ಗಜೇಂದ್ರಗಡ: ತಾಲ್ಲೂಕಿನಲ್ಲಿ ಯಾವುದೇ ನದಿ, ಕಾಲುವೆಗಳು ಹಾಯ್ದು ಹೋಗಿಲ್ಲ. ಕೃಷಿಗೆ ಹೇಳಿಕೊಳ್ಳುವಂಥ ಯಾವುದೇ ಜಲಮೂಲಗಳಿಲ್ಲ. ತಾಲ್ಲೂಕಿನ ಬಹುತೇಕ ರೈತರು ಒಣ ಬೇಸಾಯ ಹಾಗೂ ಕೊಳವೆಬಾವಿ ನೀರಿನಿಂದ ನೀರಾವರಿ ಮಾಡುತ್ತಿದ್ದಾರೆ. ಕೊಳವೆಬಾವಿಗಳಿಗೆ ಜಲ ಮರುಪೂರಣ ಮಾಡುವ ತಾಲ್ಲೂಕಿನ ಬೃಹತ್ ಕೆರೆಗಳು ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಮಳೆಗಾಲದಲ್ಲಿ ಮಳೆ ನೀರನ್ನೂ ಸಂಗ್ರಹಿಸಿಟ್ಟುಕೊಳ್ಳದಷ್ಟು ಹೂಳು ತುಂಬಿಕೊಂಡು, ಕೆರೆ ಅಂಗಳದಲ್ಲಿ ಜಾಲಿ ಕಂಟಿಗಳು ಬೆಳೆದು ನಿಂತಿವೆ.
ಗಜೇಂದ್ರಗಡದ ಇಂಗು ಕೆರೆ, ಬೆಣಸಮಟ್ಟಿ ಕೆರೆ, ನಾಗೇಂದ್ರಗಡ ಕೆರೆ, ಜಿಗೇರಿ ಕೆರೆ ಗಜೇಂದ್ರಗಡ ತಾಲ್ಲೂಕಿನ ನಾಲ್ಕು ಬೃಹತ್ ಕೆರೆಗಳು ಹಾಗೂ ಕುಂಟೋಜಿಯ ಕೊಳ್ಳದ ಕೆರೆ, ವದೇಗೋಳದ ಕೆರೆಗಳು ಗುಡ್ಡದ ಅಡಿಯಲ್ಲಿದ್ದು, ಮಳೆಗಾಲದಲ್ಲಿ ಗುಡ್ಡದಿಂದ ಹರಿದು ಬರುವ ನೀರು ಈ ಕೆರೆಗಳಿಗೆ ಜಲ ಮೂಲವಾಗಿದೆ.
ಈ ಕೆರೆಗಳು ತುಂಬಿದರೆ ಮಾತ್ರ ಸುತ್ತಲಿನ ಗ್ರಾಮಗಳಲ್ಲಿರುವ ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ. ಆದರೆ ಈ ಕೆರೆಗಳಲ್ಲಿ ಹಲವು ದಶಕಗಳಿಂದ ಹೂಳು ತುಂಬಿಕೊಂಡು, ಮುಳ್ಳು ಕಂಟಿಗಳು ಬೆಳೆದಿವೆ. ಅಲ್ಲದೆ ನಾಗರಸಕೊಪ್ಪ ಕೆರೆ, ಮ್ಯಾಕಲಝರಿ ಕೆರೆ ಸೇರಿದಂತೆ ಹಲವು ಕೆರೆಗಳು ಕಾಯಕಲ್ಪವಿಲ್ಲದೇ ಮುಳ್ಳುಕಂಟಿಗಳು ಬೆಳೆದು ನಿಂತಿವೆ. ಕೆರೆಯ ಒಡ್ಡಿನ ಮೇಲೆ ಬೆಳೆದಿರುವ ಮುಳ್ಳು ಕಂಟಿಗಳಿಂದ ಮಳೆಗಾಲದಲ್ಲಿ ಕೆರೆಯಲ್ಲಿ ಸಂಗ್ರಹವಾಗುವ ನೀರು ಮುಳ್ಳು, ಕಂಟಿ ಬೇರುಗಳ ಮೂಲಕ ಹರಿದು ಪೋಲಾಗುವ ಅಪಾಯವಿದೆ.
ಸದ್ಯ ಎಲ್ಲೆಡೆ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿದ್ದು, ಜನರು ಜಲಮೂಲಗಳಾದ ಹಳ್ಳ, ಕಲ್ಯಾಣಿ, ಕೆರೆಗಳ ಹೂಳು ತೆಗೆದು ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ ಗಜೇಂದ್ರಗಡ ಸುತ್ತಲಿನ ಕೆರೆಗಳಿಗೆ ಮಾತ್ರ ಹೂಳೆತ್ತುವ ಭಾಗ್ಯ ದೊರೆಯುತ್ತಿಲ್ಲ. ಒಂದೂವರೆ ದಶಕದ ಹಿಂದೆ ಜಿಗೇರಿ ಕೆರೆಯಲ್ಲಿ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕೆರೆಯ ಹೂಳೆತ್ತಿ ತಮ್ಮ ಹೊಲಗಳಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದರು. ಆದರೆ ಕೆಲವರು ಕೆರೆಯಲ್ಲಿ ಮರಳು ತೆಗೆಯುತ್ತಿದ್ದಾರೆ ಎಂದು ದೂರಿದ ಕಾರಣ ಆ ಕಾರ್ಯ ಅಲ್ಲಿಗೆ ನಿಂತಿತು. ಇನ್ನಾದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಕೆರೆಗಳ ಹೂಳು ತೆಗೆಸಿ ನೀರು ತುಂಬಿಸುವ ಕೆಲಸ ಮಾಡಲಿ ಎಂಬುದು ಈ ಭಾಗದ ರೈತರ ಆಶಯವಾಗಿದೆ.
ನೆಪ ಮಾತ್ರಕ್ಕೆ ನರೇಗಾ ಕಾಮಗಾರಿಗಳು: ಆರೋಪ
ಮಳೆಗಾಲದಲ್ಲಿ ಬಿದ್ದ ಮಳೆ ನೀರನ್ನು ಪೋಲಾಗಿ ಹರಿದು ಹೋಗದಂತೆ ಭೂಮಿಯಲ್ಲಿ ಇಂಗಿಸುವ ನಿಟ್ಟಿನಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಯೋಜನೆ ಮೂಲಕ ಚೆಕ್ ಡ್ಯಾಂ ಹಳ್ಳ ಕೆರೆಗಳ ಹೂಳೆತ್ತುವುದು ಬದು ನಿರ್ಮಾಣ ಇಂಗು ಗುಂಡಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸುವ ಮೂಲಕ ಮಳೆಯಾದರೆ ಅಪಾರ ಪ್ರಮಾಣದ ಜಲರಾಶಿಯನ್ನು ಸಂಗ್ರಹಿಸಿ ಭೂಮಿಯಲ್ಲಿ ಇಂಗಿಸುವ ಕೆಲಸ ನಡೆಯುತ್ತಿದೆ. ಅಲ್ಲದೆ ಅಮೃತ ಸರೋವರ ಯೋಜನೆಗಳ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡುವ ಕೆಲಸಗಳು ನಡೆಯುತ್ತಿವೆ. ಆದರೆ ಬಹುತೇಕ ಕಾಮಗಾರಿಗಳು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ನೆಪ ಮಾತ್ರಕ್ಕೆ ನಡೆಯುತ್ತಿವೆ. ಯೋಜನೆಗಳ ಉದ್ದೇಶ ಈಡೇರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ರೈತರಿಗೆ ವರವಾದ ಕೃಷಿ ಹೊಂಡ
ಸಮರ್ಪಕ ಮಳೆಯಾಗದ ಸಂದರ್ಭದಲ್ಲಿ ಬೆಳೆ ಬರದೆ ನಷ್ಟ ಅನುಭವಿಸುತ್ತಿದ್ದ ರೈತರಿಗೆ ನಾಲ್ಕೈದು ವರ್ಷಗಳ ಹಿಂದೆ ಕೃಷಿ ಇಲಾಖೆಯಿಂದ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳು ವರದಾನವಾಗಿವೆ. ಮುಂಗಾರು ಹಿಂಗಾರಿನಲ್ಲಿ ಬೆಳೆಗಳು ಬೆಳೆದು ನಿಂತಾಗ ಮಳೆಯಾಗದಿದ್ದಾಗ ರೈತರು ಕೃಷಿ ಹೊಂಡದಲ್ಲಿ ಸಂಗ್ರಹವಾಗಿರುವ ಮಳೆ ನೀರನ್ನು ಆಯಿಲ್ ಎಂಜಿನ್ ಮೂಲಕ ಬೆಳೆಗಳಿಗೆ ಹಾಯಿಸಿ ಬೆಳೆ ರಕ್ಷಿಸಿಕೊಳ್ಳುತ್ತಿದ್ದು ಇಳುವರಿ ಕುಂಠಿತವಾಗುವುದು ತಪ್ಪುತ್ತಿದೆ. ರೈತರು ತಮ್ಮ ಎರಿ (ಕಪ್ಪು) ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳು ಮಳೆ ಕೈಕೊಟ್ಟಾಗ ಬೆಳೆಗಳಿಗೆ ನೀರುಣಿಸುವ ಜೊತೆಗೆ ಮಳೆಗಾಲದಲ್ಲಿ ಮಣ್ಣಿನ ಸವಕಳಿ ತಪ್ಪಿಸುತ್ತಿವೆ.
ಶೀಘ್ರದಲ್ಲಿ ಗಜೇಂದ್ರಗಡ ಭಾಗದ ಕೆರೆಗಳನ್ನು ತುಂಬಿಸುವ ಕಾರ್ಯ ಆರಂಭ
ಗಜೇಂದ್ರಗಡ ಭಾಗದ ಕೆರೆಗಳ ಸರ್ವೆ (ಹದ್ದಬಸ್ತು) ಮಾಡಿ ನಿಖರ ವಿಸ್ತೀರ್ಣದ ಕುರಿತು ಮಾಹಿತಿ ನೀಡುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗಿದೆ. ಕೃಷ್ಣಾ ಬಿ ಸ್ಕೀಂ ಯೋಜನೆ ಅಡಿಯಲ್ಲಿ ₹ 112 ಕೋಟಿ ವೆಚ್ಚದಲ್ಲಿ ಗಜೇಂದ್ರಗಡ ಭಾಗದ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಹಂತದಲ್ಲಿದೆ. ಅಲ್ಲದೆ ₹ 40 ಕೋಟಿ ವೆಚ್ಚದಲ್ಲಿ ನರೇಗಲ್ ಭಾಗದ ತೋಟಗಂಟಿ ಕೋಚಲಾಪುರ ಅಬ್ಬಿಗೇರಿ ಭಾಗದ ಕೆರೆಗಳಿಗೆ ಕಾಲುವೆ ಮೂಲಕ ಮಲಪ್ರಭಾ ನದಿ ನೀರು ಹರಿಸಿ ತುಂಬಿಸುವ ಯೋಜನೆಗೆ ಅನುಮೋದನೆ ದೊರೆತಿದೆ. ಶೀಘ್ರದಲ್ಲಿಯೇ ಗಜೇಂದ್ರಗಡ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು.–ಜಿ.ಎಸ್. ಪಾಟೀಲ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ರೋಣ.
ಅಧಿಕಾರಿಗಳು ಏನಂತಾರೆ?
ಅನುಮೋದನೆ ದೊರೆತ ಬಳಿಕ ಅನುಷ್ಠಾನ ಗಜೇಂದ್ರಗಡ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 8 ಕೆರೆಗಳಿವೆ. ಅವುಗಳಲ್ಲಿ ಕೆರೆ ತುಂಬಿಸುವ ಯೋಜನೆಯಲ್ಲಿ ನಾಗೇಂದ್ರಗಡ ಕೆರೆ ಒಳಗೊಂಡಿದೆ. ಉಳಿದ ಕೆರೆಗಳನ್ನು ತುಂಬಿಸುವ ಯೋಜನೆ ಅನುಮೋದನೆ ಹಂತದಲ್ಲಿದ್ದು ಅನುಮೋದನೆ ದೊರೆತ ಬಳಿಕ ಪ್ರಮುಖ ನೀರಾವರಿ ಇಲಾಖೆ ಅನುಷ್ಠಾನಗೊಳಿಸಲಿದೆ.
–ಮುರಳೀಧರ ಪಾಟೀಲ, ಎಇಇ ಸಣ್ಣ ನೀರಾವರಿ ಇಲಾಖೆ
____
ಅಮೃತ ಸರೋವರ ಯೋಜನೆಯಲ್ಲಿ ಕೆರೆಗಳ ಅಭಿವೃದ್ಧಿ ಗಜೇಂದ್ರಗಡ ತಾಲ್ಲೂಕಿನ ನಾಗೇಂದ್ರಗಡ ಮ್ಯಾಕಲಝರಿ ಹಾಲಕೆರೆ ನಾಗರಸಕೊಪ್ಪ ಸರ್ಜಾಪುರ ಮಾಟರಂಗಿ ಸೇರಿದಂತೆ ಹಲವು ಕೆರೆಗಳನ್ನು ಅಮೃತ ಸರೋವರ ಯೋಜನೆ ಮೂಲಕ ಕೆರೆ ಅಂಗಳ ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಕೆಲವು ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ.
–ಬಸವರಾಜ ಬಡಿಗೇರ, ಸಹಾಯಕ ನಿರ್ದೇಶಕ (ಪಂ.ಇ)
____
ಗಜೇಂದ್ರಗಡ ಕೆರೆ ತುಂಬಿದರೆ ಮಾನವ-ವನ್ಯಜೀವಿ ಸಂಘರ್ಷ ಇಳಿಕೆ ಗಜೇಂದ್ರಗಡ ತಾಲ್ಲೂಕಿನ ನೆಲ್ಲೂರ ಶಾಂತಗೇರಿ ಪ್ಯಾಟಿ ಕಲ್ಲಿಗನೂರ ಗ್ರಾಮಗಳ ಗುಡ್ಡದ ಮೇಲೆ ಕೆರೆಗಳನ್ನು ನಿರ್ಮಿಸಲಾಗಿದ್ದು ಅವುಗಳಿಂದ ಪ್ರಾಣಿ-ಪಕ್ಷಿಗಳ ದಾಹ ತೀರುತ್ತಿದೆ. ಕೆರೆಗಳ ಹೂಳು ತೆಗೆದು ನೀರು ತುಂಬುವಂತೆ ಮಾಡುವುದರಿಂದ ಬೇಸಿಗೆಯಲ್ಲಿ ವನ್ಯಜೀವಿಗಳು ದಾಹ ತೀರಿಸಿಕೊಳ್ಳಲು ರೈತರ ಜಮೀನುಗಳಿಗೆ ಊರುಗಳತ್ತ ಬರುವುದು ನಿಲ್ಲುತ್ತದೆ. ಇದರಿಂದ ಮಾನವ-ವನ್ಯಜೀವಿ ಸಂಘರ್ಷ ಕಡಿಮೆಯಾಗುತ್ತದೆ.
–ವೀರೇಂದ್ರ ಮರಿಬಸಣ್ಣವರ ವಲಯ ಅರಣ್ಯ ಅಧಿಕಾರಿ
ಜನರು ಏನಂತಾರೆ?
ಕೆರೆ ತುಂಬಿದರೆ ಅಂತರ್ಜಲ ವೃದ್ಧಿ ಬೆಣಸಮಟ್ಟಿ ಹಾಗೂ ಮ್ಯಾಕಲಝರಿ ಕೆರೆಗಳು ತುಂಬಿದರೆ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಲ್ಲಿರುವ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚುತ್ತದೆ. ಇದರಿಂದ ನೀರಾವರಿಗೆ ಅನುಕೂಲವಾಗುತ್ತದೆ. ಹೀಗಾಗಿ ಸರ್ಕಾರ ಮತ್ತು ಶಾಸಕರು ಈ ಭಾಗದ ಕೆರೆಗಳನ್ನು ತುಂಬಿಸಲು ಮುಂದಾಗಬೇಕು.
–ಪರಪ್ಪ ತೊಂಡಿಹಾಳ ಬೆಣಸಮಟ್ಟಿ ಗ್ರಾಮದ ರೈತ
____
ಕೆರೆ ತುಂಬಿದರೆ ಜಾನುವಾರಿಗೆ ಅನುಕೂಲ ಬೃಹತ್ ಗಾತ್ರದ ಬೆಣಸಮಟ್ಟಿ ಕೆರೆ 2015ರಲ್ಲಿ ತುಂಬಿದ್ದು ಬಿಟ್ಟರೆ ಈವರೆಗೂ ತುಂಬಿಲ್ಲ. ಬೇಸಿಗೆಯಲ್ಲಿ ಒಣಗಿದ ಕೆರೆ ಅಂಗಳದಲ್ಲಿ ಅಲ್ಲಲ್ಲಿ ಸ್ವಲ್ಪ ನಿಂತಿರುವ ಕಲುಷಿತ ನೀರನ್ನು ಕುರಿಗಾಹಿಗಳು ಕುರಿಗಳಿಗೆ ಕುಡಿಸಿಕೊಂಡು ಹೋಗುವಂತಾಗಿದೆ. ಈ ಕೆರೆ ತುಂಬಿದರೆ ಬೇಸಿಗೆಯಲ್ಲಿ ದನ-ಕರು ಕುರಿಗಳಿಗೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಲಭಿಸುತ್ತದೆ.
–ಅರ್ಜುನ ಪೂಜಾರ ಬೆಣಸಮಟ್ಟಿ ಗ್ರಾಮದ ರೈತ
____
ವಿಂಡ್ ಫ್ಯಾನ್ ಸೋಲಾರ್ ಅಳವಡಿಸುವುದು ಅಭಿವೃದ್ಧಿಯಲ್ಲ ಗಜೇಂದ್ರಗಡ ತಾಲ್ಲೂಕಿನಲ್ಲಿ ನೀರಾವರಿ ವ್ಯವಸ್ಥೆ ಇಲ್ಲದ ಪರಿಣಾಮ ಕೃಷಿ ಲಾಭದಾಯಕವಾಗಿಲ್ಲದ ಕಾರಣ ರೈತರು ತಮ್ಮ ಜಮೀನನ್ನು ಖಾಸಗಿ ಕಂಪನಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಶಾಸಕರು ಕ್ಷೇತ್ರದಲ್ಲಿ ಪವನ ವಿದ್ಯುತ್ ಫ್ಯಾನ್ ಸೋಲಾರ್ ಪ್ಲ್ಯಾಂಟ್ ಅಳವಡಿಸುವುದು ಅಭಿವೃದ್ಧಿಯೆಂದು ಪರಿಗಣಿಸದೆ ರೈತರಿಗೆ ಅನುಕೂಲವಾಗುವಂತ ಕೆರೆ ಹೂಳೆತ್ತುವ ಕೆರೆ ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಲಿ.
–ಎಂ.ಎಸ್.ಹಡಪದ, ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ
____
ಗಜೇಂದ್ರಗಡ ಮಳೆಗಾಲದಲ್ಲಾದರೂ ಕೆರೆ ತುಂಬಿಸಿ ಗಜೇಂದ್ರಗಡ ಭಾಗದ ಕೆರೆಗಳ ಹೂಳು ತೆಗೆದು ಮಳೆಗಾಲದಲ್ಲಿಯಾದರೂ ಈ ಭಾಗದ ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕಾರ್ಯದಲ್ಲಿ ಮುತುವರ್ಜಿ ವಹಿಸಬೇಕು.
–ಅಂದಪ್ಪ ಅಂಗಡಿ, ರೇಷ್ಮೆ ಉತ್ಪಾದಕ ಕಂಪನಿ ಜಿಲ್ಲಾಘಟಕದ ಉಪಾಧ್ಯಕ್ಷ
____
21 ಕೆರೆ ತುಂಬಿಸುವ ಯೋಜನೆಗೆ ಹಿಂದೆಯೇ ಚಾಲನೆ ಗಜೇಂದ್ರಗಡ ಭಾಗದ ರೈತರ ಕಲ್ಯಾಣಕ್ಕಾಗಿ ಈ ಹಿಂದೆ ಕಳಕಪ್ಪ ಬಂಡಿ ಅವರು ಶಾಸಕರಾಗಿದ್ದಾಗ ಕೃಷ್ಣಾ ಬಿ ಸ್ಕೀಂ ಯೋಜನೆ ಅಡಿಯಲ್ಲಿ ಅಂದಾಜು ₹250 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ 21 ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು.
–ಉಮೇಶ ಮಲ್ಲಾಪುರ ಅಧ್ಯಕ್ಷ ಬಿಜೆಪಿ ರೋಣ ಮಂಡಲ ಗಜೇಂದ್ರಗಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.