ADVERTISEMENT

ಕೃಷಿಯಿಂದ ಕುಬೇರನಾದ ಈಶ್ವರಪ್ಪ: ಪ್ರತಿವರ್ಷ ಲಕ್ಷಾಂತರ ಆದಾಯ

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿವಿಧ ಬೆಳೆ

ಕಾಶಿನಾಥ ಬಿಳಿಮಗ್ಗದ
Published 3 ಜನವರಿ 2026, 4:55 IST
Last Updated 3 ಜನವರಿ 2026, 4:55 IST
ಮುಂಡರಗಿಯ ರೈತ ಈಶ್ವರಪ್ಪ ಹಂಚಿನಾಳ ಅವರು ತೋಟದಲ್ಲಿ ಚಿಕ್ಕು ಬೆಳೆದಿರುವುದು
ಮುಂಡರಗಿಯ ರೈತ ಈಶ್ವರಪ್ಪ ಹಂಚಿನಾಳ ಅವರು ತೋಟದಲ್ಲಿ ಚಿಕ್ಕು ಬೆಳೆದಿರುವುದು   

ಮುಂಡರಗಿ: ಶ್ರದ್ಧೆ, ಪರಿಶ್ರಮ ಇದ್ದರೆ ಕೃಷಿ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬಹುದು. ಇದಕ್ಕೆ ತಾಲ್ಲೂಕಿನ ನಾಗರಳ್ಳಿ ಗ್ರಾಮದ ರೈತ ಈಶ್ವರಪ್ಪ ಹಂಚಿನಾಳ ಅವರೇ ನಿದರ್ಶನ.

ಪೂರ್ವಿಕರಿಂದ ಬಂದ 12 ಎಕರೆ ಕೃಷಿ ಜಮೀನಿನಲ್ಲಿ ಕೃಷಿ ಮಾಡುತ್ತಾ, ಉತ್ತಮ ಆದಾಯ ಗಳಿಸಿ, ಅದರಿಂದ 60 ಎಕರೆ ಜಮೀನು ಖರೀದಿಸಿ, ಇದೀಗ ಯಶಸ್ವಿ ಕೃಷಿಕರಾಗಿದ್ದಾರೆ.

ಆರಂಭದಲ್ಲಿ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ ಇವರು, ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಬೇಕೆಂದು ಮರಳಿ ಗ್ರಾಮಕ್ಕೆ ಆಗಮಿಸಿ ಕೃಷಿ ಆರಂಭಿಸಿದರು. ಕೃಷಿಯಲ್ಲಿ ಸಾಧನೆ ಮಾಡಿ ಇದೀಗ ಪ್ರಗತಿಪರ ಕೃಷಿಕರಾಗಿ ತಾಲ್ಲೂಕಿಗೇ ಚಿರಪರಿಚಿತರಾಗಿದ್ದಾರೆ.

ADVERTISEMENT

ಸಾಂಪ್ರದಾಯಿಕ ಬೆಳೆಗಳ ಜೊತೆಗೆ ತಾಳೆ, ಕಬ್ಬು, ಮಾವು, ಅಂಜೂರು, ಚಿಕ್ಕು, ಲಿಂಬೆ, ಗೋಡಂಬಿ ಬೆಳೆಗೂ ಇವರು ಒತ್ತು ನೀಡಿದ್ದಾರೆ. ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದು, 30 ಹಸುಗಳನ್ನು ಸಾಕಿ, ಸ್ವಂತ ಡೈರಿ ಆರಂಭಿಸಿ ಆ ಮೂಲಕ ಲಾಭ ಗಳಿಸುತ್ತಿದ್ದಾರೆ.

ಈಶ್ವರಪ್ಪ ಅವರ ಕೃಷಿ ಸಾಧನೆಗಾಗಿ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ, ‘ರಾಷ್ಟ್ರೀಯ ಶ್ರೇಷ್ಠ ಗೋಡಂಬಿ ಬೆಳೆಗಾರ’ ಪ್ರಶಸ್ತಿ ಸೇರಿದಂತೆ ಸಂಘ–ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಂದ ಹಲವು ಪುರಸ್ಕಾರಗಳೂ ದೊರೆತಿವೆ.

‘ಕೃಷಿ ನಂಬಿ ಬದುಕಿದರೆ ಎಂದಿಗೂ ಕೈಬಿಡುವುದಿಲ್ಲ. ಕೃಷಿಯಿಂದ ಉತ್ತಮ ಆದಾಯ ಗಳಿಸಬಹುದು. ಯುವಜನತೆ ಕೃಷಿಯತ್ತ ಒಲವು ತೋರಬೇಕಿದೆ’ ಎನ್ನುತ್ತಾರೆ ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ.

ಗ್ರಂಥ ಲೋಕಾರ್ಪಣೆ ಇಂದು

ಈಶ್ವರಪ್ಪ ಹಂಚಿನಾಳ ಅವರ ಕೃಷಿ ಸಾಧನೆ ಕುರಿತಾದ ‘ಬದುಕಿನ ಪಯಣ’ ಗ್ರಂಥ ಬಿಡುಗಡೆ ಸಮಾರಂಭವು ಜ.3ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಸ್ವಾಮಿ ವಿವೇಕಾನಂದ ಶಾಲೆಯ ಆವರಣದಲ್ಲಿ ನಡೆಯಲಿದೆ. ಅನ್ನದಾನೀಶ್ವರ ಸ್ವಾಮಿಜಿ ಸಾನ್ನಿಧ್ಯ ನಿರ್ಭಯಾನಂದ ಸ್ವಾಮಿಜಿ ನೇತೃತ್ವ ವಹಿಸುವರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗ್ರಂಥ ಬಿಡುಗಡೆ ಗೊಳಿಸುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ವಿಜಯ ಸಂಕೇಶ್ವರ ಬಿ.ವಿ.ಶಿರೂರ ಎಸ್.ಎಸ್.ಬೀಳಗಿಪೀರ ಪಾಲ್ಗೊಳ್ಳಲಿದ್ದಾರೆ.