ADVERTISEMENT

ಶಿರಹಟ್ಟಿ: ಪಿಎಸ್ಐ ವರ್ಗಾವಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:21 IST
Last Updated 13 ಡಿಸೆಂಬರ್ 2025, 5:21 IST
ಶಿರಹಟ್ಟಿ ಪಿಎಸ್ಐ ಈರಪ್ಪ ರಿತ್ತಿ ವರ್ಗಾವಣೆಗೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾದ ಹೋರಾಟದಲ್ಲಿ ಉಪ ತಹಶೀಲ್ದಾರ್‌ ಗಿರಿಜವ್ವ ಪೂಜಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು
ಶಿರಹಟ್ಟಿ ಪಿಎಸ್ಐ ಈರಪ್ಪ ರಿತ್ತಿ ವರ್ಗಾವಣೆಗೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾದ ಹೋರಾಟದಲ್ಲಿ ಉಪ ತಹಶೀಲ್ದಾರ್‌ ಗಿರಿಜವ್ವ ಪೂಜಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು   

ಶಿರಹಟ್ಟಿ: ಶುಕ್ರವಾರ ಸಂಜೆಯೊಳಗೆ ಪಿಎಸ್ಐ ಈರಪ್ಪ ರಿತ್ತಿ ವರ್ಗಾವಣೆ ಬಗ್ಗೆ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಶನಿವಾರ ಲಕ್ಷ್ಮೇಶ್ವರದ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡುವುದರ ಮೂಲಕ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು ಎಂದು ಹಿಂದೂ ಸಂಘಟನೆಗಳ ಮುಖಂಡ ರಾಜು ಖಾನಪ್ಪನವರ ಎಚ್ಚರಿಕೆ ನೀಡಿದರು.

ಹಿಂದೂಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಮನಬಂದಂತೆ ಅಧಿಕಾರ ನಡೆಸುತ್ತಿರುವ ಪಿಎಸ್ಐ ಈರಪ್ಪ ರಿತ್ತಿ ದೌರ್ಜನ್ಯ ಖಂಡಿಸಿ ಕಳೆದ 15 ದಿನಗಳಿಂದ ಶಿರಹಟ್ಟಿ ತಹಶೀಲ್ದಾರ್‌ ಕಾರ್ಯಾಲಯದ ಮುಂಭಾಗದಲ್ಲಿ ಧರಣಿ ಕೈಗೊಳ್ಳಲಾಗಿತ್ತು. ಡಿ.12ರ ಶುಕ್ರವಾರ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಶಿರಹಟ್ಟಿ ಬಂದ್ ಹಾಗೂ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿತ್ತು. ಅದಕ್ಕನುಗುಣವಾಗಿ ಶುಕ್ರವಾರ ಬೆಳಿಗ್ಗೆ11 ಗಂಟೆಗೆ ಸ್ಥಳೀಯ ಪೇಟೆ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿತು. ನೆಹರೂ ವೃತ್ತದಲ್ಲಿ ಮಾನವ ಸರಪಳಿ ರಚನೆ ಮಾಡಿ ರಸ್ತೆ ತಡೆದು ಪಿಎಸ್ಐ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಗಿರಿಜವ್ವ ಪೂಜಾರ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ರಾಜು‌ ಖಾನಪ್ಪನವರ ಹಾಗೂ ಸಂತೋಷ ಕುರಿ, ಪಿಎಸ್ಐ ಈರಪ್ಪ ರಿತ್ತಿ ಶಿರಹಟ್ಟಿ ತಾಲ್ಲೂಕಿನಲ್ಲಿ ರಾಜಕೀಯ ಹಾಗೂ ಭ್ರಷ್ಟಾಚಾರ ಮಾಡುತ್ತಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಇಲಾಖೆಯ ವರಿಷ್ಠಾಧಿಕಾರಿಗಳ ಕುಮಕ್ಕಿದೆ. ಕನಿಷ್ಠ ₹ 200 ಬಿಡದ ಪಿಎಸ್ಐ ಈರಪ್ಪ ರಿತ್ತಿ ತಾಲ್ಲೂಕಿನ ಅಮಾಯಕ ರೈತರ ಹಣ ವಸೂಲಿ ಮಾಡುತ್ತಿದ್ದಾರೆ. ಇಂತಹ ಪಿಎಸ್ಐ ಇಲಾಖೆಗೆ ಕಪ್ಪು ಚುಕ್ಕೆಯಾಗಿದ್ದು, ಇವರನ್ನು ವರ್ಗಾವಣೆ ಮಾಡದೆ ಇದ್ದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಶಂಕರ ಮರಾಠೆ ಹಾಗೂ ಫಕೀರೇಶ ರಟ್ಟಿಹಳ್ಳಿ ಮಾತನಾಡಿದರು.

ಜಾನು ಲಮಾಣಿ, ನಾಗರಾಜ ಲಕ್ಕುಂಡಿ, ಬಿ.ಡಿ.ಪಲ್ಲೇದ, ವಿಠ್ಠಲ ಬಿಡವೆ, ಶಿವು ಲಮಾಣಿ, ಸೋಮಪ್ಪ ಲಮಾಣಿ, ಹರೀಶ ಗೋಸಾವಿ, ಪ್ರಾಣೇಶ, ಈರಣ್ಣ ಪೂಜಾರ, ವೆಂಕಟೇಶ ದೊಡ್ಡಮನಿ, ಸತೀಶ ಕುಂಬಾರ, ವಿಶಾಲ, ಮಹೇಶ ರೋಖಡಿ, ಸಂತೋಷ ತೊಡೇಕರ, ನಂದಾ ಪಲ್ಲೇದ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಲಂಬಾಣಿ, ಗೋಸಾವಿ ಸಮಾಜದ ಮಹಿಳೆಯರು ಹೋರಾಟದಲ್ಲಿ ಪಾಲ್ಗೊಂಡಿದ್ದರು

ಪಿಎಸ್ಐ ಈರಪ್ಪ ರಿತ್ತಿ ಅವರನ್ನು ವರ್ಗಾವಣೆ ಮಾಡದೆ ಇದ್ದಲ್ಲಿ ನಮ್ಮ ಹೋರಾಟದ ದಿಕ್ಕನ್ನು ಬದಲಿಸಿ ಎಸ್ಪಿ ಕಚೇರಿ ಐಜಿ ಕಚೇರಿ ಮುಂದೆ ಧರಣಿ ಕೈಗೊಳ್ಳಲಾಗುವುದು
ರಾಜು ಖಾನಪ್ಪನವರ ಹಿಂದೂಪರ ಸಂಘಟನೆಗಳ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.