ADVERTISEMENT

ನರೇಗಲ್ | 'ಸಿದ್ಧಾಂತ ಶಿಖಾಮಣಿ ಓದಿನಿಂದ ಸದ್ಗತಿ'

ಕಾಶಿಪೀಠ ಜಂಗಮವಾಡಿಮಠದ ಚಂದ್ರಶೇಖರ ಶಿವಾಚಾರ್ಯರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:39 IST
Last Updated 19 ನವೆಂಬರ್ 2025, 2:39 IST
ನರೇಗಲ್‌ ಹಿರೇಮಠದ ಹಿರೇಮಠದ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡ ವಾರಣಾಸಿಯ ಕಾಶೀಪೀಠ ಜಂಗಮವಾಡಿಮಠದ ಶ್ರೀಮದ್‌ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ 1008 ಚಂದ್ರಶೇಖರ ಶಿವಾರ್ಯರು ವೈದ್ಯ ಭೂಷಣ ಕಾಶೀನಾಥ ಶಾಸ್ತ್ರಿಗಳು ಗಚ್ಚಿನಮಠ ಇವರ ಜೀವನ ಚರಿತ್ರೆ, ಕಾಶೀ ದರ್ಶನ ಪ್ರವಾಸ ಕಥನ ಬಿಡುಗಡೆಗೊಳಿಸಿದರು
ನರೇಗಲ್‌ ಹಿರೇಮಠದ ಹಿರೇಮಠದ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡ ವಾರಣಾಸಿಯ ಕಾಶೀಪೀಠ ಜಂಗಮವಾಡಿಮಠದ ಶ್ರೀಮದ್‌ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ 1008 ಚಂದ್ರಶೇಖರ ಶಿವಾರ್ಯರು ವೈದ್ಯ ಭೂಷಣ ಕಾಶೀನಾಥ ಶಾಸ್ತ್ರಿಗಳು ಗಚ್ಚಿನಮಠ ಇವರ ಜೀವನ ಚರಿತ್ರೆ, ಕಾಶೀ ದರ್ಶನ ಪ್ರವಾಸ ಕಥನ ಬಿಡುಗಡೆಗೊಳಿಸಿದರು   

ನರೇಗಲ್: ‘ಜೀವನದ ಎಲ್ಲ ಪ್ರಶ್ನೆಗಳಿಗೆ ಸಿದ್ಧಾಂತ ಶಿಖಾಮಣಿಯಲ್ಲಿ ಸರಿಯಾದ ಉತ್ತರ ಇರುವುದರಿಂದ ಅದನ್ನು ಪ್ರತಿಯೊಬ್ಬರೂ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ವಾರಣಾಸಿ ಕಾಶಿಪೀಠ ಜಂಗಮವಾಡಿಮಠದ 1008 ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದಲ್ಲಿ ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ಈಚೆಗೆ ನಡೆದ ಪುರಾಣ ಮಂಗಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಈ ಹಿಂದೆ ನಾಲ್ಕು ವೇದಗಳು, 28 ಆಗಮಗಳನ್ನು ಓದುವ ಜನರಿದ್ದರು. ಆದರೆ ಈಗ ಅವುಗಳನ್ನು ಓದುವವರು ಇಲ್ಲ; ಓದಲು ಸಮಯವೂ ಇಲ್ಲ. ಸಿದ್ಧಾಂತ ಶಿಖಾಮಣಿಯನ್ನು ಓದಲು ಸಾಧ್ಯವಾಗದಿದ್ದರೂ, ಅದರ ಸೇವೆಯನ್ನಾದರೂ ಮಾಡಿದರೆ ಸದ್ಗತಿ ದೊರೆಯುತ್ತದೆ’ ಎಂದರು.

ADVERTISEMENT

‘ಮನುಷ್ಯ ಜನ್ಮ ದೊರಕುವುದೇ ದುರ್ಲಭ. ನಮಗೆ ದೊರೆತಿರುವ ಜನ್ಮವನ್ನು ಬೇಕಾಬಿಟ್ಟಿಯಾಗಿ ಕಳೆಯಬಾರದು. ಮಾನವ ಜನ್ಮವನ್ನು ಎಂದಿಗೂ ವ್ಯರ್ಥ ಮಾಡಿಕೊಳ್ಳದೆ, ದಾನ-ಧರ್ಮ, ಸತ್ಸಂಗದ ಮೂಲಕ ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಹೇಳಿದರು

‘ತಾವು ಕಲಿತ ವಿದ್ಯೆಯನ್ನು ಸರ್ವರಿಗೂ ಧಾರೆ ಎರೆದು, ಅವರನ್ನು ಜಾಗೃತರಾಗುವಂತೆ ಮಾಡುವುದು ಸಹ ತಪಸ್ಸಾಗಿದೆ. ಅದನ್ನು ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಶ್ರದ್ಧೆಯಿಂದ ಮಾಡುತ್ತಿದ್ದಾರೆ’ ಎಂದು ತಿಳಿಸಿದರು. 

ನರೇಗಲ್‌ನ ಮಲ್ಲಿಕಾರ್ಜುನ ಶಿವಾಚಾರ್ಯರು ಪ್ರಾಸ್ತಾವಿಕ ನುಡಿಗಳನ್ನಾಡಿ, ಶ್ರೀಮಠದ ಬೆಳವಣಿಗೆ ಬಗ್ಗೆ ತಿಳಿಸಿದರು. ಗಚ್ಚಿನಮಠದ ವೈದ್ಯ ಭೂಷಣ ಕಾಶೀನಾಥ ಶಾಸ್ತ್ರಿ ಅವರ ಜೀವನಚರಿತ್ರೆ, ಕಾಶಿ ದರ್ಶನ ಪ್ರವಾಸ ಕಥನ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

ಕೆ.ಬಿ. ಧನ್ನೂರ, ಎಸ್.ಎಸ್. ಮೇಟಿ, ವೀರೇಶ ಕೂಗುಮಠ, ವಿ.ಕೆ. ಗುರುಮಠ, ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಇದ್ದರು. 

ಪುರಾಣ ಆಲಿಸಲು ಸಲಹೆ

‘ಭಗವಂತನ ಪ್ರತಿ ಅವತಾರದ ಹಿಂದೆಯೂ ಒಂದೊಂದು ಸಂದೇಶವಿದೆ. ದುಷ್ಟರನ್ನು ಸೆದೆಬಡಿದು ಶಿಷ್ಟರನ್ನು ಪಾಲಿಸುವುದಕ್ಕಾಗಿಯೇ ಭಗವಂತ ಕಾಲಕಾಲಕ್ಕೆ ಅವತಾರವೆತ್ತಿ ಬರುತ್ತಾನೆ. ವೀರಭದ್ರೇಶ್ವರನನ್ನು ಸರ್ವರೂ ಪೂಜಿಸುತ್ತಾರೆ. ಅವನು ಸಕಲರನ್ನೂ ಕಾಯುತ್ತಾನೆ. ಅವನ ಪುರಾಣ ಕೇಳಿದವರೆಲ್ಲ ಧನ್ಯರು’ ಎಂದು ಅಬ್ಬಿಗೇರಿ–ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.