆಎನ್.ವಿ.ಕುಲಕರ್ಣಿ ಮುಖ್ಯಶಿಕ್ಷಕಿ
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಎಲ್ಇಡಿ ಟಿವಿ ಇಂಟರ್ ಮಿಷನ್ ಸ್ಟಾರ್ಟ್ ಕ್ಲಾಸ್ ಮೂಲಕ ಕಲಿಕಾ ವಾತಾವರಣವನ್ನು ಶಿಕ್ಷಕರು ಸೃಷ್ಟಿಸಿದ್ದಾರೆಶಂಭುಲಿಂಗ ಕಟ್ಟಿಮನಿ ಅಧ್ಯಕ್ಷ ಎಸ್‍ಡಿಎಂಸಿ
ನಮ್ಮ ಶಾಲೆ ಸುಂದರವಾಗಿ ಕಾಣುವುದರ ಜೊತೆಗೆ ಹೆಚ್ಚಿನ ಮಕ್ಕಳು ಶಾಲೆಗೆ ಬರುವಂತೆ ಮಾಡುವ ನಿಟ್ಟಿನಲ್ಲಿ ಅಗತ್ಯ ಇರುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆಎಲ್.ತಿಪ್ಪಾನಾಯಕ ಎಸ್.ಬಿ.ಅಣ್ಣಿಗೇರಿ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.