ADVERTISEMENT

ವಿದ್ಯಾರ್ಥಿಗಳಿಗೆ ರಂಗಕಲೆ ಮಹತ್ವ ತಿಳಿಸಿ: ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ

‘ಪ್ರಥಮ ನಾಟಕೋದಯ ದಿನ’ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 4:23 IST
Last Updated 16 ನವೆಂಬರ್ 2021, 4:23 IST
ಯುವ ಕಲಾವಿದ ರಾಘವ ಕಮ್ಮಾರ ಅವರು ಶಾಂತಕವಿ ರಚಿಸಿದ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು
ಯುವ ಕಲಾವಿದ ರಾಘವ ಕಮ್ಮಾರ ಅವರು ಶಾಂತಕವಿ ರಚಿಸಿದ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು   

ಗದಗ: ‘ಕರ್ನಾಟಕ ನಾಟಕ ಪಿತಾಮಹ ಶಾಂತಕವಿ ಎಂದೇ ಪ್ರಸಿದ್ಧರಾದ ಸಕ್ಕರಿ ಬಾಳಾಚಾರ್ಯ ಅವರ ಸಾಧನೆಗಳನ್ನು ಬಿಂಬಿಸುವ ವಿಚಾರ ಸಂಕಿರಣ, ಅವರು ರಚಿಸಿದ ನಾಟಕಗಳ ಪ್ರದರ್ಶನ ಹಾಗೂ ಸ್ಮರಣೋತ್ಸವ ಕಾರ್ಯಕ್ರಮಗಳನ್ನು ನಾಟಕ ಅಕಾಡೆಮಿ ವತಿಯಿಂದ ಆಯೋಜಿಸಲಾಗುವುದು’ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ ಆರ್. ತಿಳಿಸಿದರು.

ಧಾರವಾಡದ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್‌ ಹಾಗೂ ಗದುಗಿನ ವಿಶ್ವಂ ಹೊಂಬಾಳಿ ಪ್ರತಿಷ್ಠಾನದ ಹೊಂಬಾಳಿ ಕಲಾ ಅಕಾಡೆಮಿ ಸಹಯೋಗದಲ್ಲಿ ನಗರದ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ‘ಪ್ರಥಮ ನಾಟಕೋದಯ ದಿನ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗದಗ ರಂಗಭೂಮಿಯ ಕರ್ಮಭೂಮಿಯಾಗಿದ್ದು ಅನೇಕ ವೃತ್ತಿ ರಂಗಭೂಮಿ ಕಂಪನಿಗಳು ಮತ್ತು ಹವ್ಯಾಸಿ ರಂಗ ಸಂಘಟನೆಗಳ ಕೇಂದ್ರವಾಗಿದೆ. ಇಲ್ಲಿ ನಾಟಕ ಅಕಾಡೆಮಿ ವತಿಯಿಂದ ರಂಗಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳಿಗೆ ರಂಗಕಲೆ ಮಹತ್ವ ತಿಳಿಸಿಕೊಡಬೇಕು’ ಎಂದು ಹೇಳಿದರು.

ADVERTISEMENT

ಹಿರಿಯ ರಂಗಕರ್ಮಿ ಹರ್ಷ ಡಂಬಳ ಅವರು ‘ಸಕ್ಕರಿ ಬಾಳಾಚಾರ್ಯರ ಜೀವನ ಮತ್ತು ಸಾಧನೆ’ ಕುರಿತು ಮಾತನಾಡಿ, ‘ಕನ್ನಡದ ಪ್ರಥಮ ನಾಟಕ ಪ್ರದರ್ಶನ ಆರಂಭಗೊಂಡ ಗದುಗಿನಲ್ಲಿ ಸಕ್ಕರಿ ಬಾಳಾಚಾರ್ಯರ ಪ್ರತಿಮೆ ಮತ್ತು ಸ್ಮಾರಕ ಭವನ ನಿರ್ಮಾಣವಾಗಬೇಕು. ಕನ್ನಡ ಭಾಷೆಯ ಸೊಗಸನ್ನು ನಾಟಕಗಳ ಮೂಲಕ ಮಾತ್ರವಲ್ಲದೇ ‘ಗಜೇಂದ್ರಮೋಕ್ಷ’ದಂತಹ ಕನ್ನಡ ಪ್ರಥಮ ಕೀರ್ತನೆಗಳ ಮೂಲಕ ತೋರಿಸಿಕೊಟ್ಟ ಶಾಂತಕವಿಗಳ ಸಾಧನೆಯನ್ನು ಪ್ರಶಿಕ್ಷಣಾರ್ಥಿಗಳು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು’ ಎಂದು ಹೇಳಿದರು.

ಹಿರಿಯ ಸಾಹಿತಿ ಪ್ರೊ.ಅನ್ನದಾನಿ ಹಿರೇಮಠ ಅವರು ‘ಗದುಗಿನ ಸಮಕಾಲೀನ ರಂಗ ಚಟುವಟಿಕೆಗಳು’ ಕುರಿತು ಮಾತನಾಡಿ, ‘ಗದುಗಿನಲ್ಲಿ ಅಭಿನಯ ರಂಗ, ಆರ್.ಎನ್.ಕೆ. ಮಿತ್ರಮಂಡಳಿ ಸೇರಿದಂತೆ ಹಲವಾರು ಹವ್ಯಾಸಿ ರಂಗಭೂಮಿ ಸಂಘಟನೆಗಳು ಮತ್ತು ಅನೇಕ ಕಂಪನಿ ನಾಟಕಗಳು ರಂಗಭೂಮಿಯನ್ನು ಜೀವಂತವಾಗಿರಿಸಿವೆ’ ಎಂದು ಹೇಳಿದರು.

ಯುವ ಕಲಾವಿದ ರಾಘವ ಕಮ್ಮಾರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು. ಹೊಂಬಾಳಿ ಕಲಾ ಅಕಾಡೆಮಿ ಅಧ್ಯಕ್ಷೆ ಮಂಜರಿ ಹೊಂಬಾಳಿ ಸ್ವಾಗತಿಸಿದರು. ಟ್ರಸ್ಟ್‌ ಅಧ್ಯಕ್ಷ ಎಸ್. ಬಾಬುರಾವ್ ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು. ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ಪ್ರಾಂಶುಪಾಲ ಗಂಗಾಪವಾರ ವೇದಿಕೆಯ ಮೇಲಿದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಅರವಿಂದ ಕುಲಕರ್ಣಿ ವಂದಿಸಿದರು.

ಟ್ರಸ್ಟ್‌ನ ಸದಸ್ಯರಾದ ಸಕ್ಕರಿ ಹನಮಂತಾಚಾರ್ಯ, ಸಮೀರ ಜೋಶಿ, ಹಿರಿಯ ರಂಗಕರ್ಮಿ ಆರ್.ಎನ್. ಕುಲಕರ್ಣಿ, ಕೆ.ಡಿ. ನಾಡಿಗೇರ, ಎಸ್.ಬಿ. ಕುಲಕರ್ಣಿ, ವಿ.ಪಿ. ಪಾಟೀಲ, ಚೆನ್ನಪ್ಪಗೌಡರ, ಬಿ.ಬಿ. ಮಿರ್ಜಿ, ಕಿಶೋರ ನಾಗರಕಟ್ಟಿ, ದೀಪ್ತಿ ಪಾಠಕ್ ಇದ್ದರು.

‘ಕನ್ನಡದ ಮಹತ್ವದ ನಾಟಕಕಾರ’

ರಂಗಕರ್ಮಿ ಪ್ರಕಾಶ ಗರುಡ ‘ವೃತ್ತಿ ರಂಗಭೂಮಿಯ ಸ್ವರೂಪ’ ಕುರಿತು ಮಾತನಾಡಿ, ‘ಸಕ್ಕರಿ ಬಾಳಾಚಾರ್ಯರು ಕೇವಲ ನಾಟಕ ಪ್ರದರ್ಶನವನ್ನಷ್ಟೇ ಅಲ್ಲ; ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ರಂಗ ಚಳವಳಿಯನ್ನೇ ಪ್ರಾರಂಭಿಸಿದರು. ಪರೋಕ್ಷವಾಗಿ ‘ಉಷಾಹರಣ’ದಂತಹ ಅವರ ನಾಟಕಗಳು ರಾಷ್ಟ್ರೀಯ ಚಳವಳಿಗೆ ಪ್ರೇರಕವಾದವು. ಸಂಸ್ಕೃತ ಮತ್ತು ಮರಾಠಿ ಅನುವಾದದ ಕಾಲದಲ್ಲಿ ಶುದ್ಧ ಕನ್ನಡದಲ್ಲಿ 70 ನಾಟಕಗಳನ್ನು ರಚಿಸಿದ ಸಕ್ಕರಿ ಬಾಳಾಚಾರ್ಯರು ಕನ್ನಡದ ಮಹತ್ವದ ನಾಟಕಕಾರರಾಗಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.