
ಶಿರಹಟ್ಟಿ: ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಸರ್ಕಾರಿ ಗಾಂವಠಾಣಾ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಮಸೀದಿ ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರು ಮತ್ತು ಹಿಂದೂಪರ ಸಂಘಟನೆಗಳ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಶನಿವಾರ ಕಟ್ಟಡ ತೆರವುಗೊಳಿಸಲು ಆದೇಶಿಸಿದ್ದಾರೆ.
ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೇ ತಗಡಿನ ಶೆಡ್ ಒಳಗಡೆ ಜುಮ್ಮಾ ಮಸೀದಿ ನಿರ್ಮಿಸಲಾಗುತ್ತಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರಯ ವಿರೋಧ ವ್ಯಕ್ತಪಡಿಸಿದರು.
‘ಗ್ರಾಮ ಪಂಚಾಯಿಗೆ ಹೋಗುವ ರಸ್ತೆಗೆ ಹೊಂದಿಕೊಂಡ ಹಳ್ಳದ ಪಕ್ಕದಲ್ಲಿಯೇ ಅನಧಿಕೃತವಾಗಿ ಮಸೀದಿ ನಿರ್ಮಾಣ ಮಾಡಲಾಗಿದೆ. ಈ ಮಸೀದಿ ಕಟ್ಟಡ ಕಾಮಗಾರಿಯು ಕೇವಲ ರಾತ್ರಿವೇಳೆ ಮಾತ್ರ ನಡೆಸಿದ್ದು, ಗ್ರಾಮಸ್ಥರಿಗೆ ತಿಳಿಯದಾಗಿದೆ. ನಮಾಜ್ ಮಾಡಲು ಒಂದು ಸುಸಜ್ಜಿತ ಮಸೀದಿ ನಿರ್ಮಾಣ ಮಾಡಲಾಗಿದ್ದು, ಅದರ ಸುತ್ತಲೂ ತಗಡುಗಳನ್ನು ಹೊದಿಸಿರುವ ಶೆಡ್ ನಿರ್ಮಾಣ ಮಾಡಿದ್ದಾರೆ. ಗ್ರಾಮಸ್ಥರು ಕೇಳಿದಾಗಲೆಲ್ಲಾ ಹಳೆಯ ಮಸೀದಿಗೆ ಅನುದಾನ ಮಂಜೂರು ಮಾಡಲಾಗಿದ್ದು, ಅದರ ಸಾಮಗ್ರಿಗಳನ್ನು ಇರಿಸಲು ಈ ಶೆಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳಿ ಮಸೀದಿ ನಿರ್ಮಾಣ ಮಾಡಲಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಧಿಕಾರಿಗಳ ಕುಮ್ಮಕ್ಕು: ಆರೋಪ
ಬನ್ನಿಕೊಪ್ಪ ಗ್ರಾಮಸ್ಥರು ಹಾಗೂ ಯುವಕರು ಶನಿವಾರ ಘಟನೆ ನಡೆದ ಸ್ಥಳದಲ್ಲಿಯೇ ಜಮಾವಣೆಗೊಂಡಿದ್ದು, ಮಸೀದಿ ನಿರ್ಮಾಣದ ಪ್ರತಿಹಂತವು ಪಿಡಿಒ ಅವರ ಗಮನಕ್ಕಿದೆ. ಮಸೀದಿ ಕಾಮಗಾರಿಗೆ ಪಂಚಾಯಿತಿ ಅಧಿಕಾರಿಗಳು ಹಾಗೂ ಕೆಲವು ಸದಸ್ಯರಿಂದ ಮರಳು ಪೂರೈಸಲಾಗಿದೆ. ಯಾವುದೇ ದಾಖಲೆಗಳಿಲ್ಲದ ಕಟ್ಟಡಕ್ಕೆ ಪಂಚಾಯಿತಿ ವತಿಯಿಂದ ಸುಮಾರು 10ಕ್ಕೂ ಹೆಚ್ಚು ನಲ್ಲಿಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ಅಲ್ಲದೇ ಯಾವುದೇ ಪರವಾನಗಿ ಪಡೆಯದೆ ಹೆಸ್ಕಾಂ ಇಲಾಖೆಯು ಸಹ ಈ ಮಸೀದಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
‘ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ಈ ಮಸೀದಿಗೆ ಬೇಕಾಗುವ ಮೂಲಸೌಕರ್ಯಗಳನ್ನು ಒದಗಿಸಿದ್ದಾರೆ. ಅಲ್ಲದೇ ಪಂಚಾಯಿತಿ ದಾಖಲೆ ತಿದ್ದುಪಡಿ ಮಾಡಿ ಗಾಂವಠಾಣಾ ನಿವೇಶನ ಇದ್ದಲ್ಲಿ ವೈಟ್ನರ್ ಹಚ್ಚಿ ಮಸೀದಿ ಎಂದು ನಮೂದಿಸಿ ಉತಾರ ಸೃಷ್ಟಿ ಮಾಡಿಕೊಟ್ಟಿದ್ದಾರೆ. ಇದಕ್ಕೆ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಯ ಕೈವಾಡವಿದೆ’ ಎಂದು ಗ್ರಾಮಸ್ಥರಾದ ಅರಿಹಂತ ಮಂಟಗಣಿ, ವಿಜಯಕುಮಾರ ಸೇರಿದಂತೆ ಹಲವು ಗ್ರಾಮಸ್ಥರು ಪಿಡಿಒ ಎದುರಲ್ಲೇ ಆರೋಪ ಮಾಡಿದರು.
ಯಾವುದೇ ಪರವಾನಗಿ ಪಡೆಯದೇ ಗ್ರಾಮದ ಮಧ್ಯಭಾಗದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿ, ನಮಾಜ್ ಮಾಡಲು ಮುಂದಾಗಿರುವುದು ಗ್ರಾಮಸ್ಥರಿಗೆ ಗೊತ್ತಾಗುತ್ತಿದ್ದಂತೆ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ತಹಶೀಲ್ದಾರ್ ಕೆ. ರಾಘವೇಂದ್ರ ರಾವ್ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಮಾತನಾಡಿದರು.
‘ಇದು ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದೆ. ನೀವೇ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಿ’ ಎಂದು ಹೇಳಿದ್ದಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ಅಧಿಕಾರಿಗಳು ಬನ್ನಿಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿ ಪರಿಶೀಲನೆ ಮಾಡಿದ ಬಳಿಕ ಇಲ್ಲಿ ನಡೆದಿರುವುದು ಎಲ್ಲವೂ ಅಕ್ರಮ ಎಂದು ಗೊತ್ತಾದ ಮೇಲೆ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ, ಗ್ರಾಮ ಪಂಚಾಯಿತಿ ಪಿಡಿಒ ಸುರೇಶ ಲಮಾಣಿ ಹಾಗೂ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಶೆಡ್ ತೆರವು ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.