
ಶಿರಹಟ್ಟಿ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸ್ಥಳೀಯ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ ಅರ್ಹ ಫಲಾನುಭವಿಗಳಿಗೆ ಪಟ್ಟಾ(ನಿವೇಶನ ಹಂಚಿಕೆ) ವಿತರಣೆ ಮಾಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ ಅಭಿಮಾನಿಗಳ ಸಂಘದ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ತಹಶೀಲ್ದಾರ ಕೆ.ರಾಘವೇಂದ್ರ ರಾವು ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಬಸವರಾಜ ಕಂಬಳಿ ಮಾತನಾಡಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಅವಧಿಯಲ್ಲಿ 2015ರಲ್ಲಿ ಪಟ್ಟಣದಲ್ಲಿನ ಬಡಜನರಿಗೆ ನಿವೇಶನ ಹಂಚಿಕೆ ಮಾಡುವ ಸದುದ್ದೇಶದಿಂದ 5 ಎಕರೆ ಜಮೀನು ಖರೀದಿ ಮಾಡಿದ್ದರು. ಸೂರು ಇಲ್ಲದ ಬಡ ಜನರಿಗೆ ನಿವೇಶನ ನೀಡಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಾ ವಿತರಿಸುವಂತೆ ಅಧಿಕಾರಿಗಳಿಗೆ ಹಲವಾರು ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಂದಿನಿಂದ ಇಂದಿನವರೆಗೂ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಗಳು ಈ ಕುರಿತು ಕ್ರಮ ತೆಗೆದುಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ 2026ರ ಜ.26ರೊಳಗೆ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು. ಇಲ್ಲದೇ ಇದ್ದಲ್ಲಿ ಜಿಲ್ಲಾ ಸಂಘಟನೆಯೊಂದಿಗೆ ಪಟ್ಟಣ ಪಂಚಾಯ್ತಿಗೆ ಬೀಗ ಜಡಿದು, ತಹಶೀಲ್ದಾರ ಕಚೇರಿಯ ಎದುರು ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ್ ದಶಮನಿ, ರವಿ ಗಂಟಿ, ಆನಂದ ಸ್ವಾಮಿ, ಬಸವರಾಜ್ ಪರಿಯವರ, ಸೋಮು ರೋಗಿ, ಜಗದೇಶ್ ಇಟ್ಟೆಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.