ADVERTISEMENT

ಸಿದ್ಧರಾಮ ಸ್ವಾಮೀಜಿಗೆ ಪಟ್ಟಾಧಿಕಾರ

ಗದಗ ತೋಂಟದಾರ್ಯ ಸಂಸ್ಥಾನಮಠದ 20ನೇ ಪೀಠಾಧಿಪತಿಯಾಗಿ ನೇಮಕ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 19:45 IST
Last Updated 29 ಅಕ್ಟೋಬರ್ 2018, 19:45 IST
ಗದುಗಿನ ತೋಂಟದಾರ್ಯ ಮಠದ 20ನೇ ಪೀಠಾಧಿಪತಿಯಾಗಿ ಸೋಮವಾರ ಪೀಠಾರೋಹಣ ಮಾಡಿದ ನಂತರ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ಮಾತನಾಡಿದರು.ನಿಡಸೋಸಿ ಸಿದ್ದಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ.
ಗದುಗಿನ ತೋಂಟದಾರ್ಯ ಮಠದ 20ನೇ ಪೀಠಾಧಿಪತಿಯಾಗಿ ಸೋಮವಾರ ಪೀಠಾರೋಹಣ ಮಾಡಿದ ನಂತರ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ಮಾತನಾಡಿದರು.ನಿಡಸೋಸಿ ಸಿದ್ದಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ.   

ಗದಗ: ಇತ್ತೀಚೆಗೆ ಲಿಂಗೈಕ್ಯರಾದ ತೋಂಟದಾರ್ಯ ಸಂಸ್ಥಾನಮಠದ 19ನೇ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವ ಸೋಮವಾರ ಇಲ್ಲಿ ವಿಜೃಂಭಣೆಯಿಂದ ನಡೆಯಿತು.

ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ, ಬಸವತತ್ವ, ಲಿಂಗಾಯತ ಧರ್ಮದ ವಿಧಿವಿಧಾನಗಳ ಅನುಸಾರ ಪಟ್ಟಾಧಿಕಾರ ದೀಕ್ಷೆ ಬೆಳಗಿನ ಜಾವ 6:30ರಿಂದ 9 ಗಂಟೆಯವರೆಗೆ ನಡೆಯಿತು. ಬಳಿಕ ಕೆಳದಿ ಅರಸರು ಮಠಕ್ಕೆ ಕೊಡುಗೆಯಾಗಿ ನೀಡಿದ್ದ ಚಿನ್ನದ ಪಾದುಕೆಗಳನ್ನು ತೊಟ್ಟು, ಕೈಯಲ್ಲಿ ವಚನಗಳ ಕಟ್ಟು ಮತ್ತು ಬಂಗಾರದ ದಂಡ ಹಿಡಿದು, ಸಿದ್ಧರಾಮ ಸ್ವಾಮೀಜಿ ಅವರು ತೋಂಟದಾರ್ಯ ಸಂಸ್ಥಾನಮಠದ 20ನೇ ಪೀಠಾಧಿಪತಿಯಾಗಿ, ಪೀಠಾರೋಹಣ ಮಾಡಿದರು.

ಪಟ್ಟಾಧಿಕಾರ ಮಹೋತ್ಸವವವನ್ನು ಕಣ್ತುಂಬಿಕೊಳ್ಳಲು ದೂರದ ಊರುಗಳಿಂದ ಆಗಮಿಸಿದ್ದ ನೂರಾರು ಭಕ್ತರು ಲಿಂಗಾಯತ ಧರ್ಮಕ್ಕೆ ಜಯವಾಗಲಿ, ಬಸವಣ್ಣನವರಿಗೆ ಜಯವಾಗಲಿ ಎಂದು ಜಯಘೋಷ ಮೊಳಗಿಸಿದರು. ಪೀಠಾರೋಹಣದ ಬೆನ್ನಲ್ಲೇ ಸಿದ್ಧರಾಮ ಸ್ವಾಮೀಜಿ ಅವರಿಗೆ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು.

ADVERTISEMENT

ಪೀಠಾರೋಹಣಕ್ಕೆ ಮುನ್ನ ಅಡ್ಡಪಲ್ಲಕ್ಕಿಯಲ್ಲಿ ಬಸವಾದಿ ಶರಣರ ಮತ್ತು ತೋಂಟದಾರ್ಯರ ವಚನಗಳ ಕಟ್ಟುಗಳನ್ನು ಇಟ್ಟು, ಮಠದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಮಧ್ಯಾಹ್ನ 12ಗಂಟೆಯವರೆಗೆ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.
ಪೀಠಾಧಿಕಾರ ವಹಿಸಿಕೊಂಡ ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ಧರಾಮ ಸ್ವಾಮೀಜಿ ಅವರು,‘ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಎಲ್ಲ ಸೇವಾ ಕಾರ್ಯಗಳನ್ನು ವಿಸ್ತರಿಸುವ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಡುತ್ತೇನೆ. ಆಡದೆ ಮಾಡುವನು ರೂಢಿಯೊಳಗುತ್ತಮನು ಎಂಬ ವಚನದಂತೆ ನಡೆದುಕೊಳ್ಳುತ್ತೇನೆ’ಎಂದರು.

‘ಸಿದ್ಧಲಿಂಗ ಸ್ವಾಮೀಜಿ ಅವರ ನಿಧನದ ನಂತರ, ಉತ್ತರಾಧಿಕಾರಿ ನೇಮಕ ವಿಷಯವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿರುವುದು ಸುಳ್ಳು ಸುದ್ದಿ. ಸಿದ್ಧಲಿಂಗ ಶ್ರೀಗಳ ಆಶಯದಂತೆಯೇ ಸಿದ್ಧರಾಮ ಸ್ವಾಮೀಜಿ ಅವರು ಪೀಠ ಅಲಂಕರಿಸಿದ್ದಾರೆ.ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅವರಿಗೆ ಎಲ್ಲರೂ ಕೈಜೋಡಿಸಬೇಕು’ಎಂದು ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ನಿಡಸೋಸಿ ಸಿದ್ದಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಮೊಟಗಿಮಠದ ಪ್ರಭು ಚೆನ್ನಬಸವ ಸ್ವಾಮೀಜಿ, ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಶಾಸಕ ಎಚ್.ಕೆ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ವಿಧಾನಪರಿಷತ್‌ ಸದಸ್ಯ ಎಸ್‌.ವಿ ಸಂಕನೂರ ಸೇರಿದಂತೆ ವಿವಿಧ ಮಠಾಧೀಶರು, ಸಮುದಾಯದ ಗುರು, ಹಿರಿಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.