ADVERTISEMENT

ಸ್ವಚ್ಛ ಭಾರತ ಯೋಜನೆಗೆ ಹಿನ್ನಡೆ: ತುಕ್ಕು ಹಿಡಿಯುತ್ತಿವೆ ಕಸದ ವಾಹನಗಳು

ಬಳಕೆಯಾಗದ ಸೌಲಭ್ಯಗಳು

ಶ್ರೀಶೈಲ ಎಂ.ಕುಂಬಾರ
Published 5 ಫೆಬ್ರುವರಿ 2024, 6:28 IST
Last Updated 5 ಫೆಬ್ರುವರಿ 2024, 6:28 IST
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮ ಪಂಚಾಯ್ತಿಯ ಕಸ ಸಂಗ್ರಹಿಸುವ ವಾಹನ ದೂಳು ಹಿಡಿದು ತುಕ್ಕು ಹಿಡಿಯುವ ಹಂತಕ್ಕೆ ತಲುಪಿದೆ
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮ ಪಂಚಾಯ್ತಿಯ ಕಸ ಸಂಗ್ರಹಿಸುವ ವಾಹನ ದೂಳು ಹಿಡಿದು ತುಕ್ಕು ಹಿಡಿಯುವ ಹಂತಕ್ಕೆ ತಲುಪಿದೆ   

ಗಜೇಂದ್ರಗಡ: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಸ್ವಚ್ಛ ಭಾರತ ಯೋಜನೆಯಡಿ ಒಣ, ಹಸಿಕಸ ಹಾಕಲು ಸರ್ಕಾರ ಪ್ರತಿ ಮನೆಗಳಿಗೆ ಪ್ಲಾಸ್ಟಿಕ್‌ ಬಕೆಟ್‌ ಹಾಗೂ ಅದನ್ನು ತೆಗೆದುಕೊಂಡು ಹೋಗಲು ಪ್ರತಿ ಗ್ರಾಮ ಪಂಚಾಯ್ತಿಗೆ ವಾಹನ ವ್ಯವಸ್ಥೆ ಕಲ್ಪಿಸಿದೆ. ಆದರೆ, ವಾಹನ ಬಳಕೆಯಾಗದೆ ತುಕ್ಕು ಹಿಡಿಯುತ್ತಿದ್ದು, ಪ್ಲಾಸ್ಟಿಕ್‌ ಬಕೆಟ್‌ಗಳು ಅನ್ಯ ಕೆಲಸಗಳಿಗೆ ಬಳಕೆಯಾಗುತ್ತಿವೆ.

ಗಜೇಂದ್ರಗಡ ತಾಲ್ಲೂಕಿನಲ್ಲಿ ರಾಮಾಪುರ, ಗೋಗೇರಿ, ಕುಟೋಂಜಿ, ರಾಜೂರ, ಸೂಡಿ, ಲಕ್ಕಲಕಟ್ಟಿ, ಶಾಂತಗೇರಿ, ಹಾಲಕೆರೆ, ನಿಡಗುಂದಿ, ಮಾರನಬಸರಿ, ಇಟಗಿ, ಮುಶಿಗೇರಿ, ಶಾಂತಗೇರಿ ಒಟ್ಟು 13 ಗ್ರಾಮ ಪಂಚಾಯ್ತಿಗಳಿದ್ದು, ಪಂಚಾಯ್ತಿಗಳ ಕೇಂದ್ರ ಸ್ಥಾನ ಒಳಗೊಂಡಂತೆ ಗಜೇಂದ್ರಗಡ ತಾಲ್ಲೂಕಿನಲ್ಲಿ ಒಟ್ಟು 46 ಗ್ರಾಮಗಳಿವೆ.

ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದರಂತೆ ಹಂತ ಹಂತವಾಗಿ ಸ್ವಚ್ಛ ಭಾರತ್‌ ಮಿಷನ್‌ ಹಾಗೂ ಗ್ರಾಮ ಪಂಚಾಯ್ತಿಯ 14ನೇ ಮತ್ತು 15ನೇ ಹಣಕಾಸಿನಲ್ಲಿ ಸುಮಾರು ₹5.80 ಲಕ್ಷ ವೆಚ್ಚದಲ್ಲಿ ಕಸ ವಿಲೇವಾರಿ ವಾಹನ ಖರೀದಿಸಲಾಗಿದೆ. ಕೆಲ ಪಂಚಾಯ್ತಿಗಳಲ್ಲಿ ವಾಹನ ಖರೀದಿಸಿ ಮೂರು ವರ್ಷ ಕಳೆದರೂ ಕೆಲ ಪಂಚಾಯ್ತಿಗಳಲ್ಲಿ ಒಂದು ದಿನವೂ ಬಳಕೆಯಾಗಿಲ್ಲ. ಕೆಲವು ಪಂಚಾಯ್ತಿಗಳಲ್ಲಿ ಕೆಲವು ಸರ್ಕಾರಿ ಕಾರ್ಯಕ್ರಮಗಳ ಕುರಿತು ಜಾಗೃತಿ ಹಾಗೂ ಪ್ರಚಾರಕ್ಕಾಗಿ ಆಗಾಗ ಬಳಸಲಾಗುತ್ತಿದೆ. ಆದರೆ ಬಹುತೇಕ ಪಂಚಾಯ್ತಿಗಳಲ್ಲಿ ವಾಹನಗಳನ್ನು ಪಂಚಾಯ್ತಿ ಮುಂದೆ ಅಥವಾ ಖಾಸಗಿ ಜಾಗೆಯಲ್ಲಿ ನಿಲ್ಲಿಸಲಾಗಿದ್ದು, ದೂಳು ಹಿಡಿದು ತುಕ್ಕು ಹಿಡಿಯುವ ಹಂತಕ್ಕೆ ತಲುಪುತ್ತಿವೆ.

ADVERTISEMENT

ಕಸ ತುಂಬುವ ವಾಹನ ಓಡಿಸಲು ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಮುಗಿಸಿದ ಹಾಗೂ ಕಸ ಸಂಗ್ರಹಣೆ, ಘನತ್ಯಾಜ್ಯ ನಿರ್ವಹಣೆಗೆ ಸ್ವ ಸಹಾಯ ಗುಂಪಿನ 3 ಜನ ಮಹಿಳಾ ಸಿಬ್ಬಂದಿಯನ್ನು ನೇಮಿಸಿ, ಅವರಿಗೆ ಸೂಕ್ತ ತರಬೇತಿ ನೀಡಿ, ಕಸ ಸಂಗ್ರಹಣೆ ಆರಂಭಿಸಬೇಕು. ಆರಂಭದಲ್ಲಿ 3 ತಿಂಗಳು ವಾಹನಕ್ಕೆ ಇಂಧನ ಹಾಗೂ ಮಹಿಳಾ ಸಿಬ್ಬಂದಿಗೆ ಗ್ರಾಮ ಪಂಚಾಯ್ತಿ ವತಿಯಿಂದ ಸಂಬಳ ನೀಡಬೇಕು. ಬಳಿಕ ಸಂಸ್ಕರಣಾ ಘಟಕದಿಂದ ಬರುವ ಆದಾಯ ಹಾಗೂ ಕಸ ಸಂಗ್ರಹಿಸುವ ಮನೆಯಿಂದ ತೆರಿಗೆ ಸಂಗ್ರಹಿಸಿ ಅದರಲ್ಲಿಯೇ ವಾಹನಕ್ಕೆ ಇಂಧನ ಹಾಗೂ ಸಿಬ್ಬಂದಿ ವೇತನ ಹಂಚಿಕೆ ಮಾಡಬೇಕೆಂಬ ಆದೇಶವಿದೆ. ಹೀಗಾಗಿ ಹಲವು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಆದರೆ ಕಸ ಸಂಗ್ರಹಣೆ, ನಿರ್ವಹಣೆ ಕಾರ್ಯ ಮಾತ್ರ ಆರಂಭವಾಗಿಲ್ಲ.

ಕಾರ್ಯಾರಂಭ ಮಾಡಿಲ್ಲ:

ತಾಲ್ಲೂಕಿನ 13 ಗ್ರಾಮ ಪಂಚಾಯ್ತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗ ಅನುಷ್ಟಾನಗೊಳಿಸುತ್ತಿದ್ದು, ಗೋಗೇರಿ, ಕುಂಟೋಜಿ, ಸೂಡಿ, ಇಟಗಿ, ನಿಡಗುಂದಿ, ಶಾಂತಗೇರಿ, ಮುಶಿಗೇರಿ, ಹಾಲಕೆರೆ ಗ್ರಾಮ ಪಂಚಾಯ್ತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿವೆ.

ರಾಜೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯದಲ್ಲಿ ಘಟಕ ನಿರ್ಮಿಸಲು ಜಾಗ ಗುರುತಿಸಲಾಗಿದೆ. ರಾಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಲಝರಿ ಗ್ರಾಮದ ನಾಗರಿಕ ಸೌಲಭ್ಯದಲ್ಲಿ ಘಟಕ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ತಕರಾರು ಬಂದಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಲಕ್ಕಲಕಟ್ಟಿ ಗ್ರಾಮ ಪಂಚಾಯ್ತಿಯಲ್ಲಿ ಅರಣ್ಯ ಭೂಮಿಯಲ್ಲಿ ಘಟಕ ನಿರ್ಮಿಸಲಾಗಿತ್ತು. ಹೀಗಾಗಿ ಅರಣ್ಯ ಇಲಾಖೆಯವರು ಘಟಕವನ್ನು ತೆರವುಗೊಳಿಸಿದ್ದಾರೆ. ಗುಳಗುಳಿ ಗ್ರಾಮ ಪಂಚಾಯ್ತಿಯಲ್ಲಿ ಜಾಗ ಗುರುತಿಸಿಲ್ಲ.

ಎಲ್ಲರ ಸಹಕಾರ ಮುಖ್ಯ
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕಸ ಮುಕ್ತ ದೇಶವಾಗಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದರೆ ಅವುಗಳನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲು ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳು ವಿಫಲರಾಗಿರುವುದರಿಂದ ಯೋಜನೆ ವ್ಯರ್ಥವಾಗುವುದರ ಜೊತೆಗೆ ಜನರ ತೆರಿಗೆ ಹಣ ಪೋಲಾಗುತ್ತಿದೆ. ಉಮೇಶ ಮಲ್ಲಾಪುರ, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ, ಇಟಗಿ
ನಿಯಮ ಸಡಿಲಿಸಿ
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ ನೀಡಿರುವ ಕಸ ಸಂಗ್ರಹಿಸುವ ವಾಹನದ ಚಾಲಕ ಹಾಗೂ ಸಿಬ್ಬಂದಿ ಮಹಿಳೆಯರೇ ಆಗಿರಬೇಕೆಂಬ ನಿಯಮ ಸಡಿಲಿಸಿ ಪುರುಷರಿಗೆ ಅವಕಾಶ ನೀಡುವುದರ ಜೊತೆಗೆ ಸಿಬ್ಬಂದಿ ವೇತನ ಹಾಗೂ ವಾಹನದ ಇಂಧನಕ್ಕೆ ಪ್ರತ್ಯೇಕವಾಗಿ ಅನುದಾನ ನೀಡಲು ಮುಂದಾಗಬೇಕು. ಮುತ್ತಣ್ಣ ತಳವಾರ, ಗ್ರಾಮ ಪಂಚಾಯ್ತಿ ಸದಸ್ಯ, ರಾಜೂರ
ತೆರಿಗೆ ಹಣ ವ್ಯರ್ಥ
ಕಸ ತುಂಬುವ ವಾಹನ ಖರೀದಿಸುವ ಮೊದಲು ಅದಕ್ಕೆ ಬೇಕಾಗುವ ಸಿಬ್ಬಂದಿ ನೇಮಕ ಮಾಡಿ, ಕಸ ವಿಲೇವಾರಿ ಮಾಡಲು ಘಟಕ ನಿರ್ಮಿಸಬೇಕಿತ್ತು. ಆದರೆ ಇದ್ಯಾವುದನ್ನು ಮಾಡದೆ ಯಾರದೋ ಲಾಭಕ್ಕಾಗಿ ಲಕ್ಷಾಂತರ ಜನರ ತೆರಿಗೆ ಹಣ ಖರ್ಚು ಮಾಡಿ ವಾಹನ ಖರೀದಿಸಿ ತುಕ್ಕು ಹಿಡಿಯುವಂತೆ ಮಾಡಿರುವುದು ವಿಪರ್ಯಾಸವೇ ಸರಿ. ಅಪ್ಪು ಮತ್ತಿಕಟ್ಟಿ, ಯುವ ಮುಖಂಡ, ಗಜೇಂದ್ರಗಡ
ಪ್ರತ್ಯೇಕ ಅನುದಾನ ಮೀಸಲಿಡಿ
ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಅಡಿಯಲ್ಲಿ ಗ್ರಾಮಗಳಲ್ಲಿ ಕಸ ಸಂಗ್ರಹಣೆಗೆ ವಾಹನ ಚಾಲಕ ಹಾಗೂ ಕಸ ಸಂಗ್ರಹಣೆ ಕೆಲಸಕ್ಕೆ ಮಹಿಳೆಯರಿಗೆ ನೀಡಿರುವುದು ಮಹಿಳಾ ಸಬಲಿಕರಣಕ್ಕೆ ಪೂರಕವಾಗಿದೆ. ಆದರೆ ಈ ಹುದ್ದೆಗಳಿಗೆ ಪ್ರತ್ಯೇಕ ವೇತನ ವ್ಯವಸ್ಥೆ ಮಾಡದೆ, ಕಸ ಸಂಗ್ರಹಿಸುವ ಮನೆಯಿಂದ ತೆರಿಗೆ ಸಂಗ್ರಹಿಸಿ ಅದರಲ್ಲಿಯೇ ವೇತನ ಹಾಗೂ ವಾಹನದ ಇಂಧನಕ್ಕೆ ಬಳಸಬೇಕು ಎಂಬ ನಿಯಮ ಇದೆ. ಹೀಗಾಗಿ  ಕೆಲಸಗಳಿಗೆ ಯಾರೂ ಮುಂದೆ ಬರುವುದಿಲ್ಲ. ಇದರಿಂದಾಗಿ ಜನರ ತೆರಿಗೆ ಹಣ ಖರ್ಚು ಮಾಡಿ ಖರೀದಿಸಿದ ವಾಹನ, ಕಸ ಸಂಗ್ರಹಣೆ ಬಕೆಟ್‌ ಹಾಗೂ ವಿಲೇವಾರಿ ಘಟಕ ವ್ಯರ್ಥವಾಗುತ್ತಿವೆ. ಸುರೇಶಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ, ರಾಜೂರ
ಡಿ.ಮೋಹನ್‌ ಇಓ
ಶೀಘ್ರದಲ್ಲಿಯೇ ಕಸ ಸಂಗ್ರಹಣೆ
ಗಜೇಂದ್ರಗಡ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಕಸ ಸಂಗ್ರಹಣೆ ಮಾಡಿ ವಿಲೇವಾರಿ ಮಾಡುವುದು ಗ್ರಾಮ ಪಂಚಾಯ್ತಿ ಆದ್ಯ ಕರ್ತವ್ಯವಾಗಿರುತ್ತದೆ. ಹೀಗಾಗಿ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪೂರ್ಣಗೊಳಿಸಿ, ಗ್ರಾಮದ ಪ್ರತಿ ಮನೆಯಲ್ಲಿ ಕಸ ಸಂಗ್ರಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಡಿ.ಮೋಹನ್‌, ತಾಲ್ಲೂಕು ಪಂಚಾಯ್ತಿ ಇಓ, ಗಜೇಂದ್ರಗಡ
ಗಜೇಂದ್ರಗಡ ಸಮೀಪದ ಕುಂಟೋಜಿ ಗ್ರಾಮ ಪಂಚಾಯ್ತಿ ಮುಂದೆ ಕಸ ಸಂಗ್ರಹಿಸುವ ವಾಹನ ನಿಂತಿದೆ
ಉಮೇಶ ಮಲ್ಲಾಪುರ
ಅನ್ಯ ಕಾರ್ಯಕ್ಕೆ ಬಳಕೆ
ಗ್ರಾಮಗಳ ಪ್ರತಿ ಮನೆಯಿಂದ ಹಸಿಕಸ, ಒಣಕಸವನ್ನು ಪ್ರತ್ಯೇಕ ಬಕೆಟ್‌ಗಳಲ್ಲಿ ಸಂಗ್ರಹಿಸಿ ವಾಹನದ ಮೂಲಕ ಘನತ್ಯಾಜ್ಯ ವಿಲೇವಾರಿ ಮಾಡಬೇಕಿತ್ತು. ಆದರೆ ಯಾವ ಗ್ರಾಮಗಳಲ್ಲಿಯೂ ಈ ಕಾರ್ಯ ನಡೆಯುತ್ತಿಲ್ಲ. ಇದರಿಂದ ಮನೆ ಮತ್ತು ಅಂಗಡಿಗಳಲ್ಲಿನ ಕಸ ಚರಂಡಿ, ತೆರೆದ ಬಾವಿ, ಖಾಲಿ ಜಾಗಗಳಲ್ಲಿ ಸಂಗ್ರಹವಾಗುತ್ತಿದ್ದು, ಸ್ವಚ್ಛ ಭಾರತ್‌ ಪರಿಕಲ್ಪನೆಗೆ ವ್ಯತೀರಿಕ್ತವಾಗಿದೆ. ಕಸ ಸಂಗ್ರಹಣೆಗೆ ನೀಡಿದ್ದ ಬಕೆಟ್‌ಗಳನ್ನು ಜನರು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಗಜೇಂದ್ರಗಡ ಸಮೀಪದ ಗೋಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಆದರೆ ಬಳಕೆಯಾಗುತ್ತಿಲ್ಲ
ಮುತ್ತಣ್ಣ ತಳವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.