ADVERTISEMENT

ಮೂವರು ಸರಗಳ್ಳರ ಬಂಧನ: ₹11ಲಕ್ಷ ಮೌಲ್ಯದ ಆಭರಣ ವಶಕ್ಕೆ

ಗದಗ, ಲಕ್ಷ್ಮೇಶ್ವರ, ಬಾಗಲಕೋಟೆಯಲ್ಲಿ 10 ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 11:18 IST
Last Updated 7 ಜುಲೈ 2018, 11:18 IST
ಬಂಧಿತ ಆರೋಪಿಗಳೊಂದಿಗೆ ಗದಗ ಎಸ್ಪಿ ಕೆ.ಸಂತೋಷಬಾಬು, ಡಿವೈಎಸ್ಪಿ ವಿಜಯಕುಮಾರ ಟಿ. ಹಾಗೂ ಸಿಬ್ಬಂದಿ
ಬಂಧಿತ ಆರೋಪಿಗಳೊಂದಿಗೆ ಗದಗ ಎಸ್ಪಿ ಕೆ.ಸಂತೋಷಬಾಬು, ಡಿವೈಎಸ್ಪಿ ವಿಜಯಕುಮಾರ ಟಿ. ಹಾಗೂ ಸಿಬ್ಬಂದಿ   

ಗದಗ: ಗದಗ,ಲಕ್ಷ್ಮೇಶ್ವರ ಮತ್ತು ಬಾಗಲಕೋಟೆಯಲ್ಲಿ ನಡೆದಿದ್ದ 10 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರನ್ನು ಶುಕ್ರವಾರ ಇಲ್ಲಿ ಬಂಧಿಸಿರುವ ಪೊಲೀಸರು ಅಂದಾಜು ₨11 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಬಂಧಿತ ಮೂವರೂ ಕುಂದಗೋಳ ತಾಲ್ಲೂಕಿನವರು. ಕುಂದಗೊಳದ ಯಲಿವಾಳ ಗ್ರಾಮದ ನಿವಾಸಿ ಶಿವಕುಮಾರಗೌಡ ಹಿರೇಗೌಡ್ರ (24), ವಿಜಯಕುಮಾರ ಸಿ. ನವಲಗುಂದ (24) ಮತ್ತು ಇಂಗಳಗಿ ಗ್ರಾಮದ ನಿವಾಸಿ ಮಾಬುಲಿ ಮುಲ್ಲಾನವರ ಆರೋಪಿಗಳು.

ಶಿವಕುಮಾರಗೌಡ ಮತ್ತು ವಿಜಯಕುಮಾರ ಗದಗ ನಗರ ಠಾಣೆ ವ್ಯಾಪ್ತಿಯಲ್ಲಿ 3 ಮತ್ತು ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ನಡೆದ 2 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇವರಿಂದ ₨6 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₨3 ಲಕ್ಷ ಮೌಲ್ಯದ ಬೈಕ್‌ ವಶಕ್ಕೆ ಪಡೆಯಲಾಗಿದೆ. ಮಾಬುಲಿ ಮುಲ್ಲಾನವರ ಲಕ್ಷ್ಮೇಶ್ವರ ಪಟ್ಟಣ ವ್ಯಾಪ್ತಿಯಲ್ಲಿ 5 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನಿಂದ 165 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

‘ಬೆಳಿಗ್ಗೆ, ಸಂಜೆ ವಾಯುವಿಹಾರಕ್ಕೆ ಹೊರಟ ಒಂಟಿ ಮಹಿಳೆಯರನ್ನು ಗುರಿಯಾಗಿರಿಸಿ, ಬೈಕ್‌ನಲ್ಲಿ ಹಿಂಬಾಲಿಸಿ ಸರ ಕಿತ್ತುಕೊಂಡು ಹೋಗುತ್ತಿದ್ದರು. ಇವರ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಲಾಗಿತ್ತು. ಶುಕ್ರವಾರ ನಗರದಲ್ಲಿ ಸರಗಳ್ಳತನಕ್ಕೆ ಹೊಂಚು ಹಾಕಿ ಕಾಯುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿ ಬಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷಬಾಬು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.