ಗದಗ: ‘ಆಯುರ್ವೇದದ ಮೂಲ ತತ್ವಗಳನ್ನು ಬಿಡದೆ; ಆಯುರ್ವೇದ ಶಾಸ್ತ್ರದ ಬೆಳವಣಿಗೆಗೆ ಹೊಸ ತಂತ್ರಜ್ಞಾನಗಳನ್ನೂ ಅಳವಡಿಸಿಕೊಳ್ಳಬೇಕಿದೆ’ ಎಂದು ರಾಷ್ಟ್ರೀಯ ಆಯುಷ್ ವಿಜ್ಞಾನ ಆಯೋಗ ಆಯುರ್ವೇದ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಬಿ.ಎಸ್.ಪ್ರಸಾದ್ ಹೇಳಿದರು.
ನಗರದ ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ವತಿಯಿಂದ ಶಿವಾನಂದ ಸಭಾಭವನದಲ್ಲಿ ಶನಿವಾರ ನಡೆದ ‘ಚೈತನ್ಯ-2025’ ರಾಷ್ಟ್ರ ಮಟ್ಟದ ಆಯುರ್ವೇದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ಇಂದಿನ ಆಯುರ್ವೇದ ಸಂಶೋಧನೆಯ ಆವಿಷ್ಕಾರಗಳು ಮುಂದಿನ ಸಂಪ್ರದಾಯಗಳಾಗಲಿವೆ. ಆಯುರ್ವೇದ ಶಿಕ್ಷಣ ಹಾಗೂ ಚಿಕಿತ್ಸೆಯನ್ನು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಇಂದಿನ ಪಿಳಿಗೆಗೆ ನೀಡುವುದು ಅನಿವಾರ್ಯವಾಗಿದೆ’ ಎಂದರು.
ಜೆಎಸ್‌ವಿವಿ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಸ್.ಪಾಟೀಲ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಆಯುರ್ವೇದವನ್ನು ಆತ್ಮವಿಶ್ವಾಸದಿಂದ ಅಭ್ಯಾಸ ಮಾಡಬೇಕಿದೆ. ಆಯುರ್ವೇದ, ಯೋಗ ಹಾಗೂ ಇತರೆ ವಿಜ್ಞಾನಗಳಲ್ಲಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಚಿಕಿತ್ಸಾ ವಿಧಾನಗಳಲ್ಲಿ ಸಂಶೋಧನೆ ನಡೆಸಬೇಕಿದೆ’ ಎಂದು ಹೇಳಿದರು.
ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ. ಜಿ.ಬಿ.ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಶಾಸನದಬದ್ಧ ಮತ್ತು ನಿಯಂತ್ರಕ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗವನ್ನು ಅನುಷ್ಠಾನಗೊಳಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಎನ್.ಬೆಳವಡಿ ಅವರು, ಮಹಾವಿದ್ಯಾಲಯ ಬೆಳೆದು ಬಂದ ಹಾದಿ ಮತ್ತು ಇಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಬೆಳವಣಿಗೆಯಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಕೊಡುಗೆಗಳ ಬಗ್ಗೆ ಮಾತನಾಡಿದರು.
ಡಾ. ಶಶಿಧರ್ ಎಮ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಯನ ಗೋಷ್ಠಿಯ ಸಂಘಟನಾ ಕಾರ್ಯದರ್ಶಿ ಡಾ. ಡಿ.ಜಿ.ಕೊಲ್ಮೆ ವೇದಿಕೆಯಲ್ಲಿದ್ದರು.
ಸಮ್ಮೇಳನಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಸುಮಾರು 50ಕ್ಕೂ ಅಧಿಕ ಆಯುರ್ವೇದ ವಿದ್ಯಾಲಯಗಳಿಂದ 500ಕ್ಕೂ ಅಧಿಕ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಅಧ್ಯಾಪಕರು ಭಾಗವಹಿಸಿದ್ದರು.
ಬ್ರಾಹ್ಮಿ, ಪುನರ್ನವ, ಜ್ಯೋತಿಷ್ಮತಿ ಹಾಗೂ ಅಶ್ವಗಂಧ ಎಂಬ ವೈಜ್ಞಾನಿಕ ವಿಭಾಗಗಳಲ್ಲಿ 100ಕ್ಕೂ ಅಧಿಕ ವೈಜ್ಞಾನಿಕ ಸಂಶೋಧನಾತ್ಮಕ ಪ್ರಬಂಧಗಳನ್ನು ಸಂಶೋಧಕರು ಆನ್‌ಲೈನ್ ಮೂಲಕ ಮಂಡಿಸಿದರು.
ಡಾ. ಸಪ್ನಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಡಾ. ಕುಮಾರ ಚೌಡಪ್ಪ ವಂದಿಸಿದರು. ಡಾ. ಸುಮೈ ಹಾಗೂ ಡಾ. ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.