ADVERTISEMENT

ಲಕ್ಷ್ಮೇಶ್ವರ ‌| ಬಸದಿಗೆ ಹೋಗಲು ದಾರಿಯೇ ಇಲ್ಲ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 14:36 IST
Last Updated 4 ಅಕ್ಟೋಬರ್ 2023, 14:36 IST
ಲಕ್ಷ್ಮೇಶ್ವರದ ಅನಂತನಾಥ ಬಸದಿ ಎದುರು ನಿಂತಿರುವ ವಾಹನಗಳು
ಲಕ್ಷ್ಮೇಶ್ವರದ ಅನಂತನಾಥ ಬಸದಿ ಎದುರು ನಿಂತಿರುವ ವಾಹನಗಳು   

ಲಕ್ಷ್ಮೇಶ್ವರ: ಇಲ್ಲಿನ ಇತಿಹಾಸ ಪ್ರಸಿದ್ಧ ಅನಂತನಾಥ ಬಸದಿಯ ಪ್ರವೇಶದ್ವಾರದ ಎದುರು ಅಕ್ಕಪಕ್ಕದ ರೈತರು ಕೃಷಿ ಸಲಕರಣೆಗಳನ್ನು ಇಡುತ್ತಿದ್ದಾರೆ. ದನಕರುಗಳನ್ನು ಕಟ್ಟಿ ಗಲೀಜು ಮಾಡುತ್ತಿದ್ದಾರೆ. ಇದರಿಂದಾಗಿ ಬಸದಿ ಒಳಗೆ ಹೋಗಲು ದಾರಿಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಟ್ಟಣದ ದಿಗಂಬರ ಸಮಾಜ ಬಾಂಧವರು ಆರೋಪಿಸಿದ್ದಾರೆ.

ಈ ಕುರಿತು ತಹಶೀಲ್ದಾರ್‌ಗೆ ಮನವಿ ಪತ್ರ ಬರೆದಿರುವ ಅವರು ‘ಪ್ರವೇಶ ದ್ವಾರದ ಎದುರು ಟ್ರ್ಯಾಕ್ಟರ್, ರಂಟಿ, ಕುಂಟಿ ಇಡುವುದರಿಂದ ಬಸದಿ ಪ್ರವೇಶಿಸಲು ಭಕ್ತರಿಗೆ ತೊಂದರೆ ಆಗುತ್ತಿದೆ. ಅನಂತನಾಥ ಬಸದಿ ತನ್ನದೇ ಆದ ಇತಿಹಾಸ ಹೊಂದಿದ್ದು, ಪ್ರತಿದಿನ ಜೈನ ಸಮಾಜದ ನೂರಾರು ಭಕ್ತರು ಬಸದಿಗೆ ಬರುತ್ತಾರೆ. ಆದರೆ ಪ್ರವೇಶ ದ್ವಾರದ ಹತ್ತಿರ ಯಾವಾಗಲೂ ಗಲೀಜು ವಾತಾವರಣ ಇರುತ್ತದೆ. ಹೀಗಾಗಿ ಭಕ್ತರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದ್ದಾರೆ.

ಬಸದಿ ಎದುರಿನಲ್ಲೇ ಈಚೆಗೆ ಕಣ್ಣಿನ ಆಸ್ಪತ್ರೆ ಆರಂಭವಾಗಿದ್ದು ಅಲ್ಲಿಗೆ ಬರುವ ಜನರು ಬೈಕ್‍ಗಳನ್ನು ಪ್ರವೇಶ ದ್ವಾರದ ಎದುರೇ ನಿಲ್ಲಿಸುತ್ತಿದ್ದಾರೆ. ಮತ್ತೊಂದು ಹೊಸ ಸಮಸ್ಯೆಯನ್ನು ಹುಟ್ಟು ಹಾಕಿದೆ. ಇತಿಹಾಸ ಪ್ರಸಿದ್ಧ ದೇವಸ್ಥಾನ, ಬಸದಿಗಳನ್ನು ರಕ್ಷಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿ. ಆದರೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪುರಸಭೆ ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಮಾಜ ಬಾಂಧವರು ಆರೋಪಿಸಿದರು.

ADVERTISEMENT

ಬಸದಿಯ ಪ್ರವೇಶ ದ್ವಾರದ ಎದುರು ಕೃಷಿ ಸಲಕರಣೆ, ದನಕರು ಕಟ್ಟುವುದನ್ನು ಬಂದ್ ಮಾಡಿಸಬೇಕು. ಮತ್ತು ದ್ವಿಚಕ್ರ ವಾಹನಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.