
ಲಕ್ಷ್ಮೇಶ್ವರ: ವೀರರಾಣಿ ಕಿತ್ತೂರ ಚನ್ನಮ್ಮ ಜಯಂತ್ಯುತ್ಸವ ಆಚರಿಸಲು ನಿರ್ಲಕ್ಷ್ಯ ತೋರಿದ ತಹಶೀಲ್ದಾರ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಪಂಚಮಸಾಲಿ ಸಮಾಜ ಹಾಗೂ ವಿವಿಧ ಸಂಘಟನೆ ಸದಸ್ಯರು ಗುರುವಾರ ಅಹೋರಾತ್ರಿ ಭಜನೆ ಮಾಡುತ್ತ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.
‘ಲಕ್ಷ್ಮೇಶ್ವರ ತಹಶೀಲ್ದಾರ್ ಚನ್ನಮ್ಮ ಜಯಂತಿ ಕುರಿತು ಪೂರ್ವಭಾವಿ ಸಭೆ ನಡೆಸಿಲ್ಲ. ಸ್ಥಳೀಯವಾಗಿಯೇ ಇದ್ದರೂ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಸರ್ಕಾರದ ಆದೇಶಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು’ ಎಂದು ಆರೋಪಿಸಿ ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಮಾಗಡಿ ನೇತೃತ್ವದಲ್ಲಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾ ಸ್ಥಳಕ್ಕೆ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್. ಭೇಟಿ ನೀಡಿ, ‘ಘಟನೆಗೆ ಸಂಬಂಧಿಸಿದಂತೆ ಕಚೇರಿಯ ಒಬ್ಬ ಸಿಬ್ಬಂದಿ ಅಮಾನತು ಹಾಗೂ ಇಬ್ಬರಿಗೆ ನೊಟೀಸ್ ನೀಡಲಾಗಿದೆ’ ಎಂದು ತಿಳಿಸಿದರು.
ಆದರೆ ಪ್ರತಿಭಟನಕಾರರು, ‘ತಹಶೀಲ್ದಾರ್ ಅವರನ್ನು ಅಮಾನತು ಮಾಡಬೇಕು’ ಎಂದು ಧರಣಿ ಮುಂದುವರೆಸಿದ್ದರು. ಗುರುವಾರ ರಾತ್ರಿಯಿಡಿ ಭಜನೆ ಮಾಡುತ್ತ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ‘ಜಯಂತಿ ಆಚರಣೆ ಸಂದರ್ಭದಲ್ಲಿ ಈ ರೀತಿ ಘಟನೆ ನಡೆಯದಂತೆ ತಹಶೀಲ್ದಾರ್‌ಗೆ ನಿರ್ದೇಶನ ನೀಡಬೇಕು’ ಎಂದರು.
ಚನ್ನಪ್ಪ ಜಗಲಿ ಮಾತನಾಡಿ, ‘ತಹಶೀಲ್ದಾರ್ ನಿರ್ಲಕ್ಷ್ಯದಿಂದ ಕೆಳ ಹಂತದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕೂಡಲೇ ಆದೇಶ ವಾಪಸ್ ಪಡೆಯಬೇಕು’ ಎಂದು ಮನವಿ ಮಾಡಿದರು.
ಅನ್ನಪೂರ್ಣ ಮಹಾಂತಶೆಟ್ಟರ, ಶಾರದಕ್ಕ ಮಹಾಂತಶೆಟ್ಟರ, ದೇವೇಂದ್ರಪ್ಪ ಮರಳಿಹಳ್ಳಿ, ವಿರುಪಾಕ್ಷಪ್ಪ ಅಣ್ಣಿಗೇರಿ, ಶಿವಯ್ಯ ಮಠಪತಿ, ಶರಣು ಗೋಡಿ, ಬಸವರಾಜ ಹೊಗೆಸೊಪ್ಪಿನ, ಮಂಜು ಮುಳಗುಂದ, ಹೊನ್ನಪ್ಪ ವಡ್ಡರ, ಮಂಜುನಾಥ ಗೌರಿ, ಫಕ್ಕಿರೇಶ ಕವಲೂರ, ಪ್ರವೀಣ ಬಾಳಿಕಾಯಿ, ಶಿವನಗೌಡ ಅಡರಕಟ್ಟಿ, ಗುರಪ್ಪ ಮುಳಗುಂದ, ಶಿವಜೋಗೆಪ್ಪ ಚಂದರಗಿ, ಬಸವಣ್ಣೆಪ್ಪ ನಂದೆಣ್ಣವರ, ಮಲ್ಲಿಕಾರ್ಜುನ ನೀರಾಲೂಟಿ, ಪ್ರಕಾಶ ಕಮಡೊಳ್ಳಿ, ಶಂಕರ ಬ್ಯಾಡಗಿ, ಶಿವು ಕಟಗಿ, ಚಂದ್ರು ಮಾಗಡಿ, ಅನ್ನಪೂರ್ಣ ಮೇಟಿ, ಅರುಣಾ ಕಣವಿ ಇದ್ದರು.
ತಹಶೀಲ್ದಾರ್ ವಿರುದ್ಧ ಶಿಸ್ತು ಕ್ರಮ
ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮ ಅವರನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕು. ಇಲ್ಲಿ ತಹಶೀಲ್ದಾರ್ ನಿರ್ಲಕ್ಷ್ಯ ಮೇಲ್ನೋಟಕ್ಕೆ ಸಾಬೀತಾಗಿದ್ದು ಅವರ ವಿರುದ್ದ ಶಿಸ್ತುಕ್ರಮ ಕೈಗೊಂಡು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಸದ್ಯ ಶಿರಹಟ್ಟಿ ತಹಶೀಲ್ದಾರ್‌ಗೆ ಪ್ರಭಾರ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.