ADVERTISEMENT

ಸಮಾಜ ತಿದ್ದುವಲ್ಲಿ ನಾಟಕಗಳ ಪಾತ್ರ ಮಹತ್ವದ್ದು: ತೋಂಟದ ಸಿದ್ಧರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:06 IST
Last Updated 24 ಮೇ 2025, 14:06 IST
ಗದುಗಿನ ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ.ಪಾಟೀಲ ಉಪನ್ಯಾಸ ನೀಡಿದರು
ಗದುಗಿನ ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ.ಪಾಟೀಲ ಉಪನ್ಯಾಸ ನೀಡಿದರು   

ಗದಗ: ‘ಭಾವನೆಗಳು, ಸಂಭಾಷಣೆ ಮತ್ತು ಕ್ರಿಯೆಗಳ ಮೂಲಕ ಮಾನವ ಅನುಭವಗಳ ಚಿತ್ರಣವನ್ನು ಒಳಗೊಂಡಿರುವ ಪ್ರದರ್ಶನವೇ ನಾಟಕಕಲೆ. ಸಮಾಜವನ್ನು ತಿದ್ದುವಲ್ಲಿ ನಾಟಕಗಳ ಪಾತ್ರ ಮಹತ್ವದ್ದಾಗಿದೆ’ ಎಂದು ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಈಚೆಗೆ ನಡೆದ 2,746ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಕಲಾವಿದರು ಆಯಾ ಪಾತ್ರಗಳಿಗೆ ಜೀವ ತುಂಬಿ, ಸಮಾಜಕ್ಕೆ ಸಂದೇಶ ನೀಡುವ ಕೆಲಸ ಮಾಡುತ್ತಾರೆ. ಕಲಾವಿದ ತನ್ನ ಅಭಿನಯದ ಮೂಲಕ ಪ್ರೇಕ್ಷಕರ ಭಾವತಂತುವನ್ನು ಮೀಟಿದಾಗ ಉತ್ತಮ ನಟನಾಗುತ್ತಾನೆ. ಪ್ರೇಕ್ಷಕ ಒಳ್ಳೆಯದನ್ನು ಆಯ್ದುಕೊಂಡು ಕೆಟ್ಟದನ್ನು ಬಿಡಲು ಹಾಗೂ ಮನರಂಜನೆ ಪಡೆಯಲು ನಾಟಕಗಳು ಸಹಕಾರಿಯಾಗಿವೆ’ ಎಂದರು.

ADVERTISEMENT

ನಿವೃತ್ತ ಪ್ರಾಚಾರ್ಯ ಜಿ.ಬಿ.ಪಾಟೀಲ ಉಪನ್ಯಾಸ ನೀಡಿ, ‘ನಾಟಕಗಳು ಪೌರಾಣಿಕ ಕತೆ, ಕಾದಂಬರಿ ಆಧರಿತ, ಭಕ್ತಿ ಪ್ರಧಾನ ಸೇರಿದಂತೆ ವಿವಿಧ ವಿಷಯವಸ್ತುಗಳನ್ನು ಇಟ್ಟುಕೊಂಡು ಸಮಾಜ ಸುಧಾರಣೆ ಮಾಡಲು ಮೂಡಿಬಂದವು. ನಾಟಕಕಲೆಗೆ ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ಇದೆ’ ಎಂದು ತಿಳಿಸಿದರು.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರಚಿತ ‘ಮೋಳಿಗೆ ಮಾರಯ್ಯ’ ನಾಟಕವನ್ನು ಧಾತ್ರಿ ರಂಗ ಸಂಸ್ಥೆಯವರು ಪ್ರದರ್ಶಿಸಿದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ನಡೆಸಿಕೊಟ್ಟರು. ಐಶ್ವರ್ಯ ವಿ. ಕವಿಶೆಟ್ಟಿ ಧಾರ್ಮಿಕ ಗ್ರಂಥ ಪಠಿಸಿದರು. ಅಮೃತಾ ವಿ.ಕವಿಶೆಟ್ಟಿ ವಚನ ಚಿಂತನ ನಡೆಸಿಕೊಟ್ಟರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಇದ್ದರು.

ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ.ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.