ADVERTISEMENT

ಗದಗ: ಕೆ.ಜಿಗೆ ₹50ರ ಗಡಿ ದಾಟಿದ ಟೊಮೊಟೊ

ಮಳೆ ಕೊರತೆ, ತಗ್ಗಿದ ಆವಕ; ಹಣ್ಣು ತರಕಾರಿ ದುಬಾರಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 15:16 IST
Last Updated 16 ಜುಲೈ 2020, 15:16 IST
ಗದುಗಿನ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರ ನಿರೀಕ್ಷೆಯಲ್ಲಿ ಟೊಮೊಟೊ ವ್ಯಾಪಾರಿ
ಗದುಗಿನ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರ ನಿರೀಕ್ಷೆಯಲ್ಲಿ ಟೊಮೊಟೊ ವ್ಯಾಪಾರಿ   

ಗದಗ: ಲಾಕ್‌ಡೌನ್‌ ಪೂರ್ವದಲ್ಲಿ ಕೆ.ಜಿಗೆ ₹10ಕ್ಕೆ ಮಾರಾಟವಾಗುತ್ತಿದ್ದ ಟೊಮೊಟೊ ದರ, ವಾರದಿಂದ ಈಚೆಗೆ ₹50ರ ಗಡಿ ದಾಟಿದ್ದು, ಗ್ರಾಹಕರಿಗೆ ತೀವ್ರ ಹೊರೆಯಾಗಿ ಪರಿಣಮಿಸಿದೆ.

ಚಿಲ್ಲರೆ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೊಟೊವನ್ನು ₹60ರವರೆಗೆ ಮಾರಾಟ ಮಾಡುತ್ತಿದ್ದಾರೆ. ಟೊಮೊಟೊ ಜತೆಗೆ ಇತರೆ ತರಕಾರಿಗಳ ಬೆಲೆಯೂ ಏರಿಕೆಯಾಗಿರುವುದು ಗ್ರಾಹಕರ ಜೇಬು ಕರಗುವಂತೆ ಮಾಡಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಟೊಮೊಟೊ ಧಾರಣೆ ಹೆಚ್ಚಿರುತ್ತದೆ. ಮುಂಗಾರು ಪ್ರಾರಂಭವಾದ ನಂತರ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತದೆ. ಆದರೆ, ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಆರಂಭದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಬೆಳೆದಿಲ್ಲ. ಹೀಗಾಗಿ ಸ್ಥಳೀಯವಾಗಿ ತರಕಾರಿ ಕೊರತೆ ಉಂಟಾಗಿದೆ. ಜತೆಗೆ ಲಾಕ್‌ಡೌನ್‌ನಿಂದ ಬೇರೆ ಜಿಲ್ಲೆಗಳಿಂದಲೂ ತರಕಾರಿ ಆವಕ ನಿಂತಿದೆ.

ADVERTISEMENT

ಕಳೆದ ವರ್ಷ ಜುಲೈನಲ್ಲಿ ಒಂದೂವರೆ ಕೆ.ಜಿ ಟೊಮೊಟೊವನ್ನು ವ್ಯಾಪಾರಿಗಳು ₹10ಕ್ಕೆ ಮಾರಾಟ ಮಾಡುತ್ತಿದ್ದರು. ಆದರೆ, ಈ ಬಾರಿ ಅದರ ಐದು ಪಟ್ಟು ದರ ಏರಿಕೆಯಾಗಿದೆ. ಅರಸೀಕೆರೆ, ಕೋಲಾರ, ಕೊಪ್ಪಳ, ಹಾವೇರಿ, ಬಾಗಲಕೋಟೆ ಅಲ್ಲದೆ, ಸ್ಥಳೀಯವಾಗಿಯೂ ಮಾರುಕಟ್ಟೆಗೆ ಟೊಮೊಟೊ ಆವಕ ಗಣನೀಯವಾಗಿ ತಗ್ಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

‘ಸದ್ಯ 10 ಕೆ.ಜಿ ತೂಕದ ಒಂದು ಬಾಕ್ಸ್‌ ಗುಣಮಟ್ಟದ ಟೊಮೊಟೊಗೆ ₹400 ದರ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ನಾವು ಇದನ್ನು ಕೆ.ಜಿಗೆ ₹50ರಿಂದ ₹60ರವರೆಗೆ ಮಾರುತ್ತಿದ್ದೇವೆ’ ಎಂದು ಇಲ್ಲಿನ ತರಕಾರಿ ವ್ಯಾಪಾರಿ ಮಾಬುಸಾಬ್‌ ಲಕ್ಕುಂಡಿ ಹೇಳಿದರು.

‘ಮುಂಗಾರು ಆರಂಭದಲ್ಲಿ ಉತ್ತಮ ಮಳೆ ಲಭಿಸಿದ್ದರೆ ರೈತರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಿದ್ದರು. ಆದರೆ, ಈ ಬಾರಿ ಜಿಲ್ಲೆಯ ಹಲವೆಡೆ ಬಿತ್ತಿದ ಬೀಜಗಳು ಮೊಳಕೆಯೊಡೆಯುವಷ್ಟು ಪ್ರಮಾಣದಲ್ಲೂ ಮಳೆ ಲಭಿಸಲಿಲ್ಲ. ಹೀಗಾಗಿ ಗ್ರಾಹಕರ ಪಾಲಿಗೆ ತರಕಾರಿ ತುಟ್ಟಿಯಾಗಿದೆ.

ಪಟ್ಟಿ
ತರಕಾರಿ ದರ (₹ ಪ್ರತಿ ಕೆ.ಜಿಗೆ)
ಟೊಮೊಟೊ; 50
ಆಲೂಗಡ್ಡೆ; 30
ಈರುಳ್ಳಿ; 30
ಹಿರೇಕಾಯಿ; 40
ಚವಳಿಕಾಯಿ; 40
ಹಾಗಲಕಾಯಿ; 40
ಬೀನ್ಸ್;40
ಸೌತೆಕಾಯಿ;40
ಕ್ಯಾರೆಟ್‌; 40
ಮೆಣಸಿನಕಾಯಿ; 80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.