ADVERTISEMENT

ಗದಗ | ಬಂಡಿ ದಂಧೆಕೋರರ ಹೆಡೆಮುರಿ ಕಟ್ಟಿ: ಆಗ್ರಹ

ನೊಂದವರಿಗೆ ನ್ಯಾಯ ಸಿಗದಿದ್ದರೆ ಮುಂದಿನ ವಾರದಲ್ಲಿ ಮತ್ತೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 16:17 IST
Last Updated 6 ಮಾರ್ಚ್ 2025, 16:17 IST
ಗದಗ ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆಕೋರರಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿ ಎಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಗದಗ ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆಕೋರರಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿ ಎಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು   

ಗದಗ: ‘ಕೆಲವು ಬಡ್ಡಿ ದಂಧೆಕೋರರು ಅವಳಿ ನಗರದ ಜನರಿಗೆ ಕಂಟಕ ಪ‍್ರಾಯರಾಗಿದ್ದಾರೆ. ಹಣ ಕೊಟ್ಟು ಹೆಚ್ಚಿನ ಬಡ್ಡಿ ವಸೂಲಿ ಮಾಡುವುದರ ಮೂಲಕ ಜನರ ಪ್ರಾಣ ಹಿಂಡುತ್ತಿದ್ದಾರೆ. ಪೊಲೀಸರು ಅಂತವರ ಹೆಡೆಮುರಿ ಕಟ್ಟಬೇಕು’ ಎಂದು ಬಡ್ಡಿ ದಂಧೆಯಿಂದ ನೋವು ಅನುಭವಿಸಿರುವುದಾಗಿ ಹೇಳಿಕೊಂಡಿರುವ ಅಂಬಿಕಾ ಕಬಾಡಿ ಆಗ್ರಹಿಸಿದರು.

ಅವಳಿ ನಗರದಲ್ಲಿ ಬಡ್ಡಿ ದಂಧೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಗಾಂಧಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಮಾತನಾಡಿದರು.

‘ಬಡ್ಡಿ ದಂಧೆಕೋರರ ಹಾವಳಿಯಿಂದಾಗಿ ಗದಗ-ಬೆಟಗೇರಿ ಅವಳಿ ನಗರದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಇವರಿಗೆ ಯಾರ ಭಯವೂ ಇಲ್ಲದಂತಾಗಿದ್ದು, ಅಮಾಯಕರ ಜೀವ ಹಿಂಡುತ್ತಿದ್ದಾರೆ. ಬಡ್ಡಿಗೆ ಮೀಟರ್ ಬಡ್ಡಿ, ಚಕ್ರಬಡ್ಡಿ ಸೇರಿಸಿ ವಸೂಲಿ ಮಾಡುವುದರ ಜೊತೆಗೆ ಅನೇಕರ ಆಸ್ತಿಯನ್ನು ಕಬಳಿಸಿದ್ದಾರೆ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಬಡ್ಡಿ ದಂಧೆಕೋರ ಯಲ್ಲಪ್ಪ ಮಿಸ್ಕಿನ್ ಅವರನ್ನ ಕೂಡಲೇ ಗಡಿಪಾರು ಮಾಡಬೇಕು. ಜೊತೆಗೆ, ಅವರ ಆಸ್ತಿ ಮುಟ್ಟುಗೋಲು ಹಾಕಬೇಕು. ಅಮಾಯಕರಿಂದ ಪಡೆದಿರುವ ಚೆಕ್, ಬಾಂಡ್ ಸೇರಿದಂತೆ ಇತರೆ ದಾಖಲೆಗಳನ್ನು ಮೂಲ ಮಾಲೀಕರಿಗೆ ತಲುಪಿಸಬೇಕು. ಅನಧಿಕೃತ ಫೈನಾನ್ಸ್ ಗಳಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

‘ಅವಳಿ ನಗರದಲ್ಲಿ ಬಡ್ಡಿ ದಂಧೆಕೋರರು ಅಮಾಯಕ ಜನರನ್ನು ಸುಲಿಗೆ ಮಾಡುತ್ತಾ ಬಂದಿದ್ದು, ಅವರ ವಿರುದ್ಧ ಅನೇಕ ಬಾರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆರೋಪ ಮಾಡಿದರು.

‘ಅಕ್ರಮವಾಗಿ ಬಡ್ಡಿ ದಂಧೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮವಹಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ಪೊಲೀಸರಿಗೂ ಮನವಿ ಸಲ್ಲಿಸಲಾಗಿದೆ. ಅವರ ಭರವಸೆಯ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಗಿದೆ. ಒಂದು ವೇಳೆ ಮಾರ್ಚ್‌ 13ರ ಒಳಗಾಗಿ ನೊಂದವರಿಗೆ ನ್ಯಾಯ ಸಿಗದಿದ್ದರೆ ಮಾರ್ಚ್‌ 14 ಅಥವಾ 15ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರತಿಭಟನೆಗೂ ಮುನ್ನ ವಿವಿಧ ಸಂಘಟನೆಗಳ ಜತೆಗೂಡಿ ನೂರಾರು ಮಹಿಳೆಯರು ಬೆಟಗೇರಿಯ ಕೇಸರ್ ಪ್ಯಾಲೇಸ್‌ನಿಂದ ಗಾಂಧಿ ವೃತ್ತದವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬಡ್ಡಿ ದಂಧೆ ನಡೆಸುವವರ ವಿರುದ್ಧ ಮಾರ್ಚ್‌ 13ರ ಒಳಗೆ ಕ್ರಮ ಕೈಗೊಳ್ಳದಿದ್ದರೆ ಎರಡು ಸಾವಿರ ಮಂದಿ ಸೇರಿಸಿ ಗದಗ ಬಂದ್‌ ಮಾಡಲಾಗುವುದು
ಅಂಬಿಕಾ ಕಬಾಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.