ADVERTISEMENT

ಮುಂಡರಗಿ: ಆತಂಕ ಮೂಡಿಸಿದ ಸೇತುವೆ ಕುಸಿತ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 11:36 IST
Last Updated 23 ಸೆಪ್ಟೆಂಬರ್ 2020, 11:36 IST
ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಬೃಹತ್ ಸೇತುವೆಯ ಕೊನೆಯ ಭಾಗ ಬುಧವಾರ ಕುಸಿದಿತ್ತು
ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಬೃಹತ್ ಸೇತುವೆಯ ಕೊನೆಯ ಭಾಗ ಬುಧವಾರ ಕುಸಿದಿತ್ತು   

ಮುಂಡರಗಿ (ಗದಗ ಜಿಲ್ಲೆ): ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೃಹತ್ ಸೇತುವೆಯ ಅಲ್ಪಭಾಗ ಬುಧವಾರ ಬೆಳಗಿನ ಜಾವ ಕುಸಿದಿದೆ. ಇದರಿಂದಾಗಿ ಮಧ್ಯಾಹ್ನದವರೆಗೂ ಸೇತುವೆಯ ಮೇಲಿನ ಎಲ್ಲ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

ಶಿವಮೊಗ್ಗ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಇತ್ತೀಚಿಗೆ ಭಾರಿಮಳೆ ಸುರಿಯುತ್ತಿದ್ದು, ತುಂಗಭದ್ರಾ ನದಿಗೆ ನಿತ್ಯ ಅಪಾರ ಪ್ರಮಾಣದ ನೀರು ಹರಿದು ಬರುತ್ತಲಿದೆ. ನದಿ ದಂಡೆಯ ಆಚೆ ಬದಿಯ (ಹೂವಿನಹಡಗಲಿ ತಾಲ್ಲೂಕಿನ ಮದಲಗಟ್ಟಿ ಹತ್ತಿರ) ಸೇತುವೆಯ ಕೊನೆಯ ಭಾಗದಲ್ಲಿ ಸುಮಾರು ಒಂದು ಅಡಿ ಕಾಂಕ್ರೀಟ್‌ ರಸ್ತೆಯು ಕೆಳಗೆ ಕುಸಿದಿತ್ತು.

ಬೆಳಗಿನ ಜಾವ ಸೇತುವೆ ಕೊನೆಯ ಹಂತ ಕುಸಿದಿರುವುದನ್ನು ಗಮನಿಸದೆ ವೇಗವಾಗಿ ಬಂದ ಕೆಲವು ವಾಹನಗಳಿಗೆ ಜಖಂ ಆಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ತುಂಗಭದ್ರಾ ನದಿಗೆ 2002 ರಲ್ಲಿ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಮೊದಲಾದ ಭಾಗಗಳಿಗೆ ನೇರ ಸಂಪರ್ಕ ಕಲ್ಪಿಸುತ್ತಿದ್ದು, ನಿತ್ಯ ಸಾವಿರಾರು ಸಣ್ಣ, ಮಧ್ಯಮ ಹಾಗೂ ಬೃಹತ್ ಗಾತ್ರದ ವಿವಿಧ ಬಗೆಯ ವಾಹನಗಳು ಸೇತುವೆಯ ಮೇಲೆ ಸಂಚರಿಸುತ್ತವೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ದುರಸ್ತಿ ಕಾರ್ಯ ಕೈಗೊಂಡರು. ಮಧ್ಯಾಹ್ನ ಎರಡುಗಂಟೆಗೆ ಒಂದು ಬದಿಯ ಸೇತುವೆಯನ್ನು ಸರಿಪಡಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

'ಸೇತುವೆಯನ್ನು ಸುಮಾರು 18ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಈ ವರ್ಷ ಹೆಚ್ಚು ಮಳೆ ಸುರಿದಿದ್ದರಿಂದ ಮತ್ತು ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಸೇತುವೆಯ ಕೊನೆಯ ಭಾಗ ಕುಸಿದಿದೆ. ಸೇತುವೆಯ ದುರಸ್ತಿಗೆ ಅಗತ್ಯ ಕ್ರಮಗಳನ್ನು ಕೈಕೊಳ್ಳಲಾಗಿದೆ' ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮಂಜುನಾಥ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.